ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೊಮ್ಮೆ ತೀವ್ರಗೊಂಡಿದ್ದು, ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಜುಲೈ 30ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿದ್ದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಕರ್ನಾಟಕದ ಕೃಷ್ಣರಾಜಸಾಗರ (KRS) ಹಾಗೂ ಕಬಿನಿ ಜಲಾಶಯಗಳಿಂದ ತಮಗೆ ಬರಬೇಕಾದ ನೀರನ್ನು ತಕ್ಷಣ ಬಿಡುಗಡೆ ಮಾಡುವಂತೆ ರಾಜ್ಯಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಕೋರಿದೆ.
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರ, CWMA ಆದೇಶದಂತೆ ಆಗಸ್ಟ್ 12ರೊಳಗೆ ತಮಿಳುನಾಡಿಗೆ 4.536 ಟಿಎಂಸಿ ನೀರು ತಲುಪಬೇಕು ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ತಮಿಳುನಾಡಿನ ಅರ್ಜಿಯಲ್ಲಿ, ಜೂನ್ 1ರಿಂದ ಆಗಸ್ಟ್ 12ರವರೆಗೆ ಬಿಳಿಗುಂಡ್ಲು ಅಂತರರಾಜ್ಯ ಗಡಿಯಲ್ಲಿ ತಮಗೆ ಅಗತ್ಯ ಪ್ರಮಾಣದ ನೀರು ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ. ಕಾವೇರಿ ಜಲಾನಯನ ಪ್ರದೇಶದ ಪ್ರೊ-ರಾಟಾ (Pro-rata) ಸೂತ್ರದ ಪ್ರಕಾರ ಕರ್ನಾಟಕವು ತಕ್ಷಣವೇ 26.954 ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಇದಲ್ಲದೆ, ಕರ್ನಾಟಕದ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಮತ್ತು ಹರಿವನ್ನು ಪ್ರತಿ 10 ದಿನಗಳಿಗೊಮ್ಮೆ ಪರಿಶೀಲಿಸುವಂತೆ ಹಾಗೂ ತಮಿಳುನಾಡಿಗೆ ಮಾಸಿಕ ಮತ್ತು ದೈನಂದಿನ ಪಾಲಿನ ನೀರು ಸರಿಯಾಗಿ ಸಿಗುವಂತೆ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇದೇ ವೇಳೆ, ಕರ್ನಾಟಕದಲ್ಲಿ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದು, ಆಗಸ್ಟ್ 13ರ ಕರ್ನಾಟಕ ಬಂದ್ ಕುರಿತ ಚರ್ಚೆಗಳು ಜೋರಾಗಿವೆ. ಹೀಗಾಗಿ ಕಾವೇರಿ ವಿವಾದವು ಮತ್ತೊಮ್ಮೆ ಕಾನೂನು ಮತ್ತು ರಾಜಕೀಯವಾಗಿ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ.






