ಮುಂಬೈ: ಬಾಲಿವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ನಿರ್ದೇಶಕ ನಿತೇಶ್ ತಿವಾರಿ ಅವರ ಕನಸಿನ ಯೋಜನೆ ರಾಮಾಯಣ ಸಿನಿಮಾ ಬಿಡುಗಡೆಗೂ ಮುನ್ನವೇ ವಿವಾದದ ಸುಳಿಗೆ ಸಿಲುಕಿದೆ. ಬರೋಬ್ಬರಿ 4000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಈಗ ಶ್ರೀ ರಾಮಲೀಲಾ ಮಹಾಸಂಘ ಅಡ್ಡಗಾಲು ಹಾಕಿದ್ದು, ಚಿತ್ರತಂಡಕ್ಕೆ ಖಡಕ್ ಎಚ್ಚರಿಕೆ ನೀಡಿದೆ.
ಸಿನಿಮಾ ಬಿಡುಗಡೆಗೂ ಮುನ್ನ ನಮಗೆ ತೋರಿಸಿ
ಸಿನಿಮಾದಲ್ಲಿ ಸನಾತನ ಧರ್ಮದ ನಂಬಿಕೆಗಳಿಗೆ ಅಥವಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ದೃಶ್ಯಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಮಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಬೇಕು ಎಂದು ಶ್ರೀ ರಾಮಲೀಲಾ ಮಹಾಸಂಘದ ಅಧ್ಯಕ್ಷ ಅರ್ಜುನ್ ಕುಮಾರ್ ಆಗ್ರಹಿಸಿದ್ದಾರೆ. ಒಂದು ವೇಳೆ ಚಿತ್ರತಂಡ ಈ ಮನವಿಯನ್ನು ನಿರ್ಲಕ್ಷಿಸಿ ಸಿನಿಮಾ ಬಿಡುಗಡೆ ಮಾಡಿದರೆ, ದೇಶಾದ್ಯಂತ ಚಿತ್ರಮಂದಿರಗಳ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ರಣಬೀರ್ ಕಪೂರ್ ರಾಮನ ಪಾತ್ರಕ್ಕೆ ವೀಕ್
ಈ ವಿವಾದದ ನಡುವೆ ಸಂಘಟನೆಯು ನಟ ರಣಬೀರ್ ಕಪೂರ್ ಅವರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದೆ. ರಾಮನ ಪಾತ್ರಕ್ಕೆ ರಣಬೀರ್ ಕಪೂರ್ ತುಂಬಾ ವೀಕ್ ಎಂದು ನಮಗೆ ಅನಿಸುತ್ತಿದೆ. ಕೋಟ್ಯಂತರ ಜನರ ಆರಾಧ್ಯ ದೈವವಾಗಿರುವ ಶ್ರೀರಾಮನ ಪಾತ್ರಕ್ಕೆ ರಣಬೀರ್ ಎಷ್ಟು ನ್ಯಾಯ ಒದಗಿಸುತ್ತಾರೆ ಎಂಬ ಸಂಶಯ ನಮಗಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ. ಟ್ರೈಲರ್ ಮತ್ತು ಫೋಟೋಗಳನ್ನು ನೋಡಿದ ಮೇಲೆ ನಮಗೆ ಈ ಆತಂಕ ಶುರುವಾಗಿದೆ ಎಂದು ಅವರು ಹೇಳಿದ್ದಾರೆ.
ಆದಿಪುರುಷ್ ಸಿನಿಮಾ ನೀಡಿದ ಕಹಿ ನೆನಪು
ಹಿಂದೆ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದಲ್ಲಿ ರಾಮಾಯಣದ ಪಾತ್ರಗಳನ್ನು ತಪ್ಪಾಗಿ ಚಿತ್ರಿಸಲಾಗಿತ್ತು. ರಾವಣನ ಲುಕ್ ಮತ್ತು ಲಂಕೆಯನ್ನು ತೋರಿಸಿದ ರೀತಿ ಸನಾತನ ಸಂಸ್ಕೃತಿಗೆ ವಿರುದ್ಧವಾಗಿತ್ತು. ಅಂತಹ ತಪ್ಪುಗಳು ಈ ಸಿನಿಮಾದಲ್ಲಿ ಮರುಕಳಿಸಬಾರದು ಎಂಬುದು ನಮ್ಮ ಆಶಯ. ಧರ್ಮದ ಹೆಸರಿನಲ್ಲಿ ವ್ಯಾಪಾರ ಮಾಡಲು ನಾವು ಬಿಡುವುದಿಲ್ಲ ಎಂದು ಅರ್ಜುನ್ ಕುಮಾರ್ ಗುಡುಗಿದ್ದಾರೆ.
ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದರೆ, ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ರಾಕಿಂಗ್ ಸ್ಟಾರ್ ಯಶ್ ಇಲ್ಲಿ ಲಂಕೇಶ್ವರ ರಾವಣನ ಪಾತ್ರಕ್ಕೆ ಜೀವ ತುಂಬುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳಲಿದ್ದಾರೆ.
2026ರ ದೀಪಾವಳಿಗೆ ಈ ಸಿನಿಮಾ ತೆರೆಕಾಣಲು ಸಜ್ಜಾಗುತ್ತಿದೆ. ಆದರೆ ಆರಂಭದಲ್ಲೇ ಎದುರಾಗಿರುವ ಈ ವಿವಾದವನ್ನು ಚಿತ್ರತಂಡ ಹೇಗೆ ನಿಭಾಯಿಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ. ಚಿತ್ರತಂಡವು ಸಂಘಟನೆಯ ಬೇಡಿಕೆಗೆ ಮಣಿದು ವಿಶೇಷ ಪ್ರದರ್ಶನ ಏರ್ಪಡಿಸುತ್ತದೆಯೇ ಅಥವಾ ವಿವಾದದ ನಡುವೆಯೇ ಮುನ್ನುಗ್ಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.







