ಬೆಳಗಾವಿ: ಕುಂದಾನಗರಿ ಬೆಳಗಾವಿ (Belagaviಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ (Congress) ಸಮಾವೇಶಕ್ಕೆ ರಾಹುಲ್ ಗಾಂಧಿ ಗೈರಾಗಿದ್ದಾರೆ.
ಮಂಗಳವಾರ (ಜ.21) ಅಯೋಜಿಸಲಾಗಿರುವ ‘ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ’ ಸಮಾವೇಶ ಹಲವು ನಿರೀಕ್ಷೆ ಮತ್ತು ಕುತೂಹಲಗಳಿಗೆ ಕಾರಣವಾಗಿದ್ದು, ರಾಹುಲ್ ಗಾಂಧಿ ಗೈರಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿಯ ಸಿಪಿಇಡಿ ಮೈದಾನವು ‘ಜೈ ಬಾಪು ಜೈ ಭೀಮ್ ಮತ್ತು ಜೈ ಸಂವಿಧಾನ’ ಸಮಾವೇಶಕ್ಕೆ ಸಿದ್ಧವಾಗಿದೆ.1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಬೆಳಗಾವಿ ಸಾಕ್ಷಿಯಾಗಿತ್ತು. ಈಗ ಅಧಿವೇಶನದ ಶತಮಾನೋತ್ಸವದ ಭಾಗವಾಗಿ ಸಮಾವೇಶ ನಡೆಯುತ್ತಿದೆ.
ಕೆಲ ಆಂತರಿಕ ತಿಕ್ಕಾಟದ ವಿದ್ಯಮಾನಗಳ ಮಧ್ಯೆಯೂ, ನಾಯಕರು ಮತ್ತು ಕಾರ್ಯಕರ್ತರು ಸಮಾವೇಶದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಕಳೆದ ವರ್ಷ ಡಿಸೆಂಬರ್ 26, 27ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಡಿ.26ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆದಿತ್ತು. ಆದರೆ, 27ರಂದು ನಡೆಯಬೇಕಿದ್ದ ಸಮಾವೇಶವನ್ನು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನದ ಕಾರಣ ಮುಂದೂಡಲಾಗಿತ್ತು. ಇಂದು ಮತ್ತೆ ಕಾರ್ಯಕ್ರಮ ನಡೆಯುತ್ತಿದೆ. ಸುವರ್ಣ ವಿಧಾನಸೌಧ ಆವರಣದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಬೆಳಿಗ್ಗೆ 10.30ಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಉಪಸ್ಥಿತಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನಾವರಣ ಮಾಡಬೇಕಿತ್ತು. ಆದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಳಗಾವಿ ಪ್ರವಾಸ ರದ್ದುಗೊಳಿಸಿದ್ದಾರೆ. ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಇನ್ನಿತರ ನಾಯಕರು ಭಾಗವಹಿಸುತ್ತಿದ್ದಾರೆ.








