ಬೆಂಗಳೂರು: ಇಡೀ ವಿಶ್ವದಾದ್ಯಂತ ಮರಣ ಮೃದಂಗ ಮೊಳಗಿಸುತ್ತಿರುವ ಕೊರೊನಾ ಮಹಾಮಾರಿ ರಾಜ್ಯದಲ್ಲೂ ತನ್ನ ಅಟ್ಟಹಾಸ ಮುಂದುವರೆಸಿದೆ. ಹಗಲು ರಾತ್ರಿ ಈ ರಕ್ಕಸನ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಗೂ ಸಂಕಷ್ಟ ಎದುರಾಗಿದೆ. ದಿನೇ ದಿನೇ ಪೊಲೀಸರನ್ನೂ ಕೊರೊನಾ ಮಹಾಮಾರಿ ಬೆಂಬಿಡದೆ ಕಾಡುತ್ತಿದೆ. ಇದೀಗ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 12 ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಧೃಢಪಟ್ಟಿದೆ. ಹೀಗಾಗಿ ಪೊಲೀಸ್ ಕಮಿಷನರ್ ಕಚೇರಿನ್ನು 3 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.

ದಿನೇ ದಿನೇ ಪೊಲೀಸರಿಗೆ ಕೊರೊನಾ ಆತಂಕ ಹೆಚ್ಚಾಗುತ್ತಿದ್ದು, ಇದುವರೆಗೂ 450 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಈ ಮಹಾಮಾರಿ ಒಕ್ಕರಿಸಿದೆ. ಕಳೆದೊಂದು ವಾರದಿಂದ ಪೊಲೀಸ್ ಇಲಾಖೆಯಲ್ಲಿನ ಸಿಬ್ಬಂದಿಗಳಿಗೆ ನಡೆಸಲಾದ RANDOM ಟೆಸ್ಟ್ ನಲ್ಲಿ 12 ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇರುವ ಸ್ಪೋಟಕ ಮಾಹಿತಿ ಬಯಲಾಗಿದೆ. ಕಮಿಷನರ್ ಕಚೇರಿಯ ಸಿಸಿಆರ್ ಬಿ ವಿಭಾಗದಲ್ಲಿ 8 ಸಿಬ್ಬಂದಿ ಹಾಗೂ ಅಡ್ಮಿನ್ ವಿಭಾಗದ ನಾಲ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.








