ಹುಟ್ಟು ಹಬ್ಬದ ಹಾರೈಕೆಯೊಂದಿಗೆ ಸನ್ನಿಯ ಆ ದಿನಗಳು…!
ಸುನೀಲ್ ಗವಾಸ್ಕರ್… ಈ ಹೆಸರು ವಿಶ್ವ ಕ್ರಿಕೆಟ್ ನಲ್ಲಿ ಯಾವತ್ತಿಗೂ ಸದಾ ನೆನಪಿನಲ್ಲಿ ಉಳಿಯುವಂತಹ ಹೆಸರು. ಅದು 1970-80ರ ದಶಕ. ಆಗ ಕ್ರಿಕೆಟ್ ಇಷ್ಟೆಲ್ಲಾ ಜನಪ್ರಿಯತೆ ಪಡೆದುಕೊಂಡಿರಲಿಲ್ಲ. ಆದ್ರೂ ಸುನೀಲ್ ಗವಾಸ್ಕರ್ ಹೆಸರು ಮಾತ್ರ ವಿಶ್ವ ಕ್ರಿಕೆಟ್ ನಲ್ಲಿ ಪ್ರಖರ ಸೂರ್ಯನಂತೆ ಪ್ರಜ್ವಲಿಸುತ್ತಿತ್ತು. ಇವತ್ತಿನ ದಿನಗಳಲ್ಲಿ ವಿರಾಟ್ – ಸಚಿನ್ ಹೆಸರುಗಳು ಕ್ರಿಕೆಟ್ ಮೈದಾನದಲ್ಲಿ ಪ್ರತಿಧ್ವನಿಸುತ್ತಿದ್ದವೂ ಅದೇ ರೀತಿ ಅವತ್ತಿನ ದಿನಗಳಲ್ಲಿ ಸುನೀಲ್ ಗವಾಸ್ಕರ್ ಹೆಸರು ಅಭಿಮಾನಿಗಳ ಬಾಯಲ್ಲಿ ನಲಿದಾಡುತ್ತಿತ್ತು.
ಅಂದ ಹಾಗೇ ಸುನೀಲ್ ಗವಾಸ್ಕರ್ ಬಗ್ಗೆ ಇವತ್ತು ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತೀರಾ.. ಇವತ್ತು ಅವರ 71ನೇ ಹುಟ್ಟು ಹಬ್ಬ. ಭಾರತೀಯ ಕ್ರಿಕೆಟ್ನ ಲಿಟ್ಲ್ ಮಾಸ್ಟರ್ ಖ್ಯಾತಿಯ ಸುನೀಲ್ ಗವಾಸ್ಕರ್ ಅವರಿಗೆ ಹ್ಯಾಪಿ ಬರ್ತ್ ಡೇ. ಹಾಗಂತ ಸುನೀಲ್ ಗವಾಸ್ಕರ್ ಅವರ ಆಟವನ್ನು ನೋಡಿದ ನೆನಪು ನನಗಿಲ್ಲ. ಹಳೆಯ ಪಂದ್ಯಗಳ ಮರುಪ್ರಸಾರದಲ್ಲಿ ನೋಡಿದ ನೆನಪಿದೆ. ಅದನ್ನು ನೋಡಿದಾಗ ಅಬ್ಬಾ ಅನ್ನಿಸಿತ್ತು. ಯಾಕಂದ್ರೆ ಸುನೀಲ್ ಗವಾಸ್ಕರ್ ಅವರು ಬ್ಯಾಟಿಂಗ್ ಮಾಡುವಾಗ ಹೆಲ್ಮೆಟ್ ಹಾಕಿಕೊಳ್ಳುತ್ತಿರಲಿಲ್ಲ. ಘಾತಕ ವೇಗಿಗಳ ದಾಳಿಯನ್ನು ದಿಟ್ಟವಾಗಿ ಎದುರಿಸುತ್ತಿದ್ದ ಅವರ ಬ್ಯಾಟಿಂಗ್ ಕೌಶಲ್ಯಕ್ಕೆ ಹೇಳುವಷ್ಟು ದೊಡ್ಡವನೂ ಅಲ್ಲ.
ಅದಿರಲಿ, ಸುನೀಲ್ ಗವಾಸ್ಕರ್ ಅವರನ್ನು ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದದ್ದು ಸನ್ನಿ ಅಂತ. ಸನ್ನಿ ದಿನಗಳು ತುಂಬಾನೇ ಅದ್ಭುತವಾಗಿದ್ದವು. ಸುನೀಲ್ ಗವಾಸ್ಕರ್ ಕ್ರಿಕೆಟ್ ಆಟವನ್ನು ಆನಂದಿಸುತ್ತಿದ್ದರು. ಬ್ಯಾಟಿಂಗ್ ಮೇಲಿದ್ದ ಅವರ ಏಕಾಗ್ರತೆಯನ್ನು ಬಣ್ಣಿಸಲು ಸಾಧ್ಯವಿಲ್ಲವಂತೆ. ಕ್ರಿಕೆಟ್ನ ತಾಂತ್ರಿಕತೆಗಳನ್ನು ಕರಗತ ಮಾಡಿಕೊಂಡಿದ್ದ ಗವಾಸ್ಕರ್ ಔಟ್ ಆಗುವುದನ್ನು ಇಷ್ಟಪಡುತ್ತಿರಲಿಲ್ಲ. ಬ್ಯಾಟ್ ನಿಂದ ರನ್ಗಳು ಹರಿದು ಬರಬೇಕು. ಅವರಲ್ಲಿ ರನ್ ಹಸಿವು ಸದಾ ಕಾಡುತ್ತಿತ್ತು. ಅದಕ್ಕಾಗಿ ಎಷ್ಟು ತಾಳ್ಮೆಯಿಂದಾದ್ರೂ ಆಡುತ್ತಿದ್ದರು. ಅವರ ತಾಳ್ಮೆಯನ್ನು ಪರೀಕ್ಷೆ ಮಾಡಲು ಹೊರಟವರಿಗೆ ಸುಸ್ತಾಗುವುದಂತೂ ಗ್ಯಾರಂಟಿ. ಅಷ್ಟರ ಮಟ್ಟಿಗೆ ಅವರು ಕ್ರಿಕೆಟ್ ಆಟವನ್ನು ಸಿದ್ದಿಸಿಕೊಂಡಿದ್ದರು.
ಸಚಿನ್ ತೆಂಡುಲ್ಕರ್ ವಿಶ್ವ ಕ್ರಿಕೆಟ್ಗೆ ಎಂಟ್ರಿಯಾಗುವ ಮುನ್ನವೇ ಸುನೀಲ್ ಗವಾಸ್ಕರ್ ಅನೇಕ ದಾಖಲೆಗಳನ್ನು ಬರೆದಿದ್ದರು. ಈಗ ಸಚಿನ್ ಮಾಡಿರುವಂತಹ ದಾಖಲೆಗಳು ಆಗ ಸುನೀಲ್ ಗವಾಸ್ಕರ್ ಹೆಸರಿನಲ್ಲಿದ್ದವು. ಗರಿಷ್ಠ ಅಂದ್ರೆ 125 ಟೆಸ್ಟ್ ಪಂದ್ಯ ಆಡಿರೋದು, ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ 10122 ರನ್, ಸತತ 106 ಟೆಸ್ಟ್ ಪಂದ್ಯಗಳನ್ನು ಆಡಿರೋದು, ಗರಿಷ್ಠ 34 ಶತಕಗಳು, ಗರಿಷ್ಠ 79 ಅರ್ಧಶತಕಗಳು, ಗರಿಷ್ಠ 58 ಶತಕದ ಜೊತೆಯಾಟಗಳು, ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಗರಿಷ್ಠ ರನ್ಗಳು ಹೀಗೆ ಅನೇಕ ದಾಖಲೆಗಳನ್ನು ಮಾಡಿ ತನ್ನ ವರ್ಣರಂಜಿತ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು ಸುನೀಲ್ ಗವಾಸ್ಕರ್.
1988ರಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಲಾಡ್ರ್ಸ್ ಮೈದಾನದಲ್ಲಿ ಆಡಿದ್ದರು. ಮೊದಲ ಇನಿಂಗ್ಸ್ ನಲ್ಲಿ ಆಕರ್ಷಕ 188ರನ್ ಸಿಡಿಸಿದ್ರೆ, ಎರಡನೇ ಇನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ರು. ಆದ್ರೆ ಅವರು ವಿಶ್ವ ಕ್ರಿಕೆಟ್ ನಲ್ಲಿ ಮಾಡಿರುವ ಸಾಧನೆಯನ್ನು ನೋಡಿದಾಗ ಕೊನೆಯ ಪಂದ್ಯದ ಶೂನ್ಯ ಲೆಕ್ಕಕ್ಕೆ ಬರುವುದಿಲ್ಲ. ಅದ್ರಲ್ಲೂ ಅವರು ವೆಸ್ಟ್ ಇಂಡೀಸ್ ತಂಡವನ್ನು ಕಾಡಿದ ಪರಿಗೆ ಇಡೀ ವಿಶ್ವ ಕ್ರಿಕೆಟ್ ತಲೆಬಾಗಲೇಬೇಕಾಗುತ್ತದೆ.
ತನ್ನ 71ರ ಹರೆಯದಲ್ಲೂ ಸದಾ ಲವಲವಿಕೆಯಿಂದಲೇ ಇರುವ ಸುನೀಲ್ ಗವಾಸ್ಕರ್ ತಮ್ಮ ಕಂಚಿನ ಕಂಠ ಹಾಗೂ ಕ್ರಿಕೆಟ್ ಆಟದ ವಿಶ್ಲೇಷಣೆಯ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ಆಟಗಾರರ ತಪ್ಪುಗಳನ್ನು ಅವರ ಆಟದ ಶೈಲಿಯನ್ನು ವಿಮರ್ಷೆ ಮಾಡ್ತಾರೆ. ಅಂದ ಹಾಗೇ ಸುನೀಲ್ ಗವಾಸ್ಕರ್ ಆಲ್ರೌಂಡರ್ ಕೂಡ ಹೌದು. ಅವರು ಕೇವಲ ಕ್ರಿಕೆಟ್ ಆಟಗಾರ ಮಾತ್ರವಲ್ಲ. ಅವರೊಬ್ಬ ನಟ ಹಾಗೂ ಕಲಾವಿದ ಕೂಡ. ಕಾಮಿಕ್ ಬುಕ್ ಹೀರೋ ಮತ್ತು ಮರಾಠಿ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದಾರೆ. ಹಾಗೇ ಅವರೊಬ್ಬ ಲೇಖಕನೂ ಹೌದು.
ಒಟ್ಟಿನಲ್ಲಿ ಸುನೀಲ್ ಗವಾಸ್ಕರ್ ಭಾರತ ಹಾಗೂ ವಿಶ್ವ ಕಂಡ ಶ್ರೇಷ್ಠ ಕ್ರಿಕೆಟಿಗ. ಕೆಲವರು ಅವರನ್ನು ಸ್ವಾರ್ಥಿ ಅಂತ ಹೇಳಿದ್ರೂ ಕ್ರಿಕೆಟ್ಗಾಗಿ ಅವರು ಏನು ಬೇಕಾದ್ರೂ ಮಾಡಲು ಸಿದ್ಧರಿದ್ದರು. ಅದಕ್ಕಾಗಿಯೇ ಅವರನ್ನು ವಿಶ್ವ ಕ್ರಿಕೆಟ್ನ ರಿಯಲ್ ಮಾಸ್ಟರ್ ಅಂತ ಕರೆಯುವುದು. ಹ್ಯಾಪಿ ಬರ್ತ್ ಡೇ ಸುನೀಲ್ ಗವಾಸ್ಕರ್