ಆಧಾರ್ ಜೋಡಣೆ ಯೋಜನೆ: ರಾಜ್ಯದ ಗ್ರಾಮ ಆಡಳಿತಾಧಿಕಾರಿ ಮತ್ತು ಗ್ರಾಮ ಸಹಾಯಕರಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಉತ್ತಮ ಸುದ್ದಿಯನ್ನು ನೀಡಿದ್ದಾರೆ. ಆಧಾರ್ ಜೋಡಣೆಯ ಮೂಲಕ ಶ್ರಮಿಸಿದ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರಿಗೆ ಸಂಭಾವನೆ ನೀಡುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಯಾಗಿದ್ದು, ಅಕ್ರಮ ನೋಂದಣಿಗಳನ್ನು ತಡೆದು, ರೈತರಿಗೆ ಅಗತ್ಯ ನೆರವು ನೀಡಲು, ಸರ್ಕಾರಿ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲು ಮತ್ತು ಫೌತಿ ಖಾತೆ ನೀಡಲು ಆಧಾರ್ ಜೋಡಣೆ ಪ್ರಮುಖ ಪಾತ್ರ ವಹಿಸುತ್ತದೆ.
ಸಂಭಾವನೆ ಪಾವತಿ: 31/01/2025 ರವರೆಗೆ 2,22,83,817 ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ. ಈ ಕಾರ್ಯವನ್ನು ಸಾಧ್ಯವಾಗಿಸಲು ಹಲವಾರು ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಸಹಾಯಕರ ತಮ್ಮ ಖರ್ಚಿನಿಂದ ಹಣವನ್ನು ಬಳಸಿದ್ದಾರೆ. ಈ ಹಿನ್ನೆಲೆಯಲ್ಲಿ DILRMP (Digital India Land Records Modernization Programme) ರಾಜ್ಯ ಮಟ್ಟದ ಸಮೀಕ್ಷಾ ಮತ್ತು ನಿರೀಕ್ಷಣಾ ಸಮಿತಿಯ ಸಭೆಯಲ್ಲಿ “ಪ್ರತಿ ಒಂದು ಆಧಾರ್ ಜೋಡಣೆಗೆ ತಲಾ ಒಂದು ರೂಪಾಯಿಯಂತೆ (Rs.1/-) ಸಂಭಾವನೆಯನ್ನು ನೀಡಬೇಕು” ಎಂಬ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಸಂಭಾವನೆಯ ಮಾರ್ಗಸೂಚಿ:
31/01/2025 ರವರೆಗೆ ಕಾರ್ಯನಿರ್ವಹಿಸಿರುವ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಅವರ ಸಹಾಯಕರಿಗೆ ಪ್ರತಿ ಒಂದು ಆಧಾರ್ ಜೋಡಣೆಗೆ ರೂ.1/- ಪಾವತಿಸಲಾಗುವುದು.
ತಹಶೀಲ್ದಾರರಿಂದ ಮಾಹಿತಿ ಪಡೆದು ಪರಿಶೀಲಿಸಿ ಮಾತ್ರ ಸಂಭಾವನೆಯನ್ನು ಪಾವತಿಸಬೇಕು.
PFMS ತಂತ್ರಾಂಶದ ಮೂಲಕ ಅನುದಾನ ಬಿಡುಗಡೆ ಮಾಡಲಾಗುವುದು.
ಬ್ಯಾಂಕ್ ಖಾತೆ ವಿವರಗಳನ್ನು ಸಂಬಂಧಪಟ್ಟ ತಹಶೀಲ್ದಾರರಿಂದ ಪಡೆದು ಕ್ರಮವಹಿಸಬೇಕು.
ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರ ಶ್ರಮವನ್ನು ಗುರುತಿಸುವುದು ಮತ್ತು ಅವರಿಗೆ ಸೂಕ್ತ ಗೌರವ ನೀಡುವುದು ಸರ್ಕಾರದ ಹೊಣೆಗಾರಿಕೆ ಎಂದು ಸಚಿವರು ತಿಳಿಸಿದ್ದಾರೆ.








