ಕಲಬುರಗಿ: ದಿನೇ ದಿನೇ ವಿಶ್ವದಾದ್ಯಂತ ತನ್ನ ಕಬಂದ ಬಾಹುವನ್ನ ಚಾಚುತ್ತಲೇ ಇರುವ ಡೆಡ್ಲಿ ವೈರಸ್ ಕೊರೊನಾ ಹಾವಳಿ ರಾಜ್ಯದಲ್ಲೂ ಹೆಚ್ಚುತ್ತಲೇ ಇದೆ. ಸಾಮಾನ್ಯ ಜನರನ್ನಷ್ಟೇ ಅಲ್ಲದೆ ಜನಪ್ರತಿನಿಧಿಗಳಿಗೂ ಕೊರೊನಾ ಕಂಟಕ ಎದುರಾಗಿದೆ. ಸಂಸದೆ ಸುಮಲತಾ, ಕುಣಿಗಲ್ ಶಾಸಕ ರಂಗನಾಥ್, ಹೊಸಕೋಟೆ ಶಾಸಕ ಬಿಎಸ್ ಬಚ್ಚೇಗೌಡ, ಜನಾರ್ಧನ ಪೂಜಾರಿ ಹೀಗೆ ಒಬ್ಬರಾದ ಮೇಲೊಬ್ಬರಿಗೆ ಕೊರೊನಾ ಪಾಸಿಟಿವ್ ಬರುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.
ಇದೀಗ ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಪುತ್ರ ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಗೂ ಕೊರೊನಾ ಸೋಂಕು ತಗುಲಿರುವುದು ಧೃಢಪಟ್ಟಿದೆ. ಈ ಕುರಿತು ಸ್ವತಃ ಅಜಯ್ ಸಿಂಗ್ ಅವರೇ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅಲ್ದೇ ನನ್ನ ಜೊತೆಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.








