ಹೊಸದಿಲ್ಲಿ, ಜುಲೈ 11: ಭಾರತ ಮತ್ತು ಚೀನಾಗಳು ಪರಸ್ಪರ ಮುಖಾಮುಖಿಯಾಗುವ ಬದಲು ಶಾಂತಿ ಮತ್ತು ಮಾತುಕತೆಗಳ ಮೂಲಕ ಸಂಕೀರ್ಣ ಸಮಸ್ಯೆಗೆ ಸಮಂಜಸವಾದ ಪರಿಹಾರ ಕಂಡು ಹಿಡಿಯಬೇಕು. ಅಲ್ಲಿಯವರೆಗೆ ವಿವಾದಿತ ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳಲು ಒಟ್ಟಾಗಿ ಕೆಲಸ ಮಾಡಬೇಕು ಎಂದು ಚೀನಾದ ರಾಯಭಾರಿ ಸನ್ ವೀಡಾಂಗ್ ಶುಕ್ರವಾರ ಹೇಳಿದ್ದಾರೆ.
ಉಭಯ ದೇಶದವರು ಪ್ರತಿಸ್ಪರ್ಧಿಗಳಿಗಿಂತ ಪಾಲುದಾರರಾಗಿರಬೇಕು. ದ್ವಿಪಕ್ಷೀಯ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳ ಡಿಕೌಪ್ಲಿಂಗ್ಗ್ ಗಾಗಿ ಮತ್ತು ಮೇಡ್ ಇನ್ ಚೀನಾ ಸರಕುಗಳನ್ನು ಹೊರಗಿಡಲು ಕೆಲವು ಭಾಗಗಳಿಂದ ಬರುವ ಕರೆಗಳನ್ನು ಪರಿಹರಿಸಬೇಕೆಂದು ಸನ್ ಹೇಳಿದರು. ಸುಂಕ ರಹಿತ ಅಡೆತಡೆ ಮತ್ತು ನಿರ್ಬಂಧಿತ ಕ್ರಮಗಳಿಂದ ಚೀನೀ ಉದ್ಯಮಗಳು ಮತ್ತು ಭಾರತೀಯ ಗ್ರಾಹಕರಿಗೆ ಅನ್ಯಾಯವಾಗುತ್ತದೆ ಎಂದು ಅವರು ಹೇಳಿದರು.
ಭಾರತ ಮತ್ತು ಚೀನಾ ಸ್ನೇಹಕ್ಕೆ 2,000 ವರ್ಷಗಳ ಇತಿಹಾಸವಿದ್ದು ಈ ಸ್ನೇಹ, ವಿಶ್ವಾಸ, ನಂಬಿಕೆ ಮತ್ತಷ್ಟು ಗಟ್ಟಿಗೊಳ್ಳಬೇಕಿದೆ ಎಂದು ಭಾರತದ ಚೀನಾ ರಾಯಭಾರಿ ಸನ್ ವೀಡಾಂಗ್ ಶುಕ್ರವಾರ ಹೇಳಿದ್ದಾರೆ.
ಪೂರ್ವ ಲಡಾಕ್ ನ ಗಾಲ್ವಾನ್ ಕಣಿವೆಯಲ್ಲಿನ ಗಡಿಭಾಗದಲ್ಲಿ ಚೀನಾದ ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ 20 ಭಾರತೀಯ ಯೋಧರು ಹುತಾತ್ಮರಾದರು. ಇದರಿಂದ ಭಾರತ ಮತ್ತು ಚೀನಾ ನಡುವಿನ ಗಡಿ ಉದ್ವಿಗ್ನತೆ ಹೆಚ್ಚಾಯಿತು. ಚೀನಾಗೆ ಎಲ್ಲಾ ಹಂತದಲ್ಲೂ ಹೊಡೆತ ನೀಡಲು ಭಾರತ ಸಿದ್ಧವಾಯಿತು. ಇದರ ಬೆನ್ನಲ್ಲೇ ವರಸೆ ಬದಲಾಯಿಸಿದ ಚೀನಾ ಶಾಂತಿ ಮಂತ್ರವನ್ನು ಜಪಿಸುತ್ತಿದೆ.








