ಜೇಮ್ಸ್ ಆಂಡರ್ಸನ್ ಅತ್ಯುತ್ತಮ ರಿವರ್ಸ್… ರಿವರ್ಸ್ ಸ್ವಿಂಗ್ ಬೌಲರ್ – ಸಚಿನ್ ತೆಂಡುಲ್ಕರ್
ಜೇಮ್ಸ್ ಆಂಡರ್ಸನ್… ಇಂಗ್ಲೆಂಡ್ನ ಈ ವೇಗಿಗೆ ವಯಸ್ಸೇ ಆಗಿಲ್ಲ ಅನ್ಸುತ್ತೆ.. ಯಾಕಂದ್ರೆ ಜೇಮ್ಸ್ ಆಂಡರ್ಸನ್ ಯುವ ವೇಗಿಗಳನ್ನು ನಾಚಿಸುವಂತೆ ಬೌಲಿಂಗ್ ಮಾಡುತ್ತಾರೆ. ಸದ್ಯ ಜೇಮ್ಸ್ ಆಂಡರ್ಸನ್ಗೆ 38ರ ಹರೆಯ. ಈಗಲೂ ಇಂಗ್ಲೆಂಡ್ ತಂಡದ ಟ್ರಂಪ್ ಕಾರ್ಡ್ ಬೌಲರ್. ತನ್ನ ಬತ್ತಳಿಕೆಯಲ್ಲಿರುವ ರಿವರ್ಸ್ ಸ್ವಿಂಗ್, ಇನ್ ಸ್ವಿಂಗ್, ಔಟ್ ಸ್ವಿಂಗ್ ಹಾಗೂ ಲಯ ಬದ್ಧವಾದ ಬೌಲಿಂಗ್ ಮೂಲಕ ಬ್ಯಾಟ್ಸ್ ಮೆನ್ಗಳನ್ನು ತಬ್ಬಿಬ್ಬುಗೊಳಿಸುವುದರಲ್ಲಿ ಜೇಮ್ಸ್ ಆಂಡರ್ಸನ್ ನಿಪುಣ.
ಅಂದ ಹಾಗೇ ಜೇಮ್ಸ್ ಆಂಡರ್ಸನ್ ವಿಶ್ವಕಪ್ ಕ್ರಿಕಟ್ ದೇವ್ರ ಮನ ಗೆದ್ದಿದ್ದಾರೆ. ಹೌದು, ಸಚಿನ್ ತೆಂಡುಲ್ಕರ್ ಅವರು ಜೇಮ್ಸ್ ಆಂಡರ್ಸನ್ ಅವರ ಬೌಲಿಂಗ್ ವೈಖರಿಯನ್ನು ಗುಣಗಾನ ಮಾಡಿದ್ದಾರೆ. ಅಷ್ಟೇ ಅಲ್ಲ, ಸದ್ಯದ ವಿಶ್ವದ ಶ್ರೇಷ್ಠ ರಿವರ್ಸ್ ಸ್ವಿಂಗ್ ಬೌಲರ್ ಅಂದ್ರೆ ಅದು ಜೇಮ್ಸ್ ಆಂಡರ್ಸನ್ ಅಂತ ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.
ಜೇಮ್ಸ್ ಆಂಡರ್ಸನ್ ಇನ್ ಸ್ವಿಂಗ್ ಬೌಲಿಂಗ್ ಮಾಡುತ್ತಾರೆ ನಿಮಗೆ ಅನ್ನಿಸುತ್ತದೆ. ಆದ್ರೆ ಅದು ಔಟ್ ಸ್ವಿಂಗ್ ಆಗಿರುತ್ತದೆ. ಹೀಗೆ ಅವರು ತನ್ನ ಬತ್ತಳಿಕೆಯ ಅಸ್ತ್ರಗಳ ಮೂಲಕ ಎದುರಾಳಿ ಬ್ಯಾಟ್ಸ್ ಮೆನ್ಗಳಿಗೆ ಕಂಟಕವಾಗುತ್ತಾರೆ. ಅದೇ ರೀತಿ ಜೇಮ್ಸ್ ಆಂಡರ್ಸನ್ನಂತೆ ಇಂಗ್ಲೆಂಡ್ನ ಮತ್ತೊಬ್ಬ ವೇಗಿ ಸ್ಟುವರ್ಟ್ ಬ್ರಾಡ್ ಕೂಡ ಬೌಲಿಂಗ್ ಮಾಡುತ್ತಾರೆ ಎಂದು ಸಚಿನ್ ಹೇಳಿದ್ದಾರೆ.
ಸಚಿನ್ ತೆಂಡುಲ್ಕರ್ ವಿಶ್ವದ ಘಾತಕ ವೇಗಿಗಳನ್ನು ಎದುರಿಸ್ತಾರೆ. ಅದ್ರಲ್ಲೂ ವಕಾರ್ ಯೂನಿಸ್, ವಾಸೀಮ್ ಅಕ್ರಮ್ ಹಾಗೂ ಮೆಕ್ಗ್ರಾಥ್ನಂತಹ ಅಪಾಯಕಾರಿ ಬೌಲರ್ಗಳಿಗೆ ದಿಟ್ಟ ಉತ್ತರ ನೀಡಿದ್ದಾರೆ. ಅಂತಹುದ್ದರಲ್ಲಿ ಸಚಿನ್ ಜೇಮ್ಸ್ ಆಂಡರ್ಸನ್ ಅವರ ಬೌಲಿಂಗ್ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರೋದು ಆಂಡರ್ಸನ್ಗೆ ಹಿರಿಮೆ ಸಿಕ್ಕಂತಾಗಿದೆ.
ಸಚಿನ್ ತೆಂಡುಲ್ಕರ್ ಅವರು ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ಟೆಸ್ಟ್ ಸರಣಿಯ ಬಗ್ಗೆ ಬ್ರಿಯಾನ್ ಲಾರಾ ಜೊತೆ ಮಾತನಾಡುತ್ತಾ ಜೇಮ್ಸ್ ಆಂಡರ್ಸನ್ ಅವರ ರಿವರ್ಸ್ ಸ್ವಿಂಗ್ ಅಸ್ತ್ರದ ಬಗ್ಗೆ ಚೆಂಡನ್ನು ಬಳಕೆ ಮಾಡಿಕೊಂಡು ವಿವರಣೆ ನೀಡಿದ್ದರು.