ಸಚಿವ ಸಿಟಿ ರವಿಗೆ ಕೊರೊನಾ ಸೋಂಕು
ಚಿಕ್ಕಮಗಳೂರು, ಜುಲೈ 11: ಕರ್ನಾಟಕ ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಕೊರೋನಾ ಸೋಂಕು ತಗುಲಿರುವುದು ಖಚಿತವಾಗುತ್ತಿದ್ದಂತೆ ಸಿಟಿ ರವಿ ಹೋಮ್ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಸಿಟಿ ರವಿ ಈ ಕುರಿತು ಟ್ವೀಟ್ ಮಾಡಿದ್ದು, ನಾನು ಕ್ಷೇಮವಾಗಿದ್ದೇನೆ. ಕೊರೊನಾ ಲಕ್ಷಣಗಳಿಲ್ಲ. ಈಗ ಹೋಮ್ ಕ್ವಾರಂಟೈನ್-ನಲ್ಲಿ ಇದ್ದೇನೆ. ಸದ್ಯ ನನ್ನ ತೋಟದ ಮನೆಯಲ್ಲೇ ವಾಕ್ ಮಾಡುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ಸಚಿವರು ಕೋವಿಡ್-19 ಸೋಂಕಿನ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಚಿಕ್ಕಮಗಳೂರು ಕ್ಷೇತ್ರ ಹಾಗೂ ರಾಜ್ಯದ ಹಲವು ಕಡೆ ಪ್ರಯಾಣ ಬೆಳೆಸಿದ್ದರು ಮತ್ತು ಕೊರೊನಾ ಸೋಂಕಿತ ಪ್ರದೇಶಗಳಿಗೂ ಭೇಟಿ ನೀಡಿದ್ದರು.
ಈಗಾಗಲೇ ರಾಜ್ಯದಲ್ಲಿ ಮಾಜಿ ಕೇಂದ್ರ ಸಚಿವ, ದಕ್ಷಿಣ ಕನ್ನಡದ ಮಾಜಿ ಸಂಸದ ಜನಾರ್ದನ ಪೂಜಾರಿ, ಮಾಜಿ ಉಪಸಭಾಪತಿ ಪುಟ್ಟಣ್ಣ, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಕುಣಿಗಲ್ ಶಾಸಕ ಡಾ.ರಂಗನಾಥ್, ವಿಧಾನ ಪರಿಷತ್ ಸದಸ್ಯ, ಚಿಕ್ಕಮಗಳೂರಿನ ಪ್ರಾಣೇಶ್ ಎಂ.ಕೆ, ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ, ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡಗೆ ಕೊರೊನಾ ಸೋಂಕು ದೃಢಪಟ್ಟಿದೆ.








