ಮುಂಬೈನ ಧಾರವಿಯಲ್ಲಿ ಕೋವಿಡ್ -19 ನಿಯಂತ್ರಿಸುವ ಪ್ರಯತ್ನವನ್ನು ಶ್ಲಾಘಿಸಿದ ಡಬ್ಲ್ಯು.ಎಚ್.ಒ
ಜೆನೀವಾ, ಜುಲೈ 12: ಏಷ್ಯಾದ ಅತಿದೊಡ್ಡ ಕೊಳೆಗೇರಿ ಧಾರವಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿ ತೆಗೆದುಕೊಂಡ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ, ಟೆಡ್ರೋಸ್ ಅದ್ನಾಮ್ ಘೆಬ್ರೈಸಸ್ ಪ್ರಶಂಸಿದ್ದಾರೆ.
ಸಕಾಲಿಕ ಪರೀಕ್ಷೆ, ಪ್ರತ್ಯೇಕತೆ, ಪತ್ತೆ ಹಚ್ಚುವಿಕೆ ಹಾಗೂ ಚಿಕಿತ್ಸೆಯಿಂದ ಮುಂಬೈನ ಧಾರಾವಿ ಸ್ಲಂನಲ್ಲಿ ವೈರಸ್ನ್ನು ನಿಯಂತ್ರಣ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.

ಕೇವಲ ಆರು ವಾರಗಳಲ್ಲಿ ಎರಡು ಪಟ್ಟು ಹೆಚ್ಚಿದ್ದ ಸೋಂಕಿತರ ಸಂಖ್ಯೆ ಹತೋಟಿಗೆ ಬಂದಿರುವುದನ್ನು ಶ್ಲಾಘಿಸಿದ ಅವರು ಕೊರೋನಾವೈರಸ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳಿಂದಾಗಿ ಈ ಪ್ರದೇಶವು ಇಂದು ಕೊರೋನಾದಿಂದ ವಿಮೋಚನೆಗೊಳ್ಳುವ ಹಾದಿಯಲ್ಲಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಮತ್ತು ಜಾಗತಿಕ ಒಗ್ಗಟ್ಟಿನೊಂದಿಗೆ ಆಕ್ರಮಣಕಾರಿ ಕ್ರಮವು ಸಾಂಕ್ರಾಮಿಕ ರೋಗವನ್ನು ತಡೆಯುತ್ತದೆ ಎಂಬುವುದಕ್ಕೆ ಧಾರವಿ ಒಐ ಉದಾಹರಣೆ ಎಂದು ಟೆಡ್ರೋಸ್ ಹೇಳಿದರು.
ಇಟಲಿ, ಸ್ಪೈನ್ ಮತ್ತು ದಕ್ಷಿಣ ಕೊರಿಯಾ ಕೂಡ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಸಫಲವಾಗಿದ್ದು, ಕಟ್ಟುನಿಟ್ಟಿನ ನಿರ್ಬಂಧ, ಮಾರ್ಗಸೂಚಿಗಳ ಪಾಲನೆ, ರಾಷ್ಟ್ರೀಯ ಏಕತೆ ಮತ್ತು ಜಾಗತಿಕ ಒಗ್ಗಟ್ಟಿನಿಂದ ಸಾಂಕ್ರಾಮಿಕ ಪಿಡುಗನ್ನು ತಡೆಯಲು ಸಾಧ್ಯ ಎಂದು ಟೆಡ್ರೋಸ್ ಹೇಳಿದರು.
ಇಲ್ಲಿವರೆಗೆ, ಪ್ರಪಂಚದಾದ್ಯಂತ 1.2 ಕೋಟಿ ಕೊರೊನಾ ಸೋಂಕು ಪ್ರಕರಣಗಳಿದ್ದು, 5.55 ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.








