ಅನುಪಮ್ ಖೇರ್ ಅವರ ತಾಯಿಗೆ ಕೊರೊನಾ ಸೋಂಕು
ಮುಂಬೈ, ಜುಲೈ 12: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರಿಗೆ ಕರೊನಾ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ ಇದೀಗ ಅನುಪಮ್ ಖೇರ್ ಅವರ ಕುಟುಂಬಕ್ಕೂ ಕೊರೊನಾ ಸೋಂಕು ದೃಢಪಟ್ಟಿದೆ.
ಅನುಪಮ್ ಖೇರ್ ಅವರ ತಾಯಿ ದುಲಾರಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ನಟ ಅನುಪಮ್ ಖೇರ್ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ . ನನ್ನ ತಾಯಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ತಮಗೆ ಸೋಂಕು ತಗುಲಿಲ್ಲ ಎಂಬ ಬಗ್ಗೆಯೂ ಅನುಪಮ್ ಖೇರ್ ಸ್ಪಷ್ಟ ಪಡಿಸಿದ್ದಾರೆ. ಅನುಪಮ್ ಖೇರ್ ಅವರ ತಾಯಿ ಜೊತೆಗೆ ಅನುಪಮ್ ಖೇರ್ ಅವರ ಸಹೋದರ ರಾಜು ಮತ್ತು ಸಹೋದರನ ಮಡದಿ ರೀಮಾ ಹಾಗೂ ಅವರ ಮಗಳಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.








