ಹಿರಿಯ ತಮಿಳು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ನೀಡಿದ ಒಂದು ವಿವಾದಾತ್ಮಕ ಹೇಳಿಕೆ ಈಗ ಕನ್ನಡಿಗರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ನಡೆದ ‘ಥಗ್ ಲೈಫ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಮಲ್ ಹಾಸನ್, ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದ್ದು” ಎಂದು ಹೇಳಿಕೆ ನೀಡಿದ್ದು, ಈ ಮಾತಿಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರ ತೀವ್ರ ಪ್ರತಿಕ್ರಿಯೆ
ಕಮಲ್ ಹಾಸನ್ ಅವರ ಈ ಹೇಳಿಕೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರ ಆಕ್ರೋಶ ಜೋರಾಗಿದ್ದು, ಹಲವರು #RejectKamalHaasan ಮತ್ತು #SaveKannadaCulture ಹ್ಯಾಶ್‌ಟ್ಯಾಗ್‌ಗಳನ್ನು ಟ್ರೆಂಡ್ ಮಾಡುವ ಮಟ್ಟಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಲವರು, ಕನ್ನಡವು ತಮಿಳಿಗಿಂತಲೂ ಪುರಾತನ ಭಾಷೆ ಎಂದು ಪುರಾವೆಗಳೊಂದಿಗೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚಿನ ಪುರಾತತ್ವ ಅಧ್ಯಯನಗಳು, ಹಳೆಯ ಶಾಸನಗಳು ಮತ್ತು ಭಾಷಾ ವಿಜ್ಞಾನಿಗಳ ಅಭಿಪ್ರಾಯಗಳ ಪ್ರಕಾರ, ಕನ್ನಡವು ಪ್ರಾಚೀನ ದ್ರಾವಿಡ ಭಾಷೆಗಳಲ್ಲಿ ಒಂದೆಂದು ಹಲವಾರು ಅಧ್ಯಯನಗಳು ತೋರಿಸಿವೆ. ಇದನ್ನು ಉಲ್ಲೇಖಿಸಿ ಹಲವರು ಕಮಲ್ ಹಾಸನ್ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.
ನಟ ಶಿವರಾಜ್ ಕುಮಾರ್ ಪ್ರತಿಕ್ರಿಯೆ?
ಥಗ್ ಲೈಫ್ ಇವೆಂಟ್‌ನಲ್ಲಿ ಭಾಗಿಯಾದಾಗ, ನಟ ಶಿವರಾಜ್ ಕುಮಾರ್ ಅವರ ಎದುರಲ್ಲೇ ಈ ವಿವಾದಾತ್ಮಕ ಹೇಳಿಕೆಯನ್ನು ಕಮಲ್ ಹಾಸನ್ ನೀಡಿದ್ದಾರೆ.
ಈ ಹೇಳಿಕೆಗೆ ಶಿವರಾಜ್ ಕುಮಾರ್ ಅವರ ಪ್ರತಿಕ್ರಿಯೆ ಇನ್ನೂ ಬಂದಿಲ್ಲವಾದರೂ, ಕಾರ್ಯಕ್ರಮದ ವೇಳೆ ಅವರು ಇದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.








