ಬೇಡರ ಕಣಪ್ಪ ಚಿತ್ರಕ್ಕಿಂತ ಮುನ್ನ ಡಾ. ರಾಜ್ ಕುಮಾರ್ ಅವರು ಒಬ್ಬ ರಂಗಭೂಮಿ ಕಲಾವಿದ.
ಅಪೂರ್ವ ರಾಗಂಗಲ್ ಚಿತ್ರಕ್ಕಿಂತ ಮುನ್ನ ರಜನಿಕಾಂತ್ ಅವರು ಒಬ್ಬ ಬಸ್ ಕಂಡಕ್ಟರ್.
ಸಾಥ್ ಹಿಂದೂಸ್ಥಾನಿ ಚಿತ್ರಕ್ಕಿಂತ ಮುನ್ನ ಅಮಿತಾಬ್ ಬಚ್ಚನ್ ಅವರು ಒಬ್ಬ ಕಂಠದಾನ ಕಲಾವಿದ.
ಹೀಗೆ ಚಿತ್ರರಂಗದ ಬಹುತೇಕ ಕಲಾವಿದರು ಇಂದು ಸೂಪರ್ ಸ್ಟಾರ್ ಅನ್ನಿಸಿಕೊಂಡಿದ್ದಾರೆ. ಆದ್ರೆ ಯಾರು ಕೂಡ ರಾತ್ರೋರಾತ್ರಿ ಸೂಪರ್ ಸ್ಟಾರ್‍ಗಳು ಆಗಿರಲಿಲ್ಲ.
ಹಾಗೇ ಭಾರತೀಯ ಸೂಪರ್ ಸ್ಟಾರ್ ಕ್ರಿಕೆಟ್ ಆಟಗಾರರ ನೈಜ ಕಥೆಯೂ ಅಷ್ಟೇ. ರನ್ ಮೆಷಿನ್ ಸುನೀಲ್ ಗಾವಸ್ಕರ್ ಒಬ್ಬ ಸೇಲ್ಸ್ ಮ್ಯಾನೇಜರ್ ಮಗ.
1983ರ ಹೀರೋ ಕಪಿಲ್ ದೇವ್ ಒಬ್ಬ ಟೀಕ್ ಮರ್ಚೆಂಟ್ ಮಗ.
ಸಚಿನ್ ತೆಂಡುಲ್ಕರ್ ಒಬ್ಬ ಸಾಹಿತಿಯ ಮಗ
ಸೌರವ್ ಗಂಗೂಲಿ ಒಬ್ಬರು ಮಾತ್ರ ರಾಜಮನೆತನದ ಕುಡಿ.
ಮಹೇಂದ್ರ ಸಿಂಗ್ ಧೋನಿ ಪಂಪ್ ಆಪರೇಟರ್ ಮಗ
ರಾಹುಲ್ ದ್ರಾವಿಡ್ ಕಿಸಾನ್ ಜಾಮ್ ಕಂಪೆನಿಯ ಉದ್ಯೋಗಿಯ ಮಗ
ವಿರಾಟ್ ಕೊಹ್ಲಿ ಒಬ್ಬ ವಕೀಲನ ಮಗ
ರೋಹಿತ್ ಶರ್ಮಾ, ಸಾರಿಗೆ ಸಂಸ್ಥೆಯ ಉಗ್ರಾಣದ ಉಸ್ತುವಾರಿಯ ಮಗ
ಇದು ಜಸ್ಟ್ ಸ್ಯಾಂಪಲ್ ಅಷ್ಟೇ. ಹಾಗಂತ ಇದು ಕೇವಲ ಕ್ರಿಕೆಟ್, ಸಿನಿಮಾರಂಗಕ್ಕೆ ಸೀಮಿತವಲ್ಲ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಈ ರೀತಿ ಸಾಮಾನ್ಯ ಕುಟುಂಬದಲ್ಲಿ ಬೆಳೆದವರು ಸೂಪರ್ ಸ್ಟಾರ್‍ಗಳಾಗಿದ್ದಾರೆ. ಅದಕ್ಕೆ ಪ್ರತಿಭೆ ಅನ್ನೋದು ಯಾರ ಸ್ವತ್ತು ಅಲ್ಲ. ಅದು ಹುಟ್ಟಿನಿಂದಲೇ ಬಂದಿರೋದು. ಆ ಬ್ರಹ್ಮ ಬರೆದ ಹಣೆಬರೆಹ ಅಂತಿವಲ್ಲ ಹಾಗೇ. ಆದ್ರೆ ಪ್ರತಿಭೆ, ಅದೃಷ್ಟ ಇದೆ ಅಂತ ಮೈಮರೆತ್ರೆ ಯಾವುದು ಕೂಡ ಹಾಗೇ ಸುಮ್ಮನೆ ಬರಲ್ಲ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಹಾಗಾಗಿಯೇ ಇವರೆಲ್ಲಾ ನಮ್ಮ ಮುಂದೆಯೇ ಸೂಪರ್‍ಸ್ಟಾರ್‍ಗಳಾಗಿ ಹೊರಹೊಮ್ಮಿರುವುದು.
ಅದೇನೇ ಇರಲಿ, ಇಷ್ಟೆಲ್ಲಾ ಈ ಪೀಠಿಕೆ ಯಾಕೆ ಅನ್ನೋ ಪ್ರಶ್ನೆ ನಿಮ್ಮ ಮುಂದೆ ಬಂದಿರಬಹುದು. ಅದಕ್ಕೂ ಉತ್ತರ ಇದೆ. ಹಾಗೇ ಸುಮ್ಮನೆ ಯೋಚನೆ ಮಾಡುತ್ತಿದ್ದಾಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಭಾರತ ತಂಡದಲ್ಲಿ ಯಾರು ಸೂಪರ್ ಸ್ಟಾರ್‍ಗಳಿಲ್ಲ. ಅನನುಭವಿ ಹುಡುಗರು. ಅದರಲ್ಲೂ ಹೊಡಿಬಡಿ ಆಟದ ಪಂಟರ್‍ಗಳು. ಇವರು ಕ್ರಿಕೆಟ್ ಜನಕರ ಎದುರು ಹೇಗೆ ಆಡ್ತಾರೋ ಅನ್ನೋದರ ಬಗ್ಗೆ ವಿಶ್ಲೇಷಣೆ ಮಾಡುತ್ತಿರುವಾಗ ಈ ಮೇಲಿನ ನಿದರ್ಶನಗಳು ಪ್ಲ್ಯಾಶ್‍ಬ್ಯಾಕ್‍ನಂತೆ ಹೊಳೆದವು.
ನಿಜ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸೂಪರ್ ಸ್ಟಾರ್ ಆಟಗಾರರು ಇಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಆರೇಳು ವರ್ಷಗಳಿಂದ ಆಡುತ್ತಿದ್ರೂ ಇನ್ನೂ ಹೀರೋಗಳ ಲೇವೆಲ್‍ನಲ್ಲೇ ಇದ್ದಾರೆ ಎಂಬುದನ್ನು ಮರೆಯುವ ಹಾಗಿಲ್ಲ.
ಸದ್ಯ ಟೀಮ್ ಇಂಡಿಯಾದ ಯುವ ಆಟಗಾರರು ಸಾಮಾನ್ಯ ಕುಟುಂಬದಿಂದಲೇ ಬಂದವರು.
ರೈತನ ಮಗ ಶುಭ್ಮನ್ ಗಿಲ್‍ಗೆ ನಾಯಕತ್ವ ಸಿಕ್ಕಿದೆ. ಶಾಲಾ ಮಾಲೀಕನ ಮಗ ರಿಷಬ್ ಪಂತ್‍ಗೆ ಉಪನಾಯಕತ್ವದ ಅವಕಾಶ ಸಿಕ್ಕಿದೆ. ಪ್ರೊಫೆಸರ್ ಮಗ ರಾಹುಲ್ ಟೀಮ್ ಇಂಡಿಯಾದ ಆಧಾರಸ್ತಂಭವಾಗಲಿದ್ದಾನೆ. ಹಾರ್ಡ್‍ವೆರ್ ಅಂಗಡಿಯ ಮಾಲೀಕನ ಮಗ ಯಶಸ್ವಿ ಜೈಸ್ವಾಲ್ ಮೇಲೆ ಸಾಕಷ್ಟು ಭರವಸೆಗಳಿವೆ. ಅಷ್ಟೇ ಅಲ್ಲ, ಈ ನಾಲ್ವರ ಪೈಕಿ ಸೀನಿಯರ್ ಆಗಿರುವ ಕೆ.ಎಲ್. ರಾಹುಲ್ ಒಂದು ಹೆಜ್ಜೆ ಮುಂದಿದ್ದಾರೆ. ಇನ್ನುಳಿದ ಮೂವರು ಮಾತ್ರ ಭಾರತ ಕ್ರಿಕೆಟ್ ತಂಡದ ಭವಿಷ್ಯದ ಸೂಪರ್‍ಸ್ಟಾರ್‍ಗಳಾಗುವ ಎಲ್ಲಾ ಅವಕಾಶಗಳು ಇವೆ. ಆದ್ರೆ ಅದು ಅವರವರ ಕೈಯಲ್ಲಿದೆ.
ಅಷ್ಟಕ್ಕೂ ಈ ವಿಷ್ಯಗಳು ಯಾಕೆ ಬಂದ್ವು ಅನ್ನೋದಕ್ಕೆ ಉತ್ತರ ಇಲ್ಲಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು. ಕಾರಣ ಏನೇ ಇರಬಹುದು. ಆದ್ರೆ ಅವರ ಜಾಗವನ್ನು ಯಾರು ತುಂಬುತ್ತಾರೆ ಅನ್ನೋಗೆ ಸದ್ಯಕ್ಕಂತೂ ಉತ್ತರವಿಲ್ಲ. ಈ ಪ್ರಶ್ನೆಗೆ ಉತ್ತರ ಸಿಗಬೇಕಾದ್ರೆ ಇನ್ನೂ ಒಂದು ವರ್ಷ ಕಾಯಲೇಬೇಕು
ಆದ್ರೆ ಟೀಮ್ ಇಂಡಿಯಾ ಕ್ರಿಕೆಟ್‍ನಲ್ಲಿ ಈ ಹಿಂದೆಯೂ ಇಂತಹುದ್ದೇ ಪ್ರಶ್ನೆ ಎದುರಾಗಿತ್ತು. ಸುಮಾರು 13 ವರ್ಷಗಳ ಹಿಂದೆ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಸಡನ್ ಆಗಿ ನಿವೃತ್ತಿ ಘೋಷಿಸಿದಾಗ, ಗಂಭೀರ್, ಸೆಹ್ವಾಗ್ ಸೈಡ್ ಲೈನ್ ಆದಾಗ, ಸಚಿನ್ ವಿದಾಯ ಹೇಳಿದಾಗ, ಮುಂದೆ ಯಾರು ಅನ್ನೋ ಪ್ರಶ್ನೆಗಳು ಎದುರಾಗಿರಲಿಲ್ಲ. ಕಾರಣ ಕಣ್ಣ ಮುಂದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಚೇತೇಶ್ವರ ಪೂಜಾರ, ಅಜಂಕ್ಯಾ ರಹಾನೆಯಂತಹ ಯುವ ಆಟಗಾರರು ಇದ್ರು. ಆದ್ರೆ ಪರಿಸ್ಥಿತಿ ಈಗ ಹಾಗಿಲ್ಲ. ಸದ್ಯದ ಟೆಸ್ಟ್ ಕ್ರಿಕೆಟ್‍ನ ಪರಿಸ್ಥಿತಿಯನ್ನು ನೋಡಿದಾಗ 90ರ ದಶಕದ ಚಿತ್ರಣ ನೆನಪಾಗುತ್ತದೆ. ಶ್ರೀಕಾಂತ್ ಕೈಯಿಂದ ಟೀಮ್ ಇಂಡಿಯಾದ ನಾಯಕತ್ವವನ್ನು ಮಹಮ್ಮದ್ ಅಜರದ್ದೀನ್‍ಗೆ ಕೊಟ್ಟ ಹಾಗೇ ಈಗ ರೋಹಿತ್ ಶರ್ಮಾನ ಉತ್ತರಾಧಿಕಾರಿಯಾಗಿ ಶುಭ್ಮನ್ ಗಿಲ್‍ಗೆ ನೀಡಲಾಗಿದೆ. ಬಿಸಿಸಿಐಗೆ ಭವಿಷ್ಯದ ಯುವ ಟೀಮ್ ಇಂಡಿಯಾವನ್ನು ಕಟ್ಟುವ ಸವಾಲಿದೆ. ಒಂದಂತೂ ಸತ್ಯ ಈ ಹಿಂದೆ ಗಂಗೂಲಿ, ದ್ರಾವಿಡ್, ಧೋನಿ, ವಿರಾಟ್, ರೋಹಿತ್ ನಾಯಕತ್ವದ ಟೆಸ್ಟ್ ತಂಡದ ಹಾಗೇ ಶುಭ್ಮನ್‍ಗೆ ಸಿಕ್ಕಿಲ್ಲ.
ಹಾಗಂತ ಶುಭ್ಮನ್ ಗಿಲ್ ಚಿಂತೆ ಮಾಡುವುದರಲ್ಲಿ ಅರ್ಥವೂ ಇಲ್ಲ. ಸವಾಲುಗಳನ್ನು ಎದುರಿಸಬೇಕು. ಪಂದ್ಯದಿಂದ ಪಂದ್ಯಕ್ಕೆ ಅನುಭವವೂ ಸಿಗುತ್ತದೆ. ಬಲಿಷ್ಠ ತಂಡ ಕಟ್ಟಬೇಕಾದ್ರೆ ಹೋರಾಟ ಮಾಡಲೇಬೇಕು. ಧೈರ್ಯವೂ ಇರಬೇಕು. ಮುಖ್ಯವಾಗಿ ಸಹ ಆಟಗಾರರ ವಿಶ್ವಾಸವನ್ನು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಶುಭ್ಮನ್ ಕಾರ್ಯಪ್ರವೃತ್ತರಾಗಬೇಕು.
ಇದೆಲ್ಲಕ್ಕಿಂತ ಮುಖ್ಯವಾಗಿ ಹೆಡ್ ಕೋಚ್ ಗೌತಮ್ ಗಂಭೀರ್ ಹೆಡ್‍ಮಾಸ್ಟರ್ ರೀತಿ ತಂಡಕ್ಕೆ ಮಾರ್ಗದರ್ಶನ ನೀಡಬಹುದು. ಯಾಕಂದ್ರೆ ಇಲ್ಲಿ ಯಾರು ಸೀನಿಯರ್‍ಗಳಿಲ್ಲ. ಆದ್ರೆ ಎಡವಿದ್ರೆ ತನ್ನ ಕೋಚ್ ಹುದ್ದೆಗೆ ಕಂಟಕವಾಗುತ್ತೆ ಎಂಬ ಆತಂಕವೂ ಗಂಭಿರ್‍ಗಿದೆ.
ಅದು ಏನೇ ಇರಲಿ, ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಯಾರು ಆಗ್ತಾರೆ ಅನ್ನೋದನ್ನು ಕ್ರಿಕೆಟ್ ಅಭಿಮಾನಿಗಳು ಅಷ್ಟೇ ಕಾತರದಿಂದ ಕಾಯುತ್ತಿದ್ದಾರೆ.
ಸನತ್ ರೈ








