ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಹಾವಳಿ ಮಿತಿಮೀರುತ್ತಿದ್ದರೂ, ರಾಜ್ಯ ಗೃಹ ಇಲಾಖೆ ಕಣ್ಮುಚ್ಚಿ ಕುಳಿತಿದೆಯೇ ಎಂಬ ಗಂಭೀರ ಪ್ರಶ್ನೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿದೆ. ಅಕ್ರಮ ವಲಸಿಗರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಜಾಗೃತ ನಾಗರಿಕನ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಿದ ಪೊಲೀಸರ ನಡೆಯನ್ನು ತೀವ್ರವಾಗಿ ಖಂಡಿಸಿರುವ ನ್ಯಾಯಾಲಯ, ಗೃಹ ಇಲಾಖೆಯು ಕೇವಲ ಭಾಷಣ ಮಾಡುವುದರಲ್ಲಿ ಬ್ಯುಸಿಯಾಗಿದೆಯೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದೆ.
ದೇಶದ ಭದ್ರತೆಗೆ ಕುತ್ತು ತರುವ ಅಕ್ರಮ ವಲಸಿಗರನ್ನು ರಕ್ಷಿಸಲು ಪೊಲೀಸರು ಸ್ಥಳೀಯರ ವಿರುದ್ಧವೇ ತಿರುಗಿ ಬಿದ್ದಿರುವ ಘಟನೆ ವ್ಯವಸ್ಥೆಯ ಅಣಕವಾಗಿದೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಹಾಗೂ ವೈದ್ಯರಾದ ಡಾ. ಟಿ. ನಾಗೇಂದ್ರ ಅವರ ವಿರುದ್ಧ ದಾಖಲಾಗಿದ್ದ ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳಿಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.
ಮಾಹಿತಿ ನೀಡಿದವನಿಗೆ ಜೈಲು, ಅಕ್ರಮ ವಲಸಿಗನಿಗೆ ರಕ್ಷಣೆ!
ಬೆಂಗಳೂರಿನ ಹೊಸಸಿದ್ದಾಪುರದಲ್ಲಿ ನಸ್ರೀನಾ ಎಂಬ ಬಾಂಗ್ಲಾದೇಶಿ ಮಹಿಳೆ ಅಕ್ರಮವಾಗಿ ನೆಲೆಸಿರುವ ಬಗ್ಗೆ ಡಾ. ನಾಗೇಂದ್ರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ, ದೇಶದ್ರೋಹಿಗಳನ್ನು ಬಂಧಿಸುವ ಬದಲು, ಮಾಹಿತಿ ನೀಡಿದ ಕೇವಲ 15 ನಿಮಿಷಗಳಲ್ಲಿಯೇ ವೈದ್ಯರ ವಿರುದ್ಧ ಹಲ್ಲೆ ಆರೋಪದಡಿ ಎಫ್ಐಆರ್ ದಾಖಲಿಸಿ, ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಅದೇ ದಿನ ಮಧ್ಯಾಹ್ನ ಕೊಡತಿ ಗ್ರಾಮದಲ್ಲಿ ಮೊಹಮ್ಮದ್ ಶೈದುಲ್ಲಾ ಇಸ್ಲಾಂ ಎಂಬ ಅಕ್ರಮ ಬಾಂಗ್ಲಾ ನಿವಾಸಿ ನೀಡಿದ ಮತ್ತೊಂದು ದೂರಿನ ಆಧಾರದ ಮೇಲೆ ವರ್ತೂರು ಠಾಣಾ ಪೊಲೀಸರು ವೈದ್ಯರ ವಿರುದ್ಧ ಎರಡನೇ ಎಫ್ಐಆರ್ ದಾಖಲಿಸಿದ್ದರು. ಪೊಲೀಸರ ಈ ಅತಿರೇಕದ ನಡೆಯನ್ನು ಹೈಕೋರ್ಟ್ ಎಳೆಎಳೆಯಾಗಿ ಬಿಚ್ಚಿಟ್ಟಿದೆ.
ಗೃಹ ಸಚಿವರಿಗೆ ಪರೋಕ್ಷ ಚಾಟಿ ಬೀಸಿದ ನ್ಯಾಯಾಲಯ
ರಾಜ್ಯ ಗೃಹ ಇಲಾಖೆಯ ಕಾರ್ಯವೈಖರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಹೆಸರು ಉಲ್ಲೇಖಿಸದೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದೆ. ಅಕ್ರಮ ವಲಸೆಯನ್ನು ನಿಯಂತ್ರಿಸುವ ಕೆಲಸ ಬಿಟ್ಟು ಗೃಹ ಇಲಾಖೆ ಏನು ಮಾಡುತ್ತಿದೆ? ಕೇವಲ ರಾಜಕೀಯ ಭಾಷಣಗಳಲ್ಲಿ ನಿರತವಾಗಿದೆಯೇ ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ತರಾಟೆಗೆ ತೆಗೆದುಕೊಂಡರು.
ಓಲೈಕೆ ರಾಜಕಾರಣ ನಿಲ್ಲಿಸಿ ಎಂದ ಹೈಕೋರ್ಟ್
ದೂರುದಾರರ ವಿಳಾಸ ಬಾಂಗ್ಲಾದೇಶ ಎಂದಿದ್ದರೂ, ಅವರ ದೂರನ್ನು ಆಧರಿಸಿ ನಮ್ಮದೇ ದೇಶದ ಪ್ರಜೆಯ ಮೇಲೆ ಪೊಲೀಸರು ಹೇಗೆ ಕ್ರಿಮಿನಲ್ ಪ್ರಕರಣ ದಾಖಲಿಸುತ್ತಾರೆ ಎಂದು ನ್ಯಾಯಾಲಯ ಆಶ್ಚರ್ಯ ವ್ಯಕ್ತಪಡಿಸಿದೆ. ಯಾವುದೇ ವೈದ್ಯಕೀಯ ಪರೀಕ್ಷೆ ಇಲ್ಲ, ಗಾಯದ ಪ್ರಮಾಣಪತ್ರವಿಲ್ಲ, ಆದರೂ ದೂರು ನೀಡಿದ ಕೇವಲ ಹದಿನೈದು ನಿಮಿಷದಲ್ಲಿ ಎಫ್ಐಆರ್ ದಾಖಲಾಗುತ್ತದೆ ಎಂದರೆ ಇದು ಕಾನೂನಿನ ಸ್ಪಷ್ಟ ದುರುಪಯೋಗ. ಅಕ್ರಮ ವಲಸಿಗರನ್ನು ಸರ್ಕಾರ ಮತ್ತು ಪೊಲೀಸರು ಈ ರೀತಿ ಬೆಂಬಲಿಸಿದರೆ, ಅದು ನೇರವಾಗಿ ದೇಶದ ಭದ್ರತೆಗೆ ಆಪತ್ತು ತರುತ್ತದೆ. ಇಂತಹ ಓಲೈಕೆ ರಾಜಕಾರಣವನ್ನು ಮತ್ತು ಸಮಾಧಾನಪಡಿಸುವ ತಂತ್ರವನ್ನು ಮೊದಲು ನಿಲ್ಲಿಸಿ ಎಂದು ಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ.
ಮನೆ ಮಾಲೀಕರಿಗೂ ಕಾದಿದೆ ಸಂಕಷ್ಟ
ಕೆಲವು ಸಾವಿರ ರೂಪಾಯಿ ಹೆಚ್ಚುವರಿ ಬಾಡಿಗೆಯ ಆಸೆಗೆ ಬಿದ್ದು ದಾಖಲೆಗಳಿಲ್ಲದ, ವೀಸಾ ಇಲ್ಲದ ವಿದೇಶಿಯರಿಗೆ ಮತ್ತು ಅಕ್ರಮ ವಲಸಿಗರಿಗೆ ಆಶ್ರಯ ನೀಡುವ ಮನೆ ಮಾಲೀಕರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಹಣದಾಸೆ ದೇಶದ ಭದ್ರತೆಗಿಂತ ದೊಡ್ಡದಾಗಬಾರದು. ಇನ್ನು ಮುಂದೆ ದೇಶದ ಭದ್ರತೆಯ ದೃಷ್ಟಿಯಿಂದ ಅಕ್ರಮ ವಲಸಿಗರ ಬಗ್ಗೆ ಮಾಹಿತಿ ನೀಡುವ ಜಾಗೃತ ನಾಗರಿಕರ ವಿರುದ್ಧ ಯಾವುದೇ ಕಾರಣಕ್ಕೂ ಎಫ್ಐಆರ್ ದಾಖಲಿಸಬಾರದು ಎಂದು ಹೈಕೋರ್ಟ್ ರಾಜ್ಯ ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದೆ.








