ಕರ್ನಾಟಕ ಕರಾವಳಿಯ ಯಕ್ಷಗಾನ ಕಲೆ ತನ್ನದೇ ಆದ ಖ್ಯಾತಿಯನ್ನು ಪಡೆದುಕೊಂಡಿದೆ. ಭಾರತೀಯ ರಂಗಭೂಮಿ ಕಲೆಗಳಲ್ಲಿ ಒಂದಾದ ಯಕ್ಷಗಾನದಲ್ಲಿ ಮಹಿಳೆಯರು ಬಣ್ಣಹಚ್ಚುವುದು ಅಪರೂಪದ ಸಂಗತಿ. ಇಂತಹ ಸಂದರ್ಭದಲ್ಲಿ ಮುಸ್ಲಿಂ ಯುವತಿಯೊಬ್ಬಳು ತನ್ನೆಲ್ಲಾ ಕಟ್ಟುಪಾಡುಗಳನ್ನು ಮೀರಿ ಕಲಾ ಕೌಶಲ್ಯವನ್ನು ಸಾಧಿಸಲು ಯಕ್ಷಗಾನವನ್ನು ಆಯ್ಕೆ ಮಾಡಿಕೊ0ಡು ಹಲವು ಪಾತ್ರಗಳಲ್ಲಿ ಅಭಿನಯಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.

ಹೌದು, ತನು ವಿಟ್ಲ ಎಂಬ ಹೆಸರಿನ ಅರ್ಷಿಯಾ ಯಕ್ಷಗಾನದ ಮೂಲಕ ತನ್ನೊಳಗಿನ ಪ್ರತಿಭೆಯನ್ನ ಹೊರಹಾಕಿದ್ದಾಳೆ. ಬಂಟ್ವಾಳ ತಾಲೂಕಿನ ವಿಟ್ಲ ನಿವಾಸಿಯಾದ ಅರ್ಷಿಯಾ ಆಟೋಮೊಬೈಲ್ ಕಂಪೆನಿಯೊಂದರಲ್ಲಿ ಉದ್ಯೋಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನಕ್ಕೆ ಆಕರ್ಷಿತಳಾದ ಈಕೆ, ಯಕ್ಷಗಾನವನ್ನ ಕರಗತ ಮಾಡಿಕೊಂಡು ತನ್ನೂರಿನಲ್ಲಿ ನಡೆದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಮಹಿಷಾಸುರನ ಪಾತ್ರ ಮಾಡೋ ಮೂಲಕ ಯಕ್ಷಗಾನ ಲೋಕಕ್ಕೆ ಪಾದಾರ್ಪಣೆ ಮಾಡಿದಳು. ಅಂದಿನಿಂದ ಯಕ್ಷಗಾನ ಕಲಾ ಪ್ರಕಾರ, ಪಾತ್ರ, ಚೆಂಡೆ ಧ್ವನಿಯಿಂದ ಆಕರ್ಷಿತರಾಗಿ ಯಕ್ಷಗಾನ ಕಲಾ ಕಲಿಯಲು ಆರಂಭಿಸಿ ಇದೀಗಾ ತನು ವಿಟ್ಲ ಎಂದು ಕರಾವಳಿಯಲ್ಲಿ ಖ್ಯಾತಿ ಪಡೆದುಕೊಂಡಿದ್ದಾಳೆ.

ತನ್ನ ಶಾಲಾ ದಿನಗಳಲ್ಲಿ ಸ್ನೇಹಿತರು ಯಕ್ಷಗಾನ ಪ್ರದರ್ಶನ ನೀಡಿದಾಗ ನಾನು ಅವರ ಪಾತ್ರವನ್ನ ಹಾಗೂ ನೃತ್ಯದ ಭಂಗಿಯನ್ನು ನೋಡಿ ಕಲಿಯುತ್ತಿದ್ದೆ ಎಂದು ತಿಳಿಸಿದ್ದಾರೆ. ನಾನು ಮುಸ್ಲಿಂ ಆಗಿರುವುದರಿಂದ ಯಕ್ಷಗಾನಕ್ಕೆ ಹೋಗುತ್ತೇನೆ ಎಂದು ಭಾವಿಸಿರಲಿಲ್ಲ ಎಂದು ಅರ್ಷಿಯಾ ತಿಳಿಸಿದ್ದಾರೆ. ಸದ್ಯ ಮಂಗಳೂರಿನ ಕಡಲಿ ಕಲಾ ಕೇಂದ್ರದಲ್ಲಿ ರಮೇಶ ಭಟ್ ನೇತೃತ್ವದಲ್ಲಿ ಅರ್ಷಿಯಾ ಯಕ್ಷಗಾನ ಕಲಿಯುತ್ತಿದ್ದು,ಮಂಗಳೂರು, ಕಾರವಾರ ಹಾಗೂ ಉಡುಪಿಯಲ್ಲಿ ಹಲವಾರು ಪ್ರದರ್ಶನಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ.
ಅರ್ಷಿಯಾ ಯಕ್ಷಗಾನ ಕಲಿಕೆಗೆ ಅವರ ಕುಟುಂಬ ಮುಕ್ತ ಅವಕಾಶ ನೀಡಿದೆ, ಆದರೆ, ಅವರ ಸಮುದಾಯದ ಕೆಲವರು ಪೆÇ್ರೀತ್ಸಾಹ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅರ್ಷಿಯಾ. ಎಲ್ಲಾ ತೊಂದರೆಗಳನ್ನು ಮೆಟ್ಟಿನಿಂತು ಯಶಸ್ವಿಯಾಗಿ ಯಕ್ಷಗಾನ ರಂಗಕ್ಕೆ ಬಂದಿದ್ದಾರೆ. ಯಕ್ಷಗಾನ ಪ್ರಸಂಗದಲ್ಲಿ ಶ್ರೀನಿವಾಸ್ ಕಲ್ಯಾಣ, ಸುದರ್ಶನೋಪಕ್ಯಾನ, ಕಡಂಬ ಕೌಶಿಕ, ಶಂಬವಿ ವಿಜಯ, ರಕ್ತಬೀಜಾಸುರ ವದೆ ಮತ್ತು ಇನ್ನೂ ಅನೇಕ ಪಾತ್ರಗಳನ್ನು ನಿರ್ವಹಿಸಿರುವ ಅರ್ಷಿಕಾ, ತನ್ನ ಮುಂದಿನ ಗುರಿ ಚೆಂಡೆ ವಾದ್ಯವನ್ನು ಕಲಿಯುವುದು ಎಂದು ತಿಳಿಸಿದ್ದಾರೆ.

ಒಟ್ಟಾರೆ, ಯಕ್ಷಗಾನ ರಂಗಭೂಮಿಯಲ್ಲಿ ಮುಸ್ಲಿಂ ಯುವತಿಯೊಬ್ಬಳು ತನ್ನೆಲ್ಲಾ ಕಟ್ಟುಪಾಡುಗಳನ್ನ ಮೀರಿ ಯಕ್ಷಗಾನ ಕಲಿಯುತ್ತಿರುವುದು ನಿಜಕ್ಕೂ ಶ್ಲಾಘನೀಯ, ಈ ಮೂಲಕ ಕಲೆಗೆ ಯಾವುದೇ ಜಾತಿ,ಧರ್ಮದ ತಾರತಮ್ಯವಿಲ್ಲ ಎಂದು ಹೇಳಿದ್ದಾರೆ.








