ಪುಣೆ: ಮಹಾರಾಷ್ಟ್ರದ ಬಿಜೆಪಿ ನಾಯಕ ನಿತೇಶ್ ರಾಣೆ ಅವರು ಭಾನುವಾರ ನೀಡಿದ ಹೇಳಿಕೆಯೊಂದು ಹೊಸ ಚರ್ಚೆಗೆ ನಾಂದಿ ಹಾಡಿದೆ. ಮುಸ್ಲಿಮರು ವಾಸಿಸುವ ಪ್ರದೇಶಗಳಾದ ‘ಮೊಹಲ್ಲಾ’ಗಳಲ್ಲಿ ಭಗವದ್ಗೀತೆಯನ್ನು ಪ್ರಚಾರ ಮಾಡುವುದರಿಂದ ಹಿಂದೂ ರಾಷ್ಟ್ರದ ಪರಿಕಲ್ಪನೆ ಸಾಕಾರಗೊಳ್ಳಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಣೆ, “ಭಗವದ್ಗೀತೆ ಎಂದಿಗೂ ದ್ವೇಷವನ್ನು ಅಥವಾ ಧಾರ್ಮಿಕ ಮತಾಂತರಗಳನ್ನು ಬೋಧಿಸುವುದಿಲ್ಲ. ಅದರ ಬೋಧನೆಗಳು ಮೊಹಲ್ಲಾಗಳಿಗೆ ಹರಡಿದರೆ, ಅವರ ಆಲೋಚನೆಗಳು ಸಹ ರೂಪಾಂತರಗೊಳ್ಳುತ್ತವೆ. ಇದು ನಮ್ಮ ಹಿಂದೂ ರಾಷ್ಟ್ರವನ್ನು ಬಲಪಡಿಸುತ್ತದೆ” ಎಂದು ಹೇಳಿದರು.
ಭಗವದ್ಗೀತೆಯು ಸಾಮರಸ್ಯ ಮತ್ತು ಚಿಂತನೆಗೆ ಹಚ್ಚುವಂತಹ ಬೋಧನೆಗಳನ್ನು ಹೊಂದಿದೆ. ಅದರ ಸಂದೇಶ ಪ್ರತಿಯೊಂದು ಮೂಲೆಗೂ ತಲುಪಬೇಕು ಎಂಬುದು ಅವರ ಆಶಯವಾಗಿದೆ.
ಈ ಹೇಳಿಕೆಯು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ವಿಭಿನ್ನ ಅಭಿಪ್ರಾಯಗಳಿಗೆ ಕಾರಣವಾಗಿದೆ. ಕೆಲವರು ಇದನ್ನು ಹಿಂದೂ ರಾಷ್ಟ್ರದ ಅಜೆಂಡಾದ ವಿಸ್ತರಣೆಯ ಭಾಗವೆಂದು ಪರಿಗಣಿಸಿದರೆ, ಇನ್ನು ಕೆಲವರು ಇದು ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.








