ಕರ್ನಾಟಕ ರಾಜಕೀಯದಲ್ಲಿ ಮತ್ತೆ ಬದಲಾವಣೆ ಅಲೆ ಎಬ್ಬಿಸೋ ಶಕ್ತಿ ತುಂಬಿದ ಮಾತು ಕೇಳಿಬಂದಿದೆ. ರಾಮನಗರದ ಶಾಸಕ ಇಕ್ಸಾಲ್ ಹುಸೇನ್, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೂರಕ್ಕೂ ಹೆಚ್ಚು ಶಾಸಕರು ಈಗಾಗಲೇ ನಾಯಕತ್ವ ಬದಲಾವಣೆಗೆ ತಯಾರಾಗಿದ್ದಾರೆ. ಅವರು ಬಯಸುವ ವ್ಯಕ್ತಿ ಡಿಕೆಶಿಯವರೇ ಎಂದು ಹೇಳಿಕೆ ನೀಡಿದ್ದಾರೆ.
ಇಕ್ಸಾಲ್ ಹುಸೇನ್ ಅವರ ಈ ಹೇಳಿಕೆ ಈಗ ರಾಜ್ಯ ರಾಜಕೀಯದಲ್ಲಿ ಚರ್ಚೆಯ ಮಾತುಕತೆಯಾಗಿ ಪರಿಗಣಿಸಲ್ಪಡುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಕೆಲ ವರ್ಷಗಳಿಂದಲೇ ಡಿಕೆಶಿಯವರಿಗೆ ಸಿಎಂ ಸ್ಥಾನ ನೀಡಬೇಕೆಂಬ ಒತ್ತಡವಿದೆ. ಪಕ್ಷವನ್ನು ಸಂಕಷ್ಟದ ದಿನಗಳಲ್ಲಿ ಮುನ್ನಡೆಸಿದವರು ಡಿಕೆಶಿಯವರೇ ಎಂದು ಇಕ್ಸಾಲ್ ಹುಸೇನ್ ನುಡಿದರು.
ಪಕ್ಷ ಸಂಘಟನೆಗೆ ಅಕ್ಷರಶಃ ಜೀವ ಬಿಟ್ಟು ದುಡಿದವರು ಡಿಕೆಶಿ. ಇವತ್ತು ನಾವು ಅಧಿಕಾರಕ್ಕೆ ಬಂದಿದ್ದೇವೆ ಅಂದ್ರೆ ಅದು ಅವರ, ಶ್ರಮ ಹಾಗೂ ರಾಜಕೀಯ ತಂತ್ರದ ಫಲ. ಅವರಿಗೊಂದು ಅವಕಾಶ ಸಿಗಲೇಬೇಕು ಎಂದರು.
ನೂರಕ್ಕೂ ಹೆಚ್ಚು ಶಾಸಕರು ಬದಲಾವಣೆ ಬಯಸುತ್ತಿದ್ದಾರೆ ಅನ್ನೋದು ನಿಜ. ಈಗ ನಿಜವಾದ ನಾಯಕತ್ವ ಬೇಕು ಅಂತ ಅವರ ಬಯಕೆ. ಡಿಕೆಶಿಯವರು ತಮ್ಮ ನಾಯಕತ್ವ ಶಕ್ತಿಯಿಂದ ಪಕ್ಷಕ್ಕೆ ಹೊಸ ಉಜ್ವಲ ಭವಿಷ್ಯ ಕೊಡಬಲ್ಲರು, ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು..








