ದೇವಸ್ಥಾನದ ಗಂಟೆ ಹೊಡೆಯುವುದಕ್ಕಿಂತ, ಶಾಲೆಗಳ ಗಂಟೆ ಬಾರಿಸುವುದು ಸಾಮಾಜಿಕವಾಗಿ ಹೆಚ್ಚು ಮಹತ್ವದ್ದು ಎಂಬ ಹೇಳಿಕೆಯಿಂದ ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತೆ ಸುದ್ದಿಯಲ್ಲಿದ್ದಾರೆ. ಕೊಪ್ಪಳ ಜಿಲ್ಲೆಯ ಹಿರೇವಂಕಲಕುಂಟ ಗ್ರಾಮದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ಮಧು ಬಂಗಾರಪ್ಪ ಅವರು ಬಿಜೆಪಿ ಮೇಲೆ ಕಿಡಿಕಾರುತ್ತಾ, ಬಿಜೆಪಿ ಹಿಂದುತ್ವ… ಹಿಂದುತ್ವ ಅಂತ ಮಾತಾಡ್ತಿರ್ತಾರೆ. ಅವರಿಗೆ ಹಿಂದುತ್ವದ ಬದನೆಕಾಯಿ ಗೊತ್ತಾ? ಎಂದು ತಿರುಗೇಟು ನೀಡಿದರು. ಅವರು ತಮ್ಮ ಭಾಷಣದಲ್ಲಿ, ಧರ್ಮ ಮತ್ತು ಶಿಕ್ಷಣದ ಬಗ್ಗೆ ತಮ್ಮ ನಿಲುವನ್ನು ಬಹಿರಂಗವಾಗಿ ವ್ಯಕ್ತಪಡಿಸಿದರು.
ನನ್ನ ಕ್ಷೇತ್ರದ ಜನರು ಆಗಾಗೆ ದೇವಸ್ಥಾನ ನಿರ್ಮಾಣಕ್ಕೆ ಅಥವಾ ಜೀರ್ಣೋದ್ಧಾರಕ್ಕೆ ಹಣ ಕೇಳಲು ಬರುತ್ತಾರೆ. ಆದರೆ ನಾನು ಯಾವ ದೇವಸ್ಥಾನಕ್ಕೂ ಹಣ ನೀಡುವುದಿಲ್ಲ. ಏಕೆಂದರೆ ದೇವಾಲಯದ ಗಂಟೆ ಹೊಡೆಯುವುದರಿಂದ ನೇರವಾಗಿ ಸಮಾಜಕ್ಕೆ ಉಪಕಾರವಾಗುವುದಿಲ್ಲ. ಆದರೆ ಒಂದು ಶಾಲೆಯ ಗಂಟೆ ಹೊಡೆಯುವ ಮೂಲಕ ಸಾವಿರಾರು ಮಕ್ಕಳ ಭವಿಷ್ಯವನ್ನು ರೂಪಿಸಬಹುದು, ಎಂದು ಸಚಿವರು ಸ್ಪಷ್ಟಪಡಿಸಿದರು.
ಮಧು ಬಂಗಾರಪ್ಪ ಅವರು ತಮ್ಮ ಭಾಷಣದಲ್ಲಿ ಶಿಕ್ಷಣದ ಮಹತ್ವವನ್ನು ಮುಂದಿಟ್ಟುಕೊಂಡು, ಈ ದಿನಗಳಲ್ಲಿ ನಮ್ಮ ಮಕ್ಕಳಿಗೆ ನೂರು ಕೋಟಿ ದೇವಾಲಯಗಳಿಗಿಂತ ಒಂದು ಉತ್ತಮ ಶಾಲೆ ಬೇಕು. ಶಿಕ್ಷಣವೇ ನಮ್ಮ ಸಮಾಜವನ್ನು ಉನ್ನತಿಗೆ ಕರೆತರುತ್ತದೆ. ದೇವರು ತಾನಾಗಿಯೇ ಎಲ್ಲೆಡೆಯಲ್ಲಿದ್ದಾನೆ. ಆದರೆ ಶಾಲೆ ಮಾತ್ರ ದಾರಿ ತೋರುವ ದೇವಾಲಯ ಎಂದು ಹೇಳಿದರು.








