ಕರ್ನಾಟಕದ ಜೈಲುಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಳಿಯಿಂದ ಬಹಿರಂಗವಾಗುತ್ತಿದ್ದಂತೆ, ಮಾಜಿ ಗೃಹ ಸಚಿವ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗೃಹ ಇಲಾಖೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿ ಉಗ್ರರಿಗೆ ಸಾಮಾನ್ಯ ಕೈದಿಗಳಿಗೆ ಸಿಗದ ಎಲ್ಲಾ ಸೌಲಭ್ಯ ಸಿಗುತ್ತಿದೆ. ಕೆಲವರು ಅವರಿಗಾಗಿ ಊಟ ತಯಾರಿಸುತ್ತಿದ್ದಾರೆ, ಇನ್ನಷ್ಟು ವಿಶೇಷ ವ್ಯವಸ್ಥೆಗಳು ಕೂಡಾ ಮಾಡಲಾಗಿದೆ. ಇದನ್ನೆಲ್ಲಾ ನೋಡಿದರೂ ಗೃಹ ಇಲಾಖೆ ನಿದ್ದೆಗೆ ಜಾರಿದಂತೆ ನಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಇಂದು ರಾಜ್ಯದ ಜೈಲುಗಳಲ್ಲಿ ಉಗ್ರರು ಕೈ ಮುಗಿದು ಬರುವಂತಹ ಪರಿಸ್ಥಿತಿ ಇಲ್ಲ. ಅವರಿಗೆ ಜೈಲಿನೊಳಗೆ ರಾಜಾತಿಥ್ಯ ಸಿಗುತ್ತೆ. ಇದರ ಹಿಂದೆ ಯಾರ ನೆರವು ಇದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದರು.
ಅಕ್ರಮ ವಲಸಿಗರು ರಾಜ್ಯದಲ್ಲಿ ಭೀತಿಯ ವಾತಾವರಣ ಸೃಷ್ಟಿಸುತ್ತಿದ್ದಾರೆ. ಅವರನ್ನು ತಕ್ಷಣವೇ ಪತ್ತೆಹಚ್ಚಿ ರಾಜ್ಯದಿಂದ ಹೊರಹಾಕಬೇಕು. ಜೈಲಿನೊಳಗಿನ ಚಟುವಟಿಕೆಗಳ ಬಗ್ಗೆ ಭದ್ರತಾ ವ್ಯವಸ್ಥೆ ಕಟ್ಟುನಿಟ್ಟಾಗಿ ನಿಗಾ ವಹಿಸಬೇಕು. ಇಲ್ಲವಾದರೆ ರಾಜ್ಯದ ಭದ್ರತೆಗೆ ಅಪಾಯವಿದೆ ಎಂದು ಎಚ್ಚರಿಸಿದರು.








