ಬಡತನ ಅವನ ಕಾಲಿಗೆ ಬೂಟ್‍ಗಳನ್ನು ಕೊಡಲಿಲ್ಲ. ಆದ್ರೆ ಹೃದಯಕ್ಕೆ ಧೈರ್ಯ ಕೊಟ್ಟಿತ್ತು. ಹಸಿವು ಆತನ ಹೊಟ್ಟೆಯನ್ನು ಸುಡುವಂತೆ ಮಾಡಿತ್ತು. ಆದ್ರೆ ಕಂಡ ಕನಸುಗಳನ್ನು ಸುಡಲಿಲ್ಲ. ಹೊಟ್ಟೆ ತುಂಬಾ ಊಟ ಮಾಡಲು ದುಡ್ಡಿರಲಿಲ್ಲ. ಆದ್ರೆ ಅಪ್ಪ – ಅಮ್ಮನ ಶ್ರಮ, ಅಣ್ಣಂದಿರ ತ್ಯಾಗವೇ ಆತನ ಬದುಕಿಗೆ ಪ್ರೇರಣೆಯಾಗಿತ್ತು. ತನ್ನ ಪ್ರತಿಭೆ, ಸಾಮಥ್ರ್ಯದ ಮೇಲೆ ಅಚಲವಾದ ನಂಬಿಕೆ ಇತ್ತು. ಆದ್ರೆ ಫುಟ್‍ಬಾಲ್ ತರಬೇತಿ ಪಡೆಯಲು ಕೈಯಲ್ಲಿ ಕಾಸಿರಲಿಲ್ಲ. ಆದ್ರೆ ದಾರಿ ಕಾಣದ ಸಮಯದಲ್ಲಿ ಆ ದೇವರೇ ಗುರುವಿನ ರೂಪದಲ್ಲಿ ಬಂದು ಅವನ ಕನಸಿಗೆ ದಿಕ್ಕು ತೋರಿಸಿತ್ತು.
ಹೌದು, ಪ್ರತಿ ಹೆಜ್ಜೆ, ಹೆಜ್ಜೆಯಲ್ಲೂ ಒಂದಲ್ಲ ಒಂದು ರೀತಿಯ ಸವಾಲುಗಳನ್ನು ಎದುರಿಸಬೇಕಾಗಿತ್ತು. ಆದ್ರೆ ಎಲ್ಲವನ್ನೂ ಮೆಟ್ಟಿ ನಿಂತು ಸಾಧನೆಯ ಶಿಖವರನ್ನೇರಿದ್ರೂ ಇಂದಿಗೂ ತನ್ನ ಹಳೆಯ ಕಷ್ಟದ ದಿನಗಳನ್ನು ಮರೆತಿಲ್ಲ. ಸೂಪರ್‍ಸ್ಟಾರ್ ಆಟಗಾರನಾಗಿದ್ರೂ ಬೀದಿಯಲ್ಲಿ ಬಂದು ಆಡಲು ಹಿಂದೆ ಮುಂದೆ ಯೋಚನೆ ಮಾಡಲ್ಲ. ಯಾಕಂದ್ರೆ ನೇಮ್-ಫೇಮ್, ದುಡ್ಡು ಗೌರವೇ ಬದುಕು ಅಲ್ಲ. ಆತನಿಗೆ ಎಲ್ಲಕ್ಕಿಂತ ಮುಖ್ಯ ಮನುಷ್ಯತ್ವ. ಅದೇ ಆತನ ಹೆಜ್ಜೆ ಗುರುತು..!
ಹೆಸರು – ಮೊಯಿಸೆಸ್ ಕೈಸೆಡೊ ಕೊರೊಜೊ. ಈಕ್ವೇಡಾರ್ ಫುಟ್‍ಬಾಲ್ ತಂಡದ ನಾಯಕ. ಚೆಲ್ಸಿಯಾ ಕ್ಲಬ್‍ನ ನಂಬಿಗಸ್ಥ ಮಿಡ್ ಫೀಲ್ಡರ್. ಸಾವಿರಾರು ಬಡ ಫುಟ್‍ಬಾಲ್ ಆಟಗಾರರ ಬದುಕಿಗೆ ಬೆಳಕು ನೀಡುವ ದೀಪ.
ಬೀದಿ ಹುಡುಗನನ್ನು ಕೈ ಹಿಡಿದು ಮುನ್ನಡೆಸಿದ್ದ ಮಹಾಗುರು..!
ನವೆಂಬರ್2, 2001. ಈಕ್ವೇಡಾರ್‍ನ ಸ್ಯಾಂಟೊ ಡೊಮಿಂಗ್ ಎಂಬ ಸಣ್ಣ ಊರಿನ ಮಾಸಿಮಿಲಿಯಾನೊ ಕೈಸೆಡೊ ದಂಪತಿಯ ಹತ್ತನೇಯ ಮಗ ಮೊಯಿಸೆಸ್ ಕೈಸೆಡೊ. ತಂದೆ ಆಟೋ ಡ್ರೈವರ್. ಹತ್ತು ಮಕ್ಕಳ ಲಾಲನೆ, ಪಾಲನೆಯ ಜೊತೆಗೆ ತಾಯಿ ಬೀದಿ ಬದಿಯಲ್ಲಿ ಹೂ, ತರಕಾರಿ, ಸೊಪ್ಪು ಮಾರಾಟ ಮಾಡುತ್ತಿದ್ದಳು. ದಿನವೀಡಿ ದುಡಿದ್ರೆ ಮಾತ್ರ ಒಂದು ಹೊತ್ತಿನ ಊಟ. ಇಂತಹ ವಾತಾವರಣದಲ್ಲಿ ಬೆಳೆದ ಬಾಲಕ ಮೊಯಿಸೆಸ್, ಬೀದಿಯಲ್ಲಿ ಓಡಾಡಿಕೊಂಡು ಬರಿಗಾಲಿನಲ್ಲಿ ಫುಟ್‍ಬಾಲ್ ಆಡುತ್ತಿದ್ದ. ಈ ಹುಡುಗನ ಕಾಲಿನಲ್ಲಿ ಚೆಂಡು ನರ್ತಿಸಿರುವುದನ್ನು ನೋಡುತ್ತಿದ್ದ ಸ್ಥಳೀಯ ಕೋಚ್ ಇವಾನ್ ಗೆರಾ ಅಚ್ಚರಿಗೊಂಡಿದ್ದರು. ನೀಲಿಗಣ್ಣಿನ ಹುಡುಗ ಸಿಕ್ಕೇ ಬಿಟ್ಟ ಅಂತ ಖುಷಿಯಲ್ಲಿ ಮೊಯಿಸೆಸ್‍ಗೆ ಗುರುವಾಗಿ, ಮಾರ್ಗದರ್ಶಕರಾದ್ರು. ಊಟ, ತಿಂಡಿ, ಪ್ರಯಾಣಕ್ಕೆ ದುಡ್ಡುಕೊಟ್ಟು, ಬೆಳಗ್ಗೆ ಬೇಗನೇ ಎಬ್ಬಿಸಿ ಕಠಿಣ ತರಬೇತಿಯನ್ನು ನೀಡಿದ್ರು. ಬೀದಿ ಹುಡುಗನ ಮನಸ್ಸಲ್ಲಿ ವಿಶ್ವದ ಶ್ರೇಷ್ಠ ಫುಟ್‍ಬಾಲ್ ಆಗುವ ಕನಸಿನ ಬೀಜವನ್ನು ಬಿತ್ತಿದ್ದರು.
ಅಪ್ಪ – ಅಮ್ಮನ ತ್ಯಾಗ.. ಅಣ್ಣಂದಿರ ಪ್ರೇರಣೆ..!
ಮಗನ ಫುಟ್‍ಬಾಲ್ ಭವಿಷ್ಯಕ್ಕೆ ಅಪ್ಪ – ಅಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದರು. ಹಸಿವನ್ನು ಸಹಿಸಿಕೊಂಡು ಅಣ್ಣಂದಿರುವ ತಮ್ಮನಿಗಾಗಿ ಫುಟ್‍ಬಾಲ್ ಸ್ಟಡ್ಸ್‍ಗÀಳನ್ನು ತಂದುಕೊಟ್ಟಿದ್ದರು. ಅಲ್ಲದೆ ದಕ್ಷಿಣ ಅಮೆರಿಕಾದ ಪ್ರಸಿದ್ಧ ಇಂಡಿಪೆಂಡಿಯೆಂಟೆ ಡೆಲ್ ವ್ಯಾಲೆ ಕ್ಲಬ್‍ಗೆ ಸೇರಿಸುವಲ್ಲಿ ಗುರು ಇವಾನ್ ಮತ್ತು ಅಣ್ಣಂದಿರ ಶ್ರಮ ಸಾಕಷ್ಟಿದೆ. ನಂತರ ಮೊಯಿಸೆಸ್ ಬದುಕಿನ ಚಿತ್ರಣವೇ ಬದಲಾಯ್ತು.
ಫುಟ್‍ಬಾಲ್ ಮೈದಾನದ ಆಕ್ಟೋಪಸ್ ಕೈಸೆಡೊ.!
ತನ್ನ 17ನೇ ಹರೆಯದಲ್ಲೇ ಕೈಸೆಡೊ ಪಕ್ಕಾ ವೃತ್ತಿಪರ ಫುಟ್‍ಬಾಲ್ ಆಟಗಾರನಾದ. ಎದುರಾಳಿ ಆಟಗಾರರ ಕಾಲಿಂದ ಚೆಂಡನ್ನು ಕಿತ್ತುಕೊಳ್ಳುವ ವೈಖರಿಯೇ ಬೆರಗುಮೂಡಿಸುವಂತಿದೆ. ಮಿಡ್‍ಫೀಲ್ಡ್ ಆಟಗಾರನಾಗಿದ್ರೂ ಅಂಗಣದಲ್ಲಿ ಚೆಂಡು ಎಲ್ಲಿಗೆ ಹೋಗುತ್ತದೆಯೋ ಅಲ್ಲಿ ಮೊಯಿಸೆಸ್‍ನ ನೆರಳಿರುತ್ತಿತ್ತು. ಹೀಗಾಗಿ ಮೊಯಿಸೆಸ್‍ಗೆ ಆಕ್ಟೋಪಸ್ ಅಂತ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. ಈ ನಡುವೆ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಕೈಸೆಡೊ ಒಂದು ವರ್ಷ ಅಂಗಣದಿಂದ ದೂರ ಉಳಿದಿದ್ದ. ನಂತರ 20 ವಯೋಮಿತಿಯ ಲೈಬರ್ಟಡೋರ್ಸ್ ಫೈನಲ್‍ನಲ್ಲಿ ಅದ್ಭುತ ಪ್ರದರ್ಶನ ನೀಡಿ ಅದ್ಭುತವಾಗಿಯೇ ಕಮ್ ಬ್ಯಾಕ್ ಮಾಡಿದ್ದ.
ಆತ್ಮವಿಶ್ವಾಸ ತುಂಬಿದ್ದ ಅಮ್ಮನ ಹಿತವಚನಗಳು..!
ಇನ್ನು, 2021ರಲ್ಲಿ ಇಂಗ್ಲೆಂಡ್‍ನ ಬ್ರೈಟನ್ ಕ್ಲಬ್ ತಂಡಕ್ಕೆ ಸೇರಿಕೊಂಡಾಗ ಕೈಸೆಡೊ ಖಿನ್ನನಾಗಿದ್ದ. ಭಾಷೆ, ಊರು ಗೊತ್ತಿಲ್ಲ. ಜೊತೆಗೆ ಕೋವಿಡ್ ಆತಂಕ ಬೇರೆ ಇತ್ತು. ಅಣ್ಣಂದಿರು, ಅಪ್ಪ – ಅಮ್ಮನನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಆದ್ರೂ ಭವಿಷ್ಯಕಟ್ಟಿಕೊಳ್ಳಲು ಇಂಗ್ಲೆಂಡ್‍ಗೆ ತೆರಲೇಬೇಕಾಯ್ತು. ಅಲ್ಲಿ ಆತನನ್ನು ಒಂಟಿತನ ಕಾಡುತ್ತಿತ್ತು. ಅಮ್ಮನ ನೆನಪಾದಾಗ ಗಂಟೆಗಟ್ಟಲೇ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದ. ಅಮ್ಮನ ಪ್ರತಿ ಮಾತುಗಳು, ಹಿತವಚನಗಳು ಆತನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಲ್ಲದೇ ಮನುಷ್ಯತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಯ್ತು.
ಬೀದಿಯಲ್ಲಿ ಫುಟ್‍ಬಾಲ್ ಆಡಲು ಬರುತ್ತಿಯಾ..? ಗುರುವಿನ ಮಾತು ತಪ್ಪದ ಶಿಷ್ಯ..!
ಈ ನಡುವೆ, ಮುಳುಗುತ್ತಿದ್ದ ಬೆಲ್ಜಿಯಂ ಬೀರ್‍ಶಾಟ್ ಕ್ಲಬ್‍ಗೆ ತನ್ನ ಮಾಂತ್ರಿಕ ಆಟದ ಮೂಲಕ ಮರು ಜೀವ ಕೂಡ ನೀಡಿದ್ದ. ಬಳಿಕ ಬೈಟನ್ ಕ್ಲಬ್‍ನ ಹಿರಿಯರ ತಂಡದಲ್ಲಿ ಸ್ಥಾನ ಪಡೆದು ಜಾಗತಿಕ ತಾರೆಯಾಗಿ ಹೊರಹೊಮ್ಮಿದ್ದ. 2022ರ ಫಿಫಾ ವಿಶ್ವಕಪ್‍ನಲ್ಲಿ ಈಕ್ವೇಡಾರ್ ತಂಡದ ಜೀವನಾಡಿಯಾಗಿದ್ದ. ಅದರಲ್ಲೂ ಸೆನೆಗಲ್ ವಿರುದ್ಧ ದಾಖಲಿಸಿದ್ದ ಕ್ಲಚ್ ಗೋಲು ಇತಿಹಾಸ ಪುಟ ಸೇರಿಕೊಂಡಿತ್ತು. ಆಗ ಗುರು ಇವಾನ್ ಗೆರಾ ಫೋನ್ ಮಾಡಿ, ಬೀದಿಯಲ್ಲಿ ಸ್ನೇಹಿತರ ಜೊತೆ ಆಡಲು ಬರುತ್ತೀಯಾ ಅಂತ ಕೇಳಿದ್ದರು. ಗುರುವಿನ ಮಾತಿಗೆ ಕೈಸೆಡೊ ಇಲ್ಲ ಅನ್ನಲಿಲ್ಲ. ಸ್ಟಾರ್ ಅನ್ನೋ ಹಮ್ಮು ಬಿಮ್ಮು ಇಲ್ಲದೆ ಒಬ್ಬ ಮಾಮೂಲಿ ಆಟಗಾರನಂತೆ ಬಂದು ಸ್ಯಾಂಟೋ ಡೊವಿಂಗೊದ ಧೂಳಿನ ರಸ್ತೆಯಲ್ಲಿ ಬಾಲ್ಯದ ಗೆಳೆಯರ ಜೊತೆ ಫುಟ್‍ಬಾಲ್ ಅಡಿದ್ದ. ಎಷ್ಟೇ ಎತ್ತರಕ್ಕೆ ಬೆಳೆದ್ರೂ ತಾನು ಬೆಳೆದು ಬಂದ ಹಾದಿಯನ್ನು ಮರೆಯದಿರುವುದು ಮೊಯಿಸೆಸ್‍ನ ದೊಡ್ಡ ಗುಣ.
ಕೊಟ್ಟ ಮಾತು ಮತ್ತು ನಿಷ್ಠೆಗಿಂತ ದುಡ್ಡು ನಗಣ್ಯ..!
ಅಂದ ಹಾಗೇ, ಕೈಸೆಡೊ ಎಂದಿಗೂ ದುಡ್ಡಿನ ಹಿಂದೆ ಬಿದ್ದವನಲ್ಲ. 2023ರಲ್ಲಿ ಪ್ರತಿಷ್ಠಿತ ಲಿವರ್‍ಪೂಲ್ ತಂಡ ಕೈಸೆಡೊಗೆ ಭಾರಿ ಮೊತ್ತದ ಆಮಿಷವೊಡ್ಡಿ ಹೈಜಾಕ್ ಮಾಡುವ ಪ್ರಯತ್ನ ಮಾಡಿತ್ತು. ಆದ್ರೆ ನಿಷ್ಠೆ ಮತ್ತು ಮಾತಿಗೆ ತಪ್ಪದ ಮೊಯಿಸೆಸ್ ಚೆಲ್ಸಿಯಾ ತಂಡದ ಪರವಾಗಿಯೇ ನಿಂತಿದ್ದ. ಬ್ರಿಟಿಷ್ ಇತಿಹಾಸದಲ್ಲೇ ದಾಖಲೆಯ 1200 ಕೋಟಿ ರೂಪಾಯಿಯ ಒಪ್ಪಂದಕ್ಕೆ ಕೈಸೆಡೊ ಸಹಿ ಮಾಡಿಕೊಂಡಿದ್ದಾನೆ. ಬಡತನದ ದಿನಗಳಲ್ಲಿ ಕಾರಿನ ಡಿಕ್ಕಿಯ ಮೇಲೆ ತಾಯಿಯ ಜೊತೆಗಿನ ಫೋಟೋವೊಂದನ್ನು ಲಂಡನ್‍ನ ಕೋಬಾಮ್ ಮೈದಾನದಲ್ಲಿ ಮರುಸೃಷ್ಠಿ ಮಾಡಲಾಗಿತ್ತು. ಆದ್ರೆ ಆ ಚಿತ್ರದಲ್ಲಿ ತನ್ನ ತಂದೆಯ ಫೋಟೋ ಇಲ್ಲ ಎಂಬ ನೋವು ಕೈಸೆಡೊಗೆ ಗಾಢವಾಗಿ ಕಾಡಿದೆ. ಅಂದು ಹರಿದ ಬೂಟ್, ಹಳೆಯ ಜೆರ್ಸಿಯನ್ನು ಹಾಕೊಂಡಿದ್ದ ಬಾಲಕನ ಜೊತೆ ನಿಂತಿದ್ದ ತಾಯಿ, ಈಗ ನೀಲಿ ಜೆರ್ಸಿ ತೊಟ್ಟ ಜಗತ್ತಿನ ದುಬಾರಿ ಆಟಗಾರನ ಹೆಗಲ ಮೇಲೆ ಕೈಯಿಟ್ಟು ಆನಂದಬಾಷ್ಟ ಸುರಿಸುತ್ತಿದ್ದಳು.
ಶ್ರೀಮಂತನಾಗಿದ್ರೂ ಕೈಸೆಡೊ ಒಬ್ಬ ಮಾಮೂಲಿ ಮನುಷ್ಯ..!
ನಿಜ, ಕೋಟಿ, ಕೋಟಿ ಹಣ.. ಲಂಡನ್‍ನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ರೂ ಕೈಸೆಡೊ ವ್ಯಕ್ತಿತ್ವದಲ್ಲಿ ಬದಲಾಗಿಲ್ಲ. ಹೆತ್ತವರು, ಅಕ್ಕಂದಿರು, ಅಣ್ಣಂದಿರ ತ್ಯಾಗದಿಂದ ತಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂಬ ಕೃತಜ್ಞತೆ ಇದೆ. ಅಂದು ಹಸಿವಿನಿಂದ ಕಣ್ಣೀರು ಹಾಕೊಂಡು ತನ್ನನ್ನು ಬೆಳೆಸಿದ್ದ ಅಣ್ಣಂದಿರ ಬದುಕನನ್ನು ಹಸನಾಗಿಸಿದ್ದಾನೆ. ಗುರು ಇವಾನ್ ಗೆರ್ ಅವರ ಸಹಾಯವನ್ನು ಕೂಡ ಮರೆತಿಲ್ಲ. ಗುರುವಿಗೋಸ್ಕರ ಚಾರಿಟಿ ಟೂರ್ನಿಯನ್ನು ಆಯೋಜನೆ ಮಾಡಿ ಗುರುದಕ್ಷಿಣೆಯನ್ನು ನೀಡಿದ್ದಾನೆ. ಅಲ್ಲದೆ ನಿನೋ ಮೋಯ್ -23 ಎಂಬ ಫುಟ್‍ಬಾಲ್ ಕ್ಲಬ್ ಅನ್ನು ಈಕ್ವೇಡಾರ್‍ನಲ್ಲಿ ಶುರು ಮಾಡಿದ್ದಾನೆ. ಸುಮಾರು 1500ಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ಫುಟ್‍ಬಾಲ್ ತರಬೇತಿಯನ್ನು ಈ ಕ್ಲಬ್ ಮೂಲಕ ನೀಡಲಾಗುತ್ತಿದೆ. ಅಲ್ಲದೆ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲೂ ಮೊಯಿಸೆಸ್ ಕೈಸೆಡೊ ತೊಡಗಿಸಿಕೊಂಡಿದ್ದಾನೆ.
ಬಲಿಷ್ಠ ಜರ್ಮನಿಗೆ ಶಾಕ್ ಕೊಟ್ಟ ದಣಿವರಿಯದ ನಾಯಕ ಕೈಸೆಡೊ..!
ಸದ್ಯ 2026ರ ಫಿಫಾ ವಿಶ್ವಕಪ್‍ನಲ್ಲಿ ಆಡುತ್ತಿರುವ ಈಕ್ವೇಡಾರ್ ತಂಡಕ್ಕೆ ಮೊಯಿಸೆಸ್ ನಾಯಕ. ಐವರಿಕೋಸ್ಟಾ ವಿರುದ್ಧ ಸೋತು, ಕ್ಯುರಕೊ ವಿರುದ್ದ ಡ್ರಾ ಮಾಡಿಕೊಂಡು ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿತ್ತು. ಆದ್ರೆ ಜರ್ಮನಿ ವಿರುದ್ದ 2-1ಗೋಲುಗಳಿಂದ ಗೆದ್ದು ಈಗ ನಾಕೌಟ್ ಹಂತ ಪ್ರವೇಶಿಸಿದೆ. ಬಲಿಷ್ಠ ಜರ್ಮನಿಯ ವಿರುದ್ದ ಕೈಸೆಡೊ ಅದ್ಭುತ ಪ್ರದರ್ಶನ ನೀಡಿದ್ದ. ಆತನ ಆಟದ ವೈಖರಿ ಹೇಗಿತ್ತು ಅಂದ್ರೆ ಜರ್ಮನಿಯ ಮಿಡ್‍ಫೀಲ್ಡರ್‍ಗಳನ್ನು ಉಸಿರಾಡಲು ಕೂಡ ಬಿಡುತ್ತಿರಲಿಲ್ಲ. ಅಷ್ಟೊಂದು ಅದ್ಭುತವಾಗಿತ್ತು ಕೈಸೆಡೊ ಆಟ.
ಅಷ್ಟಕ್ಕೂ ಮೊಯಿಸೆಸ್ ಕೈಸೆಡೊ ಎಂಬುದು ಬರೀ ಒಬ್ಬ ಶ್ರೇಷ್ಠ ಫುಟ್‍ಬಾಲ್ ಆಟಗಾರನ ಹೆಸರಲ್ಲ. . ಇದು ಬಡತನ, ಹಸಿವು, ತ್ಯಾಗ, ನಂಬಿಕೆ, ಶ್ರಮ, ನಿಷ್ಠೆ ಮತ್ತು ಪರಿಶ್ರÀ್ರಮದಿಂದ ಬೆಳೆದ ಒಬ್ಬ ಅಪ್ಪಟ ಹೃದಯವಂತನ ಯಶೋಗಾಥೆ. ಅಂದು ಬರಿಗಾಲಿನಲ್ಲಿ ಆಡುತ್ತಿದ್ದ ಹುಡುಗನ ಇಂದಿನ ಯಶಸ್ಸು ಜಗತ್ತಿನ ಕೋಟ್ಯಂತರ ಬಡ ಪ್ರತಿಭೆಗಳಿಗೆ ದಾರಿದೀಪ.
ಸನತ್ ರೈ
saakshatv








