ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ಮತ್ತೊಮ್ಮೆ ಮೊಟ್ಟೆ ವಿತರಣೆ ಸಂಬಂಧಿತ ವಿವಾದ ಭುಗಿಲೆದ್ದಿದೆ. ಸರ್ಕಾರಿ ಶಾಲೆಗಳಲ್ಲಿ ಪೌಷ್ಟಿಕಾಹಾರ ಯೋಜನೆಯ ಭಾಗವಾಗಿ ಮೊಟ್ಟೆ ವಿತರಣೆ ಮಾಡಲು ನಿರ್ಧರಿಸಿರುವುದು ಇದೀಗ ಗ್ರಾಮಸ್ಥರ ವಿರೋಧಕ್ಕೆ ಗುರಿಯಾಗಿದೆ.
ಶಾಲೆಯ ಸಮೀಪದಲ್ಲಿಯೇ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನವಿದೆ. ಈ ಕ್ಷೇತ್ರದ ಸುತ್ತಮುತ್ತಲಿನ ಪ್ರದೇಶದಲ್ಲಿ ದಶಕಗಳಿಂದ ಮಾಂಸಾಹಾರ ಸೇವನೆಯ ಮೇಲೆ ನಿರ್ಬಂಧವಿದೆ. ಸ್ಥಳೀಯರು ಈ ಜಾಗವನ್ನು ಪವಿತ್ರ ಕ್ಷೇತ್ರವೆಂದು ಭಾವಿಸುತ್ತಿದ್ದು, ಯಾವುದೇ ಮಾಂಸಾಹಾರ ವಸ್ತುಗಳನ್ನು ತಿನ್ನಬಾರದು ಎನ್ನುವುದು ಅವರ ನಂಬಿಕೆ.
ಈ ನಿಟ್ಟಿನಲ್ಲಿ, ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಿದರೆ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಕೆಲವು ಪೋಷಕರು ಎಚ್ಚರಿಕೆ ನೀಡಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ಧಕ್ಕೆಯಾಗುವ ಈ ನಿರ್ಧಾರವನ್ನು ಸರ್ಕಾರ ಪುನರ್ಪರಿಶೀಲನೆ ಮಾಡಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
ಇದೀಗ ಈ ವಿವಾದ ಸ್ಥಳೀಯ ಆಡಳಿತದ ಗಮನ ಸೆಳೆದಿದ್ದು, ಶಾಲಾ ಶಿಕ್ಷಣ ಇಲಾಖೆಯು ತಾತ್ಕಾಲಿಕವಾಗಿ ಮೊಟ್ಟೆ ವಿತರಣೆಯ ನಿರ್ಧಾರವನ್ನು ಸ್ಥಗಿತಗೊಳಿಸಲಿದೆ ಎನ್ನಲಾಗಿದೆ.








