ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಅವರು ಯಾವುದೇ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರಬೆಟ್ಟ ಹಾಗೂ ಕೋಡಿ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುರ್ಜೇವಾಲ ಅವರು ಅಧಿಕಾರಿಗಳ ಸಭೆ ನಡೆಸಿದ್ದಾರೆ ಎಂಬುದು ಸುಳ್ಳು ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಉದಾಹರಣೆ ನೀಡಿದ ಡಿಸಿಎಂ, ಖರ್ಗೆ ಅವರು ರಾಜ್ಯದವರೇ ಆದರೂ ಇದುವರೆಗೆ ಯಾವ ಅಧಿಕಾರಿಯೊಂದಿಗೂ ಫೋನ್ ಮೂಲಕವೂ ಸಂಪರ್ಕಿಸಿಲ್ಲ ಎಂದು ಹೇಳಿದರು. “ಸರ್ಕಾರ ನಮ್ಮದೇ ಇದೆ. ಏನಾದರೂ ಹೇಳಬೇಕೆಂದರೆ ಅವರು ನಮಗೆ ಹೇಳುತ್ತಾರೆ. ಏನಾದರೂ ತಪ್ಪುಗಳಿದ್ದರೆ ನಮಗೆ ತಿಳಿಸುತ್ತಾರೆ, ನಾವು ತಿದ್ದಿಕೊಳ್ಳುತ್ತೇವೆ. ಇದನ್ನು ಹೊರತಾಗಿ ಅಧಿಕಾರಿಗಳ ಭೇಟಿ ಮಾಡಿದ್ದಾರೆ ಎಂಬುದು ಸುಳ್ಳು” ಎಂದು ಶಿವಕುಮಾರ್ ಪುನರುಚ್ಚರಿಸಿದರು.
ಕೆ.ಎನ್. ರಾಜಣ್ಣ ಹೇಳಿಕೆ ಕುರಿತು ಡಿ.ಕೆ.ಶಿವಕುಮಾರ್ ಮೌನ
ಅಧಿಕಾರಿಗಳ ಸಭೆ ಕಾನೂನುಬಾಹಿರ ಎಂಬ ಕೆ.ಎನ್. ರಾಜಣ್ಣ ಅವರ ಹೇಳಿಕೆ ಕುರಿತು ಕೇಳಿದಾಗ, ಡಿ.ಕೆ.ಶಿವಕುಮಾರ್ ಅವರು “ದೊಡ್ಡವರ ಬಗ್ಗೆ ನಾನು ಮಾತನಾಡುವುದಿಲ್ಲ. ಇದರ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯವರು ಉತ್ತರ ನೀಡಿದ್ದಾರಲ್ಲ. ಅವರು ಉತ್ತರ ನೀಡಿದ ಮೇಲೆ ನಾನೇನು ಉತ್ತರ ನೀಡುವುದಿದೆ. ಮುಖ್ಯಮಂತ್ರಿಯವರಿಗೆ ನನಗಿಂತ ಹೆಚ್ಚು ಮಾಹಿತಿಯಿದೆ” ಎಂದು ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ಯೂರಿಯಾ ಕೊರತೆ: ಕೇಂದ್ರದ ಮೇಲೆ ಒತ್ತಡ
ರಾಜ್ಯದಲ್ಲಿ ಎದುರಾಗಿರುವ ಯೂರಿಯಾ ಕೊರತೆ:
ಬಗ್ಗೆಯೂ ಡಿ.ಕೆ.ಶಿವಕುಮಾರ್ ಮಾತನಾಡಿದರು. ಯೂರಿಯಾವನ್ನು ಸರಬರಾಜು ಮಾಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದೆ ಎಂದು ಅವರು ಹೇಳಿದರು. “ನಮ್ಮ ರೈತರು ಈ ಬಾರಿ ಹೆಚ್ಚಿನ ಬಿತ್ತನೆ ಮಾಡಿದ್ದಾರೆ. ಹೆಚ್ಚಿನ ಯೂರಿಯಾಗೆ ಈಗಾಗಲೇ ಒತ್ತಾಯವನ್ನು ಮಾಡಿದ್ದೇವೆ. ರೈತರು ತಾಳ್ಮೆಯಿಂದಿರಲಿ. ಮುಖ್ಯಮಂತ್ರಿಯವರು ಹಾಗೂ ಕೃಷಿ ಸಚಿವರು ಇದರ ಬಗ್ಗೆ ಮಾತನಾಡಿದ್ದಾರೆ” ಎಂದು ಅವರು ಭರವಸೆ ನೀಡಿದರು.
ವೈಯಕ್ತಿಕ ಬೇಡಿಕೆ: “ಭಕ್ತ-ಭಗವಂತನಿಗೆ ಬಿಟ್ಟ ವಿಚಾರ”
ಸಿದ್ದೇಶ್ವರನ ಬಳಿ ವೈಯಕ್ತಿಕವಾಗಿ ಏನಾದರೂ ಬೇಡಿಕೊಂಡಿರಾ ಎಂಬ ಪ್ರಶ್ನೆಗೆ, “ಅದು ಭಕ್ತ ಹಾಗೂ ಭಗವಂತನಿಗೆ ಬಿಟ್ಟ ವಿಚಾರ” ಎಂದು ಡಿ.ಕೆ.ಶಿವಕುಮಾರ್ ಉತ್ತರಿಸಿದರು. ಜೇನುಕಲ್ಲು ಸಿದ್ದೇಶ್ವರನಿಗೆ ನಮನ ಸಲ್ಲಿಸಿ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಾರಂಭಿಸಿರುವುದಾಗಿ ತಿಳಿಸಿದ ಅವರು, ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ, ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂದು ಆಶಿಸಿದರು.
“ನಮ್ಮ ಧರ್ಮ, ದೇವರು, ಸಂಸ್ಕೃತಿ ಆಚಾರ, ವಿಚಾರಗಳ ಬಗ್ಗೆ ನಂಬಿಕೆ ಇರುವ ವ್ಯಕ್ತಿ ನಾನು. ಯಾವುದೇ ಧರ್ಮವಾಗಿರಲಿ ಅದಕ್ಕೆ ಆದಂತಹ ಶಕ್ತಿ ಇದೆ. ಕೆಲವರು ನಂಬಬಹುದು ಕೆಲವರು ನಂಬದೇ ಇರಬಹುದು ಆದರೆ ನನಗೆ ನಂಬಿಕೆಯಿದೆ. ದೇವಸ್ಥಾನವನ್ನು ಚೆನ್ನಾಗಿ ಅಭಿವೃದ್ಧಿ ಮಾಡಲಾಗಿದೆ. ಸಿದ್ದೇಶ್ವರ ರಾಜ್ಯದ ಜನರಿಗೆ ಸುಖ, ಶಾಂತಿ, ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಅವರು ತಿಳಿಸಿದರು.








