ವಿಶಾಖಪಟ್ಟಣಂ ಔಷಧಿ ತಯಾರಿಕ ಘಟಕದಲ್ಲಿ ಭಾರೀ ಸ್ಪೋಟ
ವಿಶಾಖಪಟ್ಟಣಂ, ಜುಲೈ 14: ವಿಶಾಖಪಟ್ಟಣಂ ಬಳಿಯ ಪರವಾಡದಲ್ಲಿರುವ ಜೆ.ಎನ್. ಫಾರ್ಮಾ ಸಿಟಿಯಲ್ಲಿರುವ ಔಷಧ ಕಂಪನಿಯಲ್ಲಿ ಸೋಮವಾರ ರಾತ್ರಿ ಭಾರೀ ಸ್ಫೋಟ ಸಂಭವಿಸಿದೆ. ಸ್ಪೋಟದಲ್ಲಿ ಕನಿಷ್ಠ ಒಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗಜುವಾಕಾದ ಆಸ್ಪತ್ರೆಗೆ ಸಾಗಿಸಲಾಗಿದೆ.
ರಾಮ್ಕಿ ದ್ರಾವಕಗಳ ಘಟಕದಲ್ಲಿ ಮೊದಲು ಸ್ಫೋಟ ಸಂಭವಿಸಿದ್ದು, ಅದರ ನಂತರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಕರಾವಳಿ ತ್ಯಾಜ್ಯ ನಿರ್ವಹಣಾ ಯೋಜನೆಯಲ್ಲಿ ಬೆಂಕಿ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ರಾತ್ರಿ 10: 30 ಕ್ಕೆ ಈ ಘಟನೆ ಸಂಭವಿಸಿದ್ದು, ಬೆಂಕಿಯನ್ನು ನಂದಿಸಲಾಗಿದೆ ಮತ್ತು ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸುರೇಶ್ ಬಾಬು ಖಚಿತಪಡಿಸಿದ್ದಾರೆ.

ವಿಶಾಖಪಟ್ಟಣಂ ಜಿಲ್ಲಾಧಿಕಾರಿ ವಿ ವಿನಯ್ ಚಂದ್ ಅವರ ಪ್ರಕಾರ, ಕನಿಷ್ಠ ಒಂಬತ್ತು ಅಗ್ನಿಶಾಮಕ ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು.. ಅದೃಷ್ಟವಶಾತ್, ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆಂದು ಹೇಳಲಾಗಿದ್ದರೆ, ಸ್ಥಳದಲ್ಲಿದ್ದ ಇತರ ಮೂವರು ಕಾರ್ಮಿಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ತಿಂಗಳ ಹಿಂದಷ್ಟೆ ಎಲ್ ಜಿ ಪಾಲಿಮರ್ಸ್ ಕೈಗಾರಿಕೆಯಲ್ಲಿ ವಿಷಾನಿಲ ಸೋರಿಕೆಯಾಗಿ ಹಲವಾರು ಮಂದಿ ಮೃತಪಟ್ಟ ಘಟನೆ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಘಟನೆ ಸಂಭವಿಸಿರುವುದು ಆತಂಕ ಸೃಷ್ಟಿಸಿದೆ.








