ಬೆಂಗಳೂರು ನಗರದ ರಸ್ತೆ ಗುಂಡಿಗಳ ಸಮಸ್ಯೆ ಈಗ ಉದ್ಯಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ನಗರದಲ್ಲಿ ಟ್ರಾಫಿಕ್ ಜಾಮ್, ಗುಂಡಿಗಳಿಂದಾಗುವ ಅವಾಂತರ ಮತ್ತು ಮೂಲಸೌಕರ್ಯದ ಕೊರತೆಯಿಂದ ಬೇಸತ್ತ ಹಲವಾರು ಉದ್ಯಮಿಗಳು ತಮ್ಮ ಕಂಪನಿಗಳನ್ನು ಬೆಂಗಳೂರಿನಿಂದ ಬೇರೆಡೆಗೆ ಶಿಫ್ಟ್ ಮಾಡಲು ತೀರ್ಮಾನಿಸಿದ್ದಾರೆ.
ಬ್ಲಾಕ್ ಬಕ್ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಸಿಇಓ ರಾಜೇಶ್ ಯಾಬಾಜಿ ತಮ್ಮ ಎಕ್ಸ್ (X) ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದು, ಬೆಂಗಳೂರು ಟ್ರಾಫಿಕ್‌ನಲ್ಲಿ ಭಾರೀ ಸಮಯ ವ್ಯರ್ಥವಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ನಮ್ಮ ಕಂಪನಿಗಳನ್ನು ಇಲ್ಲಿ ಮುಂದುವರಿಸುವುದು ಕಷ್ಟ. ಶಿಫ್ಟ್ ಮಾಡದೆ ಬೇರೆ ದಾರಿ ಇಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ, ಆಂಧ್ರಪ್ರದೇಶ ಸರ್ಕಾರದ ಸಚಿವ ನಾರಾ ಲೋಕೇಶ್ ಪ್ರತಿಕ್ರಿಯೆ ನೀಡಿದ್ದು, ನಮ್ಮ ರಾಜ್ಯಕ್ಕೆ ಬರಲು ತೀರ್ಮಾನಿಸಿದರೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗುತ್ತದೆ. ಉದ್ಯಮಗಳಿಗೆ ಉತ್ತಮ ಮೂಲಸೌಕರ್ಯ ಮತ್ತು ಸುಗಮ ಅನುಕೂಲತೆಗಳನ್ನು ಭರವಸೆ ನೀಡುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮೂಲಸೌಕರ್ಯ ಸಮಸ್ಯೆಗಳು ಉದ್ಯಮಿಗಳಿಗೆ ತಲೆನೋವಿನಂತಾಗಿದ್ದು, ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನೇ ಕಾರಣವೆಂದು ಟೀಕಿಸಲಾಗುತ್ತಿದೆ.








