ಹಾಡಿನ ಜೊತೆಗೆ ಹುಟ್ಟುವ, ಹಾಡಿನ ಸಂಗಡವೇ ಬದುಕುವ ಹಾಡಿನೊಂದಿಗೆ ಅಂತ್ಯವಾಗುವ ವಿಶಿಷ್ಟ ಸಂಪ್ರದಾಯದ ಆಫ್ರಿಕನ್ ಬುಡಕಟ್ಟು ಜನಾಂಗದ ಕಥಾನಕ:
ಹಾಡಿಗೂ, ಮಗುವಿಗೂ ಅವಿನಾಭಾವ ಸಂಬಂಧ.. ತಾಯಿಯ ಜೋಗುಳದ ಮಮತೆ ಇನ್ನೆಲ್ಲೂ ಸಿಗಲಾರದೇನೋ… ಒಂದು ಹಾಡು ಮಗುವಿನ ಹುಟ್ಟಿನಿಂದ ಜೊತೆಯಾಗಿ ಅದರ ಮರಣದ ತನಕವೂ ಜೊತೆಯಾಗುವ ಹಿಂಬಾ ಎನ್ನುವ ಆಫ್ರಿಕಾದ ಬುಡಕಟ್ಟು ಜನಾಂಗದ ಸುಂದರವಾದ ಸಂಪ್ರದಾಯವೊಂದರ ಪುಟ್ಟ ಪರಿಚಯವೊಂದು ಇಲ್ಲಿದೆ ನೋಡಿ.
ಒಂದು ಸುಂದರ ದಾಂಪತ್ಯದ ಚೆಂದದ ಪ್ರತಿಫಲ ಮಗು. ಮಗುವಿನ ಬಗ್ಗೆ ಯಾವ ಕುಟುಂಬ ಕನಸು ಕಾಣುವುದಿಲ್ಲ ಹೇಳಿ?? ಮಗುವಿನ ಚೆಂದದ ಕಲ್ಪನೆಯಲ್ಲೇ ಕಳೆದುಹೋಗುವ ಎಷ್ಟೋ ಮಂದಿಯ ಬಾಳಿಗೆ ಮಗು ಒಂದು ಅತ್ಯಮೂಲ್ಯ ಕೊಡುಗೆಯಾಗಿ ಕಾಲಿಟ್ಟಿರುತ್ತದೆ.
ಹಾಗಾದರೆ ಮಗು ಹುಟ್ಟುವುದು ಅದು ತಾಯಿಯ ಗರ್ಭದಿಂದ ಹೊರಬಂದಾಗಲೇ? ಅಥವಾ ಆ ಮಗುವಿನ ಕಲ್ಪನೆ, ಮಗುವಿನ ಕುರಿತಾದ ಆಸೆ ಮೊಳಕೆಯೊಡೆಯುತ್ತದಲ್ಲ ಆಗಲೇ??? ಅದಕ್ಕೆ ಉತ್ತರ ದಕ್ಷಿಣ ಆಫ್ರಿಕಾದ ಹಿಂಬಾ ಪ್ರಾಂತ್ಯದ ಬುಡಕಟ್ಟು ಜನಾಂಗದ ವಿಶಿಷ್ಟ ಸಂಪ್ರದಾಯದಲ್ಲಿ ಅಡಗಿದೆ… ಇದನ್ನು ಓದಿದ ಮೇಲೆ ನಿಮಗೂ ಇದೆಷ್ಟು ಸುಂದರ ಭಾವ ಅನ್ನಿಸೋದು ಖಚಿತ.
ಈ ಹಿಂಬಾ ಪ್ರಾಂತ್ಯದಲ್ಲಿ ಮಗು ಮೊದಲು ತಾಯಿಯ ಚಿಂತನೆಯಲ್ಲಿ ಒಡಮೂಡುತ್ತದೆ ಎನ್ನುತ್ತಾರೆ. ಯಾವ ಕ್ಷಣದಲ್ಲಿ ತಾಯಿಯಾಗಬೇಕಾದವಳಿಗೆ ಮಗುವಿನ ಕುರಿತಾದ ತೀವ್ರ ಚಿಂತನೆ ಹುಟ್ಟಿಕೊಳ್ಳುತ್ತದೆಯೋ ಆಗ ಮಗುವಿನ ಜನನವಾಗುತ್ತದೆಯಂತೆ.
ಇಲ್ಲಿ ತಾಯ್ತನದ ಬಯಕೆಯ ಹೆಣ್ಣು ಒಂದು ಮರದ ಕೆಳಗೆ ವಿಶ್ರಾಂತಿ ಪಡೆಯಲು ತೆರಳುತ್ತಾಳಂತೆ. ಆ ವಿಶ್ರಾಂತಿ ಎಲ್ಲಿಯವರೆಗೂ ಮುಂದುವರೆಯುತ್ತದೆಂದರೆ, ಆ ತಾಯಿಗೆ ತನ್ನ ಮಗುವಿನ ಕುರಿತಾದ ಹಾಡೊಂದು ತನ್ನ ಕಿವಿಯಲ್ಲಿ ಅನುರಣಿತವಾಗುವವರೆಗೂ… ಆ ಹಾಡು ಆಕೆಯ ಮನಸ್ಸಿಗಿಳಿದು ಅದವಳ ಜೀವಮಾನ ಪರ್ಯಂತ ನೆನಪಿಡುವಂತಾಯಿತು ಎಂದಾದ ಮೇಲೆ ಆ ತಾಯಿ, ತನ್ನ ಮಗುವಿನ ತಂದೆಯಾಗಬೇಕಾದವನ ಬಳಿ ಬಂದು ಆತನಿಗೂ ಆ ಹಾಡನ್ನು ಕಲಿಸುತ್ತಾಳೆ. ನಂತರದಲ್ಲಿ ಅವರಿಬ್ಬರೂ ದೈಹಿಕವಾಗಿ ಒಂದಾಗುವಾಗಲೂ ಆ ಮಗುವನ್ನು ತಮ್ಮೊಡಲಿಗೆ ಆವಾಹಿಸಿ, ಆಹ್ವಾನಿಸಿಕೊಳ್ಳುವ ಸಲುವಾಗಿ ಅದೇ ಹಾಡನ್ನು ಹಾಡುತ್ತಾರೆ.
ಇಷ್ಟೇ ಅಲ್ಲ ಈ ಯಾತ್ರೆ ಹೀಗೇ ಮುಂದುವರೆಯುತ್ತದೆ. ತನ್ನ ಮಗುವಿಗಾಗಿ ತನ್ನಿಂದ ಹುಟ್ಟಿಕೊಂಡ ಹಾಡನ್ನು ಆ ತಾಯಿ ಸೂಲಗಿತ್ತಿ ಹಾಗೂ ಹಳ್ಳಿಯ ಇತರೆ ವಯಸ್ಸಾದ ಮಹಿಳೆಯರಿಗೆ ಹೇಳಿಕೊಡುತ್ತಾಳೆ. ಏಕೆಂದರೆ ಮುಂದೆ ಮಗು ಜನಿಸಿದಾಗ ಆ ಮಗುವಿನ ಸುತ್ತ ಇರುವವರೆಲ್ಲರೂ ಆ ಮಗುವನ್ನು ಅದೇ ಹಾಡಿನಿಂದ ಸ್ವಾಗತಿಸಬೇಕಲ್ಲವೇ???
ನಂತರ ಮಗು ಬೆಳೆಯುತ್ತಾ ಬಂದಂತೆ ಹಳ್ಳಿಗರು ಆ ಮಗುವಿನ ಹಾಡನ್ನು ಕಲಿಯುತ್ತಾರೆ. ಅಕಸ್ಮಾತ್ ಮಗು ಬಿದ್ದರೆ, ಮಗುವಿಗೇನಾದರೂ ನೋವಾದರೇ ಅವನನ್ನು ಅವನ ಹಾಡು ಗೊತ್ತಿರುವ ಯಾರಾದರೂ ಎತ್ತಿಕೊಂಡು ಸಮಾಧಾನ ಮಾಡುತ್ತಾರೆ. ಮಗುವಿಗೂ ಆ ಹಾಡು ಪರಿಚಿತವಾಗಿರುತ್ತದೆಯಾದ್ದರಿಂದ ಅದು ತನ್ನ ಜನರನ್ನು ಸುಲಭವಾಗಿ ಗುರುತಿಸುತ್ತದೆ.
ಈ ಮಗುವಿನ ಬೆಳವಣಿಗೆಯೊಂದಿಗೆ ಹಾಡು ಕೂಡ ಪ್ರಚಲಿತವಾಗುತ್ತಾ ಹೋಗುತ್ತದೆ. ಬೆಳೆದು ದೊಡ್ಡದಾದ ಮಗು ಏನನ್ನಾದರೂ ಅದ್ಭುತವಾದುದನ್ನು ಸಾಧಿಸಿದರೆ ಹಳ್ಳಿಗರು ಆ ಮಗುವಿನ ಗೌರವಾರ್ಥವಾಗಿ ಇದೇ ಹಾಡನ್ನು ಹಾಡುತ್ತಾರೆ.
⠀
ಈ ಪ್ರೀತಿಯನ್ನು ಹೇಗೆ ಮುಂದುವರೆಸಿಕೊಂಡು ಹೋಗುತ್ತಾರೆ ಅನ್ನೋದು ಇನ್ನೂ ಒಂದು ಸೋಜಿಗ. ಆ ಮಗು ಏನಾದರೂ ಕೆಟ್ಟ ಕೆಲಸ ಮಾಡಿ ಅಪರಾಧಿ ಸ್ಥಾನದಲ್ಲಿ ನಿಂತರೆ, ಅಥವಾ ಅಪರಾಧಿ ಎಂದು ಸಾಬೀತಾದರೆ ಆ ಮಗುವಿನ ಸುತ್ತ ಹಳ್ಳಿಗರು ವೃತ್ತಾಕಾರವಾಗಿನಿಂತು ಆ ಮಗುವಿನ ಹಾಡು ಹಾಡುತ್ತಾರೆಯೇ ವಿನಃ ಯಾವುದೇ ಶಿಕ್ಷೆ ನೀಡುವುದಿಲ್ಲ. ಆ ಮಗುವನ್ನು ಹಳ್ಳಿಗರು ಎಷ್ಟು ಪ್ರೀತಿಸುತ್ತಾರೆ, ಅವನಮೇಲಿರುವ ಭರವಸೆ ಎಂಥದ್ದು ಎಂಬುದನ್ನು ಮತ್ತೆ ನೆನಪಿಸಲಿಕ್ಕಾಗಿಯೇ ಅವರು ಈ ರೀತಿ ಮಾಡುತ್ತಾರೆ. ಯಾವಾಗ ಈ ರೀತಿಯಾಗಿ ತನ್ನದೇ ಹಾಡನ್ನು ತನ್ನ ಹಳ್ಳಿಗರು, ಬಾಂಧವರು ಹಾಡುತ್ತಾರೋ ಆಗ ಆ ಮಗುವಿಗೆ ಇನ್ನೊಬ್ಬರಿಗೆ ತೊಂದರೆ ಕೊಡಬಾರದು ಎಂಬ ಪ್ರಜ್ಞೆ ಜಾಗೃತವಾಗಿ, ಪ್ರೀತಿ, ಸ್ನೇಹದ ಸವಿಭಾವಗಳು ಮೂಡುತ್ತವೆ. ಹೀಗೆಯೇ ಈ ಹಾಡು ಅವರ ಜೀವನದ ಪ್ರಮುಖ ಘಟ್ಟಗಳಾದ ಮದುವೆಯಂತಹ ಕಾರ್ಯಕ್ರಮಗಳಲ್ಲೂ ಮುಂದುವರೆಯುತ್ತದೆ.
ನಂತರ ವಯಸ್ಸಾಗಿ ಸಾಯುವ ಹಂತ ತಲುಪಿದಾತನಿಗೆ ಆತನ ಹಳ್ಳಿಯವರು ಆ ಮಗುವಿಗಾಗಿ ಕೊನೆಯ ಬಾರಿಗೆ ಹಾಡುತ್ತಾರೆ.
ಹೀಗೆ ಜನನದಿಂದ ಆರಂಭವಾಗಿ ಮರಣದವರೆಗೂ ಒಂದು ಹಾಡಿನ ಪ್ರಯಾಣ ಸಾಗುತ್ತದೆ. ಇದೊಂದು ಹಾಡಿನ ಪ್ರಯಾಣ ಮಾತ್ರವಲ್ಲ, ಪ್ರೀತಿ- ವಾತ್ಸಲ್ಯದ ಪಯಣವೂ ಆಗಿರುತ್ತದೆ. ಹೀಗೆ ಹಿಂಬಾ ಜನಾಂಗದ ಪ್ರತೀ ವ್ಯಕ್ತಿಗೂ ಅವನದ್ದೇ ಆದ ಹಾಡಿದೆ. ಅದು ಆತನ ಜೀವನದುದ್ದಕ್ಕೂ ಅವನ ಜೊತೆಗಿರುತ್ತದೆ. ಅವನ ಮರಣಕ್ಕೂ ಜೊತೆಯಾಗುತ್ತದೆ.
ಅಂಬಿಕಾ ಸೀತೂರು, ಬೆಂಗಳೂರು