ಮಂಡ್ಯ: “ಬಿಡದಿ ಟೌನ್ಶಿಪ್ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಲೂಟಿ ಮಾಡಲು ಹೊರಟಿರುವ ಈ ಸರ್ಕಾರದ ಹುನ್ನಾರಕ್ಕೆ ಬಲಿಯಾಗಬೇಡಿ. ನಿಮ್ಮ ಜಮೀನಿನ ಒಂದೇ ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡಬೇಡಿ, ಯಾರಿಗೂ ಹೆದರುವ ಅಗತ್ಯವಿಲ್ಲ. ನಿಮ್ಮೆಲ್ಲರ ಜೊತೆ ನಾನಿದ್ದೇನೆ,” ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರೈತರಿಗೆ ಸಂಪೂರ್ಣ ಅಭಯ ನೀಡಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ನೇರವಾಗಿ ಸವಾಲು ಹಾಕಿದ್ದಾರೆ.
ಮಂಡ್ಯದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಕಳೆದ ಎರಡು ತಿಂಗಳಿಂದ ಬಿಡದಿಯ ರೈತರು ತಮ್ಮ ಭೂಮಿ ಉಳಿಸಿಕೊಳ್ಳಲು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೆ, ರೈತರ ಗೋಳು ಕೇಳಬೇಕಾದ ಈ ಸರ್ಕಾರ, ರಿಯಲ್ ಎಸ್ಟೇಟ್ ಕುಳಗಳ ಹಿತಾಸಕ್ತಿಗೆ ಮಣೆ ಹಾಕುತ್ತಿದೆ. ಇದು ರೈತ ವಿರೋಧಿ ಧೋರಣೆಯ ಪರಮಾವಧಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಕಾಲದ ತೀರ್ಮಾನ ಬೇರೆ, ಈಗಿನ ಹುನ್ನಾರವೇ ಬೇರೆ
ಬಿಡದಿ ಟೌನ್ಶಿಪ್ ಯೋಜನೆ ಕುಮಾರಸ್ವಾಮಿ ಅವರ ಕಾಲದಲ್ಲೇ ರೂಪಿಸಿದ್ದು ಎಂಬ ಟೀಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಅವರು, “ನನ್ನ ಹೆಸರಿನಲ್ಲಿ ರಕ್ಷಣೆ ಪಡೆದುಕೊಳ್ಳುವ ಪ್ರಯತ್ನ ಮಾಡಬೇಡಿ. ನಾನು ಮುಖ್ಯಮಂತ್ರಿಯಾಗಿದ್ದಾಗ ತೆಗೆದುಕೊಂಡ ತೀರ್ಮಾನಕ್ಕೂ, ಈಗಿನ ತೀರ್ಮಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಂದು ಆ ಭೂಮಿಗೆ ಇಷ್ಟೊಂದು ಬೆಲೆ ಇರಲಿಲ್ಲ. ಆದರೆ, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಬಂದ ನಂತರ ಅಲ್ಲಿನ ಭೂಮಿಯ ಬೆಲೆ ಗಗನಕ್ಕೇರಿದೆ. ಈಗ 9 ಸಾವಿರ ಎಕರೆ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೊರಟಿದ್ದಾರೆ. ಇದು ಟೌನ್ಶಿಪ್ ನಿರ್ಮಾಣಕ್ಕಿಂತ ಹೆಚ್ಚಾಗಿ ಭೂಮಿ ಲೂಟಿ ಮಾಡುವ ಹುನ್ನಾರ” ಎಂದು ಗಂಭೀರ ಆರೋಪ ಮಾಡಿದರು.
ಈಗಲ್ಟನ್ಗೆ ಒಂದು ನ್ಯಾಯ, ರೈತರಿಗೊಂದು ನ್ಯಾಯವೇ?
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿ ಮಾತನಾಡಿದ ಕುಮಾರಸ್ವಾಮಿ, “ಬಿಡದಿಯಲ್ಲೇ ಇರುವ ಈಗಲ್ಟನ್ ಗಾಲ್ಫ್ ಕ್ಲಬ್, ಸರ್ಕಾರಿ ಕರಾಬು ಭೂಮಿಯನ್ನು ಅತಿಕ್ರಮಿಸಿಕೊಂಡಿತ್ತು. ಹಿಂದೆ ಇದೇ ಡಿ.ಕೆ. ಶಿವಕುಮಾರ್ ಅವರು ಅಲ್ಲಿಗೆ ಊಟಕ್ಕೆ ಹೋದಾಗ, ₹98 ಸಾವಿರ ಬಿಲ್ ಕೊಟ್ಟರೆಂದು ಸಿಟ್ಟಿಗೆದ್ದು, 70 ಎಕರೆ ಭೂಮಿಗೆ ₹984 ಕೋಟಿ ದಂಡ ವಿಧಿಸುವ ನಿರ್ಣಯವನ್ನು ಸಂಪುಟದಲ್ಲಿ ಕೈಗೊಂಡಿದ್ದರು. ಅದರ ಪ್ರಕಾರ, ಪ್ರತಿ ಎಕರೆಗೆ ಸುಮಾರು 13 ಕೋಟಿ ರೂಪಾಯಿ ದರ ನಿಗದಿಯಾಯಿತು. ನಿಮ್ಮದೇ ಸರ್ಕಾರ, ನಿಮ್ಮದೇ ಸಚಿವರು ನಿಗದಿ ಮಾಡಿದ ದರ ಅದು. ಈಗ ಅದೇ ಮಾನದಂಡವನ್ನು ರೈತರಿಗೂ ಅನ್ವಯಿಸಿ, ಪ್ರತಿ ಎಕರೆಗೆ 13 ಕೋಟಿ ರೂಪಾಯಿ ಪರಿಹಾರ ನೀಡಿ. ಆಗ ನೋಡೋಣ” ಎಂದು ನೇರ ಸವಾಲು ಹಾಕಿದರು.
ಟೌನ್ಶಿಪ್ ಬೇಕಿದ್ದರೆ ಕನಕಪುರದಲ್ಲಿ ಮಾಡಿ
“ನಿಮಗೆ ಟೌನ್ಶಿಪ್ ಮಾಡಲೇಬೇಕೆಂಬ ಹಠವಿದ್ದರೆ, ಫಲವತ್ತಾದ ಬಿಡದಿ ಭೂಮಿ ಯಾಕೆ ಬೇಕು? ನಿಮ್ಮ ಕನಕಪುರದಲ್ಲೇ ಮಾಡಿ. ಹಿಂದೆ ಕನಕಪುರದಲ್ಲಿ ಹಾಲಿನ ಡೇರಿ ಮಾಡಲು ರೈತರಿಂದ ಭೂಮಿ ಪಡೆದಾಗ ಎಷ್ಟು ಪರಿಹಾರ ಕೊಟ್ಟಿದ್ದೀರಿ? ನಿಮ್ಮ ಆಪ್ತರಿಗೆ ಎಷ್ಟು ಕೊಟ್ಟಿದ್ದೀರಿ ಎಂಬುದು ಎಲ್ಲರಿಗೂ ಗೊತ್ತು. ನಿಮ್ಮ ಅಧಿಕಾರಿಗಳೇ ಹೇಳುವಂತೆ ಕನಕಪುರದಲ್ಲಿ ಸಾಕಷ್ಟು ಒಣ ಬೇಸಾಯದ ಭೂಮಿ ಇದೆ. ಆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಟೌನ್ಶಿಪ್ ನಿರ್ಮಿಸಬಹುದಲ್ಲವೇ? ರಾಜ್ಯದಲ್ಲಿ ಇಂತಹ ಭೂಮಿ ಬೇಕಾದಷ್ಟಿದೆ. ಅದೆಲ್ಲವನ್ನೂ ಬಿಟ್ಟು ಬಿಡದಿಯ ಚಿನ್ನದಂತಹ ಭೂಮಿಯ ಮೇಲೆಯೇ ನಿಮ್ಮ ಕಣ್ಣು ಬಿದ್ದಿರುವುದೇಕೆ?” ಎಂದು ಕೆಂಡ ಕಾರಿದರು.
ಕಬ್ಬು ಬೆಳೆಗಾರರ ಬಗ್ಗೆ ನಿರ್ಲಕ್ಷ್ಯ, ಇದು ರೈತ ವಿರೋಧಿ ಸರ್ಕಾರ
ರಾಜ್ಯದಲ್ಲಿ ಕಬ್ಬು ಬೆಳೆಗಾರರು ದರ ನಿಗದಿಗಾಗಿ ನಡೆಸುತ್ತಿರುವ ಹೋರಾಟದ ಬಗ್ಗೆಯೂ ಪ್ರಸ್ತಾಪಿಸಿದ ಕುಮಾರಸ್ವಾಮಿ, “ನಾನು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾಗಲೂ ರೈತರ ಹಿತ ಕಾಪಾಡಲು ಶ್ರಮಿಸಿದ್ದೆ. ಆದರೆ, 136 ಸ್ಥಾನ ಗೆದ್ದು ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿರುವ ಈ ಸರ್ಕಾರಕ್ಕೆ ಏನಾಗಿದೆ ದರಿದ್ರ? ಕಳೆದ ಏಳು ದಿನಗಳಿಂದ ರೈತರನ್ನು ರಸ್ತೆಯಲ್ಲಿ ಮಲಗಿಸುವ ಸ್ಥಿತಿ ತರಬೇಕಿತ್ತೇ? ಈ ಸರ್ಕಾರಕ್ಕೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ. ಇದು ಸಂಪೂರ್ಣ ರೈತ ವಿರೋಧಿ ಸರ್ಕಾರ” ಎಂದು ತೀವ್ರವಾಗಿ ಟೀಕಿಸಿದರು.








