ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಕೇಂದ್ರದ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣದ ಪರಮಾವಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷಗಳ ವಿರುದ್ಧದ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ದೇಶದಲ್ಲಿ ವಿರೋಧ ಪಕ್ಷದ ದ್ವನಿಯನ್ನು ಹತ್ತಿಕ್ಕುವ ಏಕೈಕ ಉದ್ದೇಶದಿಂದ ಸಾಂವಿಧಾನಿಕ ಸಂಸ್ಥೆಗಳನ್ನು ಪದೇ ಪದೇ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರಜಾಪ್ರಭುತ್ವದ ಕಾವಲುಗಾರರಂತೆ ವರ್ತಿಸಬೇಕಾದ ಸಂಸ್ಥೆಗಳು ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿರುವುದು ಪ್ರಜಾಪ್ರಭುತ್ವದ ಅಡಿಪಾಯವನ್ನೇ ದುರ್ಬಲಗೊಳಿಸುವಂತಹ ಅಪಾಯಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿ ಬೆದರಿಕೆ ಹಾಕುವ ಈ ಸ್ವರೂಪವು ಬಿಜೆಪಿಯ ಧೈರ್ಯವನ್ನಲ್ಲ, ಬದಲಾಗಿ ಅವರ ಆಂತರಿಕ ಭಯವನ್ನು ತೋರಿಸುತ್ತದೆ. ರಾಹುಲ್ ಗಾಂಧಿಯವರ ಜನಪ್ರಿಯತೆ ಮತ್ತು ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಹೆದರಿರುವ ಬಿಜೆಪಿ, ಇಂತಹ ಕೀಳುಮಟ್ಟದ ತಂತ್ರಗಳಿಗೆ ಮೊರೆ ಹೋಗಿದೆ. ಆದರೆ ಇಂತಹ ಬೆದರಿಕೆಗಳಿಗೆ ಕಾಂಗ್ರೆಸ್ ಪಕ್ಷವಾಗಲಿ ಅಥವಾ ಗಾಂಧಿ ಕುಟುಂಬವಾಗಲಿ ಜಗ್ಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ದೇಶದ ಸಾರ್ವಜನಿಕ ಸೇವೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ತ್ಯಾಗದ ಪರಂಪರೆಯುಳ್ಳ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರೊಂದಿಗೆ ನಾವೆಲ್ಲರೂ ಅಚಲವಾಗಿ ನಿಲ್ಲುತ್ತೇವೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇಡೀ ಪಕ್ಷವು ಒಗ್ಗಟ್ಟಿನಿಂದ ಈ ರಾಜಕೀಯ ಷಡ್ಯಂತ್ರವನ್ನು ಎದುರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ನ್ಯಾಷನಲ್ ಹೆರಾಲ್ಡ್ ಕೇವಲ ಒಂದು ಪತ್ರಿಕೆಯಲ್ಲ, ಅದು ಭಾರತದ ಸ್ವಾತಂತ್ರ್ಯ ಹೋರಾಟದ ಒಂದು ಐತಿಹಾಸಿಕ ಸಂಕೇತ. ಅದು ದೇಶದ ಜನಸಾಮಾನ್ಯರ ಧ್ವನಿಯಾಗಿ, ಧೈರ್ಯ ಮತ್ತು ತ್ಯಾಗದ ಪ್ರತೀಕವಾಗಿ ಬೆಳೆದು ಬಂದಿದೆ. ಇಂತಹ ಘನವೆತ್ತ ಪರಂಪರೆಯನ್ನು ದ್ವೇಷದ ರಾಜಕಾರಣದ ಮೂಲಕ ಅಳಿಸಿ ಹಾಕಲು ಅಥವಾ ಮಸುಕು ಮಾಡಲು ಸಾಧ್ಯವಿಲ್ಲ. ಇತಿಹಾಸವನ್ನು ತಿರುಚುವ ಪ್ರಯತ್ನಗಳು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದರು.
ಸತ್ಯಕ್ಕೆ ಅಂತಿಮ ಜಯ
ಬಿಜೆಪಿಯ ಈ ಸೇಡಿನ ರಾಜಕೀಯ ಹೆಚ್ಚು ದಿನ ನಡೆಯುವುದಿಲ್ಲ. ಕಾನೂನು ಮತ್ತು ನ್ಯಾಯಾಲಯದ ಮೇಲೆ ನಮಗೆ ನಂಬಿಕೆಯಿದ್ದು, ಅಂತಿಮವಾಗಿ ಸತ್ಯಕ್ಕೆ ಜಯವಾಗಲಿದೆ. ಸುಳ್ಳು ಆರೋಪಗಳು ಮತ್ತು ರಾಜಕೀಯ ಪ್ರೇರಿತ ಪ್ರಕರಣಗಳು ನ್ಯಾಯದ ಮುಂದೆ ಬಿದ್ದುಹೋಗಲಿವೆ ಎಂದು ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದರು.








