ಬೆಳಗಾವಿ: ಸದಾ ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕವೇ ಸುದ್ದಿಯ ಕೇಂದ್ರಬಿಂದುವಾಗುವ ಕನ್ನೇರಿ ಮಠದ ಶ್ರೀಗಳು ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ರಾಯಬಾಗದಲ್ಲಿ ನಡೆದ ವೇದಿಕೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮದ ಪ್ರಗತಿಪರ ಸ್ವಾಮೀಜಿಗಳನ್ನು ಪರೋಕ್ಷವಾಗಿ ಗುರಿಯಾಗಿಸಿ ಬಸವ ತಾಲಿಬಾನಿಗಳು ಎಂದು ಕರೆಯುವ ಮೂಲಕ ರಾಜ್ಯವ್ಯಾಪಿ ಭಾರೀ ಸಂಚಲನ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದಾರೆ.
ರಾಯಬಾಗದಲ್ಲಿ ಆಯೋಜಿಸಲಾಗಿದ್ದ ಹನುಮ ಮಾಲಾ ದೀಕ್ಷಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕನ್ನೇರಿ ಶ್ರೀಗಳು, ಹಿಂದೂ ಧರ್ಮದ ಆಚರಣೆಗಳು ಮತ್ತು ಹನುಮ ಮಾಲೆಯ ಕುರಿತು ಆವೇಶಭರಿತ ಭಾಷಣ ಮಾಡಿದರು. ಹನುಮ ಮಾಲೆಯನ್ನು ಯಾರೂ ಟೀಕೆ ಮಾಡಬಾರದು ಎಂದು ಎಚ್ಚರಿಸಿದ ಅವರು, ಕಮ್ಯುನಿಸ್ಟರು ಹಾಗೂ ನಮ್ಮಂತೆಯೇ ಕೇಸರಿ ಬಟ್ಟೆ ಹಾಕಿಕೊಂಡಿರುವ ಬಸವ ತಾಲಿಬಾನಿಗಳು ನಿಮ್ಮ ಮೇಲೆ ಟೀಕೆ ಮಾಡಬಹುದು. ಏಕೆಂದರೆ ಅವರು ಈ ಹಿಂದೆಯೂ ನಮ್ಮ ಸನಾತನ ಸಂಪ್ರದಾಯಗಳ ಮೇಲೆ ಸಿಕ್ಕಾಪಟ್ಟೆ ಟೀಕೆಗಳನ್ನು ಮಾಡಿದ್ದಾರೆ, ಈಗ ನಿಮ್ಮ ಮೇಲೂ ಮುಗಿಬೀಳಬಹುದು ಎಂದು ನಾಲಿಗೆ ಹರಿಬಿಟ್ಟರು. ಧಾರ್ಮಿಕ ಮುಖಂಡರನ್ನೇ ತಾಲಿಬಾನಿಗಳಿಗೆ ಹೋಲಿಸಿರುವುದು ಇದೀಗ ಭಕ್ತ ಸಮುದಾಯ ಹಾಗೂ ಲಿಂಗಾಯತ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ದೀಪ ಹಿಡಿದು ಆರತಿ ಎತ್ತಬೇಕಾ?
ಇದೇ ವೇಳೆ ಬಜರಂಗದಳ ಮತ್ತು ಆರ್‌ಎಸ್‌ಎಸ್ ಸಂಘಟನೆಗಳ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡ ಕನ್ನೇರಿ ಶ್ರೀ, ಕೈಯಲ್ಲಿ ಕೋಲು ಹಿಡಿದು ಪಥಸಂಚಲನ ನಡೆಸುವುದನ್ನು ವಿರೋಧಿಸುವವರ ವಿರುದ್ಧ ಕಿಡಿಕಾರಿದರು. ಕೈಯಲ್ಲಿ ಕೋಲು ಹಿಡಿಯದೇ ಇನ್ನೇನು ದೀಪ ಹಿಡಿದುಕೊಂಡು ಓಡಾಡಬೇಕಾ ಎಂದು ಪ್ರಶ್ನಿಸಿದ ಅವರು, ಅನ್ಯರು ನಮ್ಮ ಮನೆ ಹೆಣ್ಣು ಮಕ್ಕಳನ್ನು ಎಳೆದುಕೊಂಡು ಹೋಗುವಾಗ ನಾವು ಅದೇ ದೀಪದಲ್ಲಿ ಅವರಿಗೆ ಆರತಿ ಎತ್ತಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾಜ ರಕ್ಷಣೆಗಾಗಿ ಕೋಲು ಹಿಡಿಯುವುದು ಅನಿವಾರ್ಯ ಎಂಬರ್ಥದಲ್ಲಿ ಮಾತನಾಡಿದ ಅವರ ಈ ಹೇಳಿಕೆ ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ.
ಹಳೇ ಚಾಳಿ ಮುಂದುವರಿಸಿದ ಶ್ರೀಗಳು
ಕನ್ನೇರಿ ಶ್ರೀಗಳಿಗೆ ವಿವಾದ ಹೊಸದೇನಲ್ಲ. ಈ ಹಿಂದೆ ತಮ್ಮ ಪ್ರಚೋದನಕಾರಿ ಭಾಷಣಗಳಿಂದಾಗಿಯೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಬಹುದು ಎಂಬ ಕಾರಣಕ್ಕೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲಾಧಿಕಾರಿಗಳು ಇವರಿಗೆ ಜಿಲ್ಲಾ ಪ್ರವೇಶ ಮಾಡದಂತೆ ನಿರ್ಬಂಧ ಹೇರಿದ್ದರು. ಬಳಿಕ ಅವರು ನ್ಯಾಯಾಲಯದ ಮೆಟ್ಟಿಲೇರಿ ಅನುಮತಿ ಪಡೆದುಕೊಂಡಿದ್ದರು. ಇದೀಗ ಮತ್ತೆ ಸಾರ್ವಜನಿಕ ವೇದಿಕೆಯಲ್ಲಿ ಒಂದು ಸಮುದಾಯದ ಸ್ವಾಮೀಜಿಗಳನ್ನು ಬಸವ ತಾಲಿಬಾನಿಗಳು ಎಂದು ಕರೆಯುವ ಮೂಲಕ ಶಾಂತಿ ಕದಡುವ ಯತ್ನ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಧಾರ್ಮಿಕ ಕಾರ್ಯಕ್ರಮದ ವೇದಿಕೆಯನ್ನು ಬಳಸಿಕೊಂಡು ಕನ್ನೇರಿ ಶ್ರೀಗಳು ನೀಡಿರುವ ಈ ಹೇಳಿಕೆ ರಾಜ್ಯದಲ್ಲಿ ಹೊಸ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದ್ದು, ಪ್ರಗತಿಪರ ಸಂಘಟನೆಗಳು ಹಾಗೂ ಲಿಂಗಾಯತ ಮುಖಂಡರು ಇದಕ್ಕೆ ಯಾವ ರೀತಿ ತಿರುಗೇಟು ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.








