ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ಸಿಎ) ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ. ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಕೆಎಸ್ಸಿಎ ಆಡಳಿತದ ಶಕ್ತಿ ಕೇಂದ್ರವಾಗಿದ್ದ ಬ್ರಿಜೇಶ್ ಪಟೇಲ್ ಅವರ ಪ್ರಾಬಲ್ಯಕ್ಕೆ ಇದೀಗ ಅಧಿಕೃತವಾಗಿ ತೆರೆಬಿದ್ದಿದೆ. ತೀವ್ರ ಕುತೂಹಲ ಕೆರಳಿಸಿದ್ದ ಕೆಎಸ್ಸಿಎ ಚುನಾವಣೆಯಲ್ಲಿ ಟೀಂ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಭರ್ಜರಿ ಜಯಗಳಿಸುವ ಮೂಲಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಗೆಲುವಿನೊಂದಿಗೆ ವೆಂಕಿ 12 ವರ್ಷಗಳ ಸುದೀರ್ಘ ಅಂತರದ ಬಳಿಕ ಮತ್ತೆ ಆಡಳಿತಾತ್ಮಕವಾಗಿ ಕೆಎಸ್ಸಿಎಗೆ ಮರಳಿದಂತಾಗಿದೆ.
ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರ ಬಲವಾದ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ವೆಂಕಟೇಶ್ ಪ್ರಸಾದ್ ಬಣ, ಬ್ರಿಜೇಶ್ ಪಟೇಲ್ ಬೆಂಬಲಿತ ಶಾಂತಕುಮಾರ್ ಬಣವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕರ್ನಾಟಕ ಕ್ರಿಕೆಟ್ ಆಡಳಿತದಲ್ಲಿ ಬದಲಾವಣೆಯ ಗಾಳಿ ಬೀಸಿದೆ.
ಡಿಸೆಂಬರ್ 07ರಂದು ನಡೆದ ಜಿದ್ದಾಜಿದ್ದಿನ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 1315 ಮತಗಳು ಚಲಾವಣೆಯಾಗಿದ್ದವು. ಅಧ್ಯಕ್ಷ ಸ್ಥಾನದ ಕಣದಲ್ಲಿದ್ದ ವೆಂಕಟೇಶ್ ಪ್ರಸಾದ್ ಅವರಿಗೆ ಒಟ್ಟು 749 ಮತಗಳು ದೊರೆತರೆ, ಪ್ರತಿಸ್ಪರ್ಧಿ ಶಾಂತಕುಮಾರ್ ಅವರಿಗೆ 558 ಮತಗಳು ಲಭ್ಯವಾದವು. ಅಂತಿಮವಾಗಿ 191 ಮತಗಳ ಅಂತರದಿಂದ ವೆಂಕಟೇಶ್ ಪ್ರಸಾದ್ ವಿಜಯಶಾಲಿಯಾದರು.
ಇನ್ನುಳಿದಂತೆ ವೆಂಕಿ ಬಣದ ಸುಜಿತ್ ಸೋಮಸುಂದರ್ ಉಪಾಧ್ಯಕ್ಷರಾಗಿ ಹಾಗೂ ಮಧುಕರ್ ಖಜಾಂಚಿಯಾಗಿ ಜಯಗಳಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಸಂತೋಷ್ ಮೆನನ್ ಗೆಲುವಿನ ನಗೆ ಬೀರಿದ್ದಾರೆ. ಆದರೆ, ಸಹಕಾರ್ಯದರ್ಶಿ ಸ್ಥಾನದಲ್ಲಿ ಮಾತ್ರ ಬ್ರಿಜೇಶ್ ಪಟೇಲ್ ಬಣದ ಬಿ.ಕೆ. ರವಿ ಗೆಲುವು ಸಾಧಿಸಿದ್ದು, ಎದುರಾಳಿ ಪಾಳಯದಿಂದ ಆಯ್ಕೆಯಾದ ಏಕೈಕ ಅಭ್ಯರ್ಥಿ ಎನಿಸಿಕೊಂಡಿದ್ದಾರೆ.
ಪಟೇಲರ ಒಡ್ಡೋಲಗಕ್ಕೆ ಬಿತ್ತು ಬ್ರೇಕ್
ಕಳೆದ 22 ವರ್ಷಗಳಿಂದ ಕೆಎಸ್ಸಿಎ ಆಡಳಿತವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ಬ್ರಿಜೇಶ್ ಪಟೇಲ್ ಅವರಿಗೆ 2025ರ ಈ ಚುನಾವಣೆ ಕಹಿ ಅನುಭವ ನೀಡಿದೆ. ಆಡಳಿತದ ಚುಕ್ಕಾಣಿ ಹಿಡಿಯದಿದ್ದರೂ, ರಿಮೋಟ್ ಕಂಟ್ರೋಲ್ ಮೂಲಕ ಸಂಸ್ಥೆಯನ್ನು ನಿಯಂತ್ರಿಸುತ್ತಿದ್ದ ಪಟೇಲರ ತಂತ್ರಗಾರಿಕೆ ಈ ಬಾರಿ ಫಲಿಸಲಿಲ್ಲ. ಕುಂಬ್ಳೆಯ ಗೂಗ್ಲಿ, ಶ್ರೀನಾಥ್ ಅವರ ಬೌನ್ಸರ್ ಹಾಗೂ ವೆಂಕಿಯ ಸ್ವಿಂಗ್ ಎಸೆತಗಳಿಗೆ ಬ್ರಿಜೇಶ್ ಪಟೇಲರ ಬ್ಯಾಟಿಂಗ್ ವಿಫಲವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
2010ರಲ್ಲಿ ಕುಂಬ್ಳೆ ಅಧ್ಯಕ್ಷರಾಗಿದ್ದ ಅವಧಿಯನ್ನು ಹೊರತುಪಡಿಸಿದರೆ, ಕಳೆದ ಎಂಟು ವರ್ಷಗಳಿಂದ ಪಟೇಲರ ಪಾರಮ್ಯಕ್ಕೆ ಎದುರಾಳಿಗಳೇ ಇರಲಿಲ್ಲ. ಆದರೆ ಕರ್ನಾಟಕ ಕ್ರಿಕೆಟ್ ನಿಧಾನವಾಗಿ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ ಎಂಬ ಆತಂಕ ಹಾಗೂ ಆಡಳಿತದಲ್ಲಿ ಹೊಸತನದ ಅಗತ್ಯವನ್ನು ಮನಗಂಡ ಕುಂಬ್ಳೆ ಮತ್ತು ಶ್ರೀನಾಥ್ ಜೋಡಿ, ಈ ಬಾರಿ ವೆಂಕಟೇಶ್ ಪ್ರಸಾದ್ ಅವರನ್ನು ಮುಂದಿಟ್ಟುಕೊಂಡು ಚುನಾವಣಾ ಅಖಾಡಕ್ಕೆ ಧುಮುಕಿತ್ತು. ಅಂತಿಮವಾಗಿ ದಿಗ್ಗಜರ ಈ ನಡೆ ಯಶಸ್ವಿಯಾಗಿದೆ.
ಶಾಂತಕುಮಾರ್ ಬಲಿಯಾದ ಹರಕೆಯ ಕುರಿ
ಈ ಚುನಾವಣೆಯಲ್ಲಿ ಅತಂತ್ರ ಸ್ಥಿತಿಗೆ ಸಿಲುಕಿದವರು ಪರಾಜಿತ ಅಭ್ಯರ್ಥಿ ಶಾಂತಕುಮಾರ್. ಆರಂಭದಲ್ಲಿ ಅವರ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆಯಾಗಿದ್ದರು. ಆದರೆ ಛಲ ಬಿಡದ ಶಾಂತಕುಮಾರ್ ನ್ಯಾಯಾಲಯದ ಮೊರೆ ಹೋಗಿ, ನಾಮಪತ್ರವನ್ನು ಸಿಂಧುಗೊಳಿಸಿಕೊಂಡು ಕಣಕ್ಕಿಳಿದಿದ್ದರು. ಉತ್ತಮ ಆಡಳಿತಗಾರ ಎಂಬ ಖ್ಯಾತಿ ಹೊಂದಿದ್ದರೂ, ಬ್ರಿಜೇಶ್ ಪಟೇಲ್ ಅವರ ನೆರಳಿನಲ್ಲಿ ನಿಂತಿದ್ದು ಶಾಂತಕುಮಾರ್ ಅವರಿಗೆ ಮುಳುವಾಯಿತು. ಪಟೇಲರ ಸಾಂಪ್ರದಾಯಿಕ ವೋಟ್ ಬ್ಯಾಂಕ್ ಕೈ ಹಿಡಿಯದ ಕಾರಣ, ಉತ್ತಮ ವರ್ಚಸ್ಸು ಹೊಂದಿದ್ದ ಶಾಂತಕುಮಾರ್ ಸೋಲೊಪ್ಪಿಕೊಳ್ಳಬೇಕಾಯಿತು.
ಗೆಲುವಿನ ಹಿಂದಿನ ಸೂತ್ರಧಾರ ವಿನಯ್ ಮೃತ್ಯುಂಜಯ್
ವೆಂಕಟೇಶ್ ಪ್ರಸಾದ್ ಅವರ ಗೆಲುವಿನ ಹಿಂದೆ ಕ್ರಿಕೆಟ್ ದಿಗ್ಗಜರ ಪ್ರಭಾವ ಎಷ್ಟಿದೆಯೋ, ಅಷ್ಟೇ ಪ್ರಮುಖ ಪಾತ್ರವನ್ನು ಲೆಕ್ಕಪರಿಶೋಧಕ ವಿನಯ್ ಮೃತ್ಯುಂಜಯ್ ವಹಿಸಿದ್ದಾರೆ. ಹಿಂದೆ ಮಹಾರಾಜರ ಕಾಲದಲ್ಲಿ ಮತ್ತು ನಂತರ ಬ್ರಿಜೇಶ್ ಪಟೇಲ್ ಬಣದಲ್ಲೂ ಗುರುತಿಸಿಕೊಂಡಿದ್ದ ವಿನಯ್, ಈ ಬಾರಿ ಪಟೇಲರ ವಿರುದ್ಧ ತಿರುಗಿಬಿದ್ದರು. ಕೆಎಸ್ಸಿಎ ಸದಸ್ಯರ ನಾಡಿಮಿಡಿತ ಅರಿತಿದ್ದ ಅವರು, ವೆಂಕಿ ಟೀಮ್ ಪರ ತೆರೆಮರೆಯ ರಣತಂತ್ರ ಹೆಣೆಯುವ ಮೂಲಕ ಪಟೇಲರ ಕೋಟೆಯನ್ನು ಒಡೆಯುವಲ್ಲಿ ಯಶಸ್ವಿಯಾದರು.
ಗೆಲುವು ಸಿಹಿಯಾಗಿದ್ದರೂ, ವೆಂಕಟೇಶ್ ಪ್ರಸಾದ್ ಅವರ ಮುಂದಿನ ಹಾದಿ ಸುಗಮವಾಗಿಲ್ಲ. ಕಳೆದ ಕೆಲ ವರ್ಷಗಳಿಂದ ಮಂಕಾಗಿರುವ ಕರ್ನಾಟಕ ಕ್ರಿಕೆಟ್ನ ಗತವೈಭವವನ್ನು ಮರುಕಳಿಸುವಂತೆ ಮಾಡುವುದು ಅವರ ಮುಂದಿರುವ ಮೊದಲ ಆದ್ಯತೆಯಾಗಬೇಕಿದೆ.
ಕೆಎಸ್ಸಿಎ ಕ್ಲಬ್ ಸದಸ್ಯರು ಮತ್ತು ಕ್ರಿಕೆಟ್ ಪ್ರೇಮಿಗಳು ಅಪಾರ ನಂಬಿಕೆಯಿಂದ ಕ್ರಿಕೆಟಿಗರ ಕೈಗೆ ಆಡಳಿತವನ್ನು ಒಪ್ಪಿಸಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದಾಗ ಆದ ಪ್ರಮಾದಗಳು ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ವೆಂಕಿ ಹೆಗಲ ಮೇಲಿದೆ. ಪ್ರತಿಷ್ಠೆ ಮತ್ತು ವೈಯಕ್ತಿಕ ಸ್ಥಾನಮಾನಗಳನ್ನು ಬದಿಗಿಟ್ಟು, ಅರ್ಹ ಕ್ರಿಕೆಟ್ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವುದು ಹೊಸ ಆಡಳಿತ ಮಂಡಳಿಯ ಕರ್ತವ್ಯವಾಗಿದೆ. ಒಟ್ಟಿನಲ್ಲಿ, 12 ವರ್ಷಗಳ ನಂತರದ ವಾಪಸಾತಿಯನ್ನು ವೆಂಕಟೇಶ್ ಪ್ರಸಾದ್ ಹೇಗೆ ಸದುಪಯೋಗಪಡಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.








