ಸ್ಯಾಂಡಲ್‌ವುಡ್ ಅಂಗಳದಲ್ಲಿ ಈಗೇನಿದ್ದರೂ 45 ಚಿತ್ರದ ಹವಾ ಜೋರಾಗಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರು ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ, ಕರುನಾಡ ಚಕ್ರವರ್ತಿ ಶಿವಣ್ಣ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಂತಹ ಘಟಾನುಘಟಿಗಳು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹೈವೋಲ್ಟೇಜ್ ಟ್ರೇಲರ್ ಬಿಡುಗಡೆಗೂ ಮುನ್ನವೇ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರು ಟ್ರೇಲರ್ ವೀಕ್ಷಿಸಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅವರು ಮಾತನಾಡಿದ ರೀತಿಯೀಗ ಗಾಂಧಿನಗರದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಅರ್ಜುನ್ ಜನ್ಯ ಕನಸಿಗೆ ರಿಷಬ್ ಸಾಥ್
ತಮ್ಮ ಗೆಳೆಯ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ಬಗ್ಗೆ ರಿಷಬ್ ಶೆಟ್ಟಿ ಭಾವುಕರಾಗಿ ಮಾತನಾಡಿದ್ದಾರೆ. ನನ್ನ ಮೊದಲ ನಿರ್ದೇಶನದ ಸಿನಿಮಾಗೆ ಸಂಗೀತ ನೀಡಿದವರು ಅರ್ಜುನ್ ಜನ್ಯ. ಒಬ್ಬ ನಿರ್ದೇಶಕನಾಗಿ ಮೊದಲ ಸಿನಿಮಾ ಮಾಡುವಾಗ ಎಷ್ಟು ಜವಾಬ್ದಾರಿ ಇರುತ್ತದೆ, ಕಥೆಯ ಬಗ್ಗೆ, ಮೇಕಿಂಗ್ ಬಗ್ಗೆ ಎಷ್ಟು ಕಾಳಜಿ ಇರುತ್ತದೆ ಎಂಬುದು ನನಗೆ ಗೊತ್ತು. ಈಗ ಅರ್ಜುನ್ ಸಿನಿಮಾ ಮುಗಿಸಿ ಟ್ರೇಲರ್ ರೆಡಿ ಮಾಡಿದ್ದಾರೆ. ನಾನೀಗ ತಾನೆ ಟ್ರೇಲರ್ ನೋಡಿದೆ, ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆ ಎಂದು ರಿಷಬ್ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.
ಲೆಜೆಂಡ್ಸ್ ಬಗ್ಗೆ ರಿಷಬ್ ಮಾತು
ಟ್ರೇಲರ್ ನೋಡಿದ ಬಳಿಕ ಮಾತನಾಡಿದ ರಿಷಬ್, ನನ್ನ ಪಾಲಿನ ಫೇವರೆಟ್ ನಟರಾದ ಶಿವಣ್ಣ ಹಾಗೂ ಉಪ್ಪಿ ಸರ್ ಇಬ್ಬರನ್ನೂ ದೊಡ್ಡ ಪರದೆ ಮೇಲೆ ಒಟ್ಟಿಗೆ ನೋಡುವುದೇ ಕಣ್ಣಿಗೆ ಹಬ್ಬ. ಇವರಿಬ್ಬರ ಪಾತ್ರಗಳನ್ನು ಅರ್ಜುನ್ ಜನ್ಯ ತಿದ್ದಿತೀಡಿರುವ ರೀತಿ ಅದ್ಭುತವಾಗಿದೆ. ಟ್ರೇಲರ್ ನೋಡುತ್ತಿದ್ದರೆ ಇದೊಂದು ಪಕ್ಕಾ ಮಾಸ್ ಸಿನಿಮಾ ಮತ್ತು ಅದರ ಹಿಂದೊಂದು ಗಟ್ಟಿ ವಿಚಾರವಿದೆ ಎಂಬುದು ತಿಳಿಯುತ್ತದೆ ಎಂದು ಹೇಳಿದ್ದಾರೆ.
ರಾಜ್ ಬಿ ಶೆಟ್ಟಿ ಹೆಸರು ಉಲ್ಲೇಖಿಸದ ರಿಷಬ್
ಆದರೆ ಇಲ್ಲೊಂದು ಕುತೂಹಲಕಾರಿ ಸಂಗತಿ ನಡೆದಿದೆ. 45 ಸಿನಿಮಾದಲ್ಲಿ ಶಿವಣ್ಣ ಹಾಗೂ ಉಪೇಂದ್ರ ಅವರ ಜೊತೆಗೆ ಪ್ರಮುಖ ಪಾತ್ರದಲ್ಲಿ ಗರುಡ ಗಮನ ವೃಷಭ ವಾಹನ ಖ್ಯಾತಿಯ ರಾಜ್ ಬಿ ಶೆಟ್ಟಿ ಕೂಡ ನಟಿಸಿದ್ದಾರೆ. ಸಿನಿಮಾದ ಪೋಸ್ಟರ್ ಹಾಗೂ ಟೀಸರ್‌ಗಳಲ್ಲಿ ರಾಜ್ ಬಿ ಶೆಟ್ಟಿ ಅವರ ಲುಕ್ ಕೂಡ ಗಮನ ಸೆಳೆದಿತ್ತು. ಆದರೆ ರಿಷಬ್ ಶೆಟ್ಟಿ ತಮ್ಮ ಶುಭಾಶಯದ ವಿಡಿಯೋದಲ್ಲಿ ಶಿವಣ್ಣ ಮತ್ತು ಉಪೇಂದ್ರ ಅವರ ಹೆಸರನ್ನು ಪ್ರಸ್ತಾಪಿಸಿ ಹೊಗಳಿದರೂ, ರಾಜ್ ಬಿ ಶೆಟ್ಟಿ ಅವರ ಹೆಸರನ್ನು ಮಾತ್ರ ಎಲ್ಲೂ ಉಲ್ಲೇಖಿಸಿಲ್ಲ. ಇದು ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎಂಬ ಕುತೂಹಲ ಸಿನಿರಸಿಕರಲ್ಲಿ ಮೂಡಿದೆ.
ಡಿಸೆಂಬರ್ 25ಕ್ಕೆ ಬರ್ತಿದೆ ಬಿಗ್ ಬಾಂಬ್
ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ರಮೇಶ್ ರೆಡ್ಡಿ ಅವರು ಅದ್ದೂರಿಯಾಗಿ ನಿರ್ಮಿಸಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25ರಂದು ವಿಶ್ವದಾದ್ಯಂತ ತೆರೆಕಾಣಲಿದೆ.








