ದೆಹಲಿಯಲ್ಲಿ ಫಿಟ್ನೆಸ್ ಅಭ್ಯಾಸದಲ್ಲಿ ನಿರತರಾಗಿರುವ ಇಶಾಂತ್ ಶರ್ಮಾ – ಉಮೇಶ್ ಯಾದವ್…!
ಟೀಮ್ ಇಂಡಿಯಾದ ವೇಗಿಗಳಾದ ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ಫಿಟ್ನೆಸ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಕೊರೋನಾ ವೈರಸ್ನಿಂದ ಕಳೆದ ಮೂರು ನಾಲ್ಕು ತಿಂಗಳುಗಳಿಂದ ಮನೆಯಲ್ಲೇ ಕುಳಿತುಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಬಿಝಿಯಾಗಿದ್ದರು. ಇದೀಗ ಒಬ್ಬೊಬ್ಬರೇ ಮೈದಾನದಲ್ಲಿ ಫಿಟ್ನೆಸ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ದೆಹಲಿಯಲ್ಲಿ ಇಶಾಂತ್ ಶರ್ಮಾ ಅವರು ತನ್ನ ಜೊತೆಗೆ ಫಿಟ್ನೆಸ್ ಅಭ್ಯಾಸ ಮಾಡುತ್ತಿರುವ ಉಮೇಶ್ ಯಾದವ್ ಜೊತೆಗಿನ ಫೋಟೋವೊಂದನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹಾಗೇ ನೋಡಿದ್ರೆ, ಇಶಾಂತ್ ಶರ್ಮಾ ಅವರು ಕಳೆದ ತಿಂಗಳಿಂದಲೇ ಹೋರಾಂಗಣದಲ್ಲಿ ಫಿಟ್ನೆಸ್ ಅಭ್ಯಾಸ ಮಾಡುತ್ತಿದ್ದಾರೆ. ಇನ್ನೊಂದೆಡೆ ಚೇತೇಶ್ವರ ಪೂಜಾರ ಅವರು ರಾಜ್ಕೋಟ್ನಲ್ಲಿ ಸೌರಾಷ್ಟ್ರ ತಂಡದ ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ.
ಮತ್ತೊಂದೆಡೆ, ಸುರೇಶ್ ರೈನಾ ಮತ್ತು ರಿಷಬ್ ಪಂತ್ ಅವರು ಗಾಝಿಯಾಬಾದ್ನಲ್ಲಿ ಜೊತೆಯಾಗಿ ಬ್ಯಾಟಿಂಗ್ ತಾಲೀಮು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಟೀಮ್ ಇಂಡಿಯಾ ಆಟಗಾರರು ಒಬ್ಬೊಬ್ಬರಾಗಿಯೇ ಅಭ್ಯಾಸ ಮಾಡಲು ಮುಂದಾಗುತ್ತಿದ್ದಾರೆ. ಆದ್ರೆ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಇದೀಗ ಕೋವಿಡ್ -19 ನಡುವೆಯೂ ಕ್ರಿಕೆಟಿಗರು ತಮ್ಮ ಆಟದತ್ತ ಚಿತ್ತವನ್ನಿಟ್ಟಿದ್ದಾರೆ.
ಈಗಾಗಲೇ ಟೀಮ್ ಇಂಡಿಯಾದ ಹಲವು ಸರಣಿಗಳು ರದ್ದುಗೊಂಡಿವೆ. ದಕ್ಷಿಣ ಆಫ್ರಿಕಾ ಸರಣಿ, ಶ್ರೀಲಂಕಾ, ಜಿಂಬಾಬ್ವೆ, ಇಂಗ್ಲೆಂಡ್, ಏಷ್ಯಾಕಪ್ ಸರಣಿಗಳು ರದ್ದುಗೊಂಡಿವೆ. ಟಿ-ಟ್ವೆಂಟಿ ವಿಶ್ವಕಪ್ ಸರಣಿಯೂ ರದ್ದುಗೊಳ್ಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಬಿಸಿಸಿಐ ಐಪಿಎಲ್ಗೆ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ.
ಇನ್ನೊಂದೆಡೆ ಟೀಮ್ ಇಂಡಿಯಾ ಮುಂದಿನ ಡಿಸೆಂಬರ್ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಸರಣಿಯನ್ನು ಎದುರು ನೋಡುತ್ತಿದೆ. ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಗೆಲ್ಲುವುದನ್ನು ಎದುರು ನೋಡುತ್ತಿದೆ. ಹಾಗೇ ಮೂರು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳ ಸರಣಿಯನ್ನೂ ಆಡಲಿದೆ. ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ನಾಯಕ ವಿರಾಟ್ ಕೊಹ್ಲಿಗೆ ವಾರ್ನಿಂಗ್ ಕೂಡ ನೀಡಿದ್ದಾರೆ.
ಅದೇ ರೀತಿ ಇಶಾಂತ್ ಶರ್ಮಾ ಕೂಡ ಆಸ್ಟ್ರೇಲಿಯಾ ಸರಣಿಯನ್ನು ಎದುರು ನೋಡುತ್ತಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ಇಶಾಂತ್ ಶರ್ಮಾ ತನ್ನ ನೂರನೇ ಟೆಸ್ಟ್ ಪಂದ್ಯ ಹಾಗೂ 300 ವಿಕೆಟ್ ಪಡೆಯುವ ಗುರಿಯನ್ನು ಹೊಂದಿದ್ದಾರೆ. ಸದ್ಯ ಇಶಾಂತ್ ಶರ್ಮಾ 97 ಟೆಸ್ಟ್ ಪಂದ್ಯಗಳಲ್ಲಿ 297 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಐದು ವಿಕೆಟ್ ಉರುಳಿಸಿದ್ದರು. ಆ ನಂತರ ಗಾಯಗೊಂಡ ಕಾರಣ ಸರಣಿಯಿಂದ ಹೊರನಡೆದಿದ್ದರು. ಇದೀಗ ಮತ್ತೆ ಫಿಟ್ನೆಸ್ ಕಾಯ್ದುಕೊಂಡು ಟೀಮ್ ಇಂಡಿಯಾವನ್ನು ಸೇರಿಕೊಳ್ಳುವ ತವಕದಲ್ಲಿದ್ದಾರೆ ಇಶಾಂತ್ ಶರ್ಮಾ.








