ಮೊಟ್ಟೆಗಳಲ್ಲಿ ಕ್ಯಾನ್ಸರ್ ಉಂಟುಮಾಡುವಂತಹ ‘ಜೀನೋಟಾಕ್ಸಿಕ್’ ಅಂಶಗಳಿವೆ ಎಂಬ ವದಂತಿಗಳು ರಾಜ್ಯಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡಿದೆ. ಈ ವದಂತಿಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸುತ್ತಿರುವುದರಿಂದ, ಮೊಟ್ಟೆಗಳ ಗುಣಮಟ್ಟ ಹಾಗೂ ಸುರಕ್ಷತೆ ಬಗ್ಗೆ ಸ್ಪಷ್ಟತೆ ನೀಡುವ ಉದ್ದೇಶದಿಂದ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಾರಾಟವಾಗುತ್ತಿರುವ ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ, ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಸರ್ಕಾರಿ ಲ್ಯಾಬ್ಗಳಲ್ಲಿ ಅಗತ್ಯ ತಂತ್ರಜ್ಞಾನ ಮತ್ತು ಆಧುನಿಕ ಪರೀಕ್ಷಾ ಸೌಲಭ್ಯಗಳ ಕೊರತೆ ಇರುವುದರಿಂದ ಖಾಸಗಿ ಲ್ಯಾಬ್ಗಳ ಸಹಾಯ ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಟ್ಟೆಗಳಲ್ಲಿ ಯಾವುದೇ ಹಾನಿಕಾರಕ ಅಥವಾ ಕ್ಯಾನ್ಸರ್ ಕಾರಕ ಅಂಶಗಳಿದೆಯೇ ಎಂಬುದನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ವರದಿ ಬಂದ ನಂತರ ಜನರಿಗೆ ಸ್ಪಷ್ಟ ಮಾಹಿತಿ ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.
ಅದೇ ವೇಳೆ, ಯಾವುದೇ ಅಧಿಕೃತ ವರದಿ ಹೊರಬರುವವರೆಗೆ ವದಂತಿಗಳಿಗೆ ಕಿವಿಗೊಡಬಾರದು ಎಂದು ಸಾರ್ವಜನಿಕರಿಗೆ ಸರ್ಕಾರ ಮನವಿ ಮಾಡಿದೆ. ಮೊಟ್ಟೆಗಳು ಪೌಷ್ಟಿಕ ಆಹಾರವಾಗಿದ್ದು, ಅನಗತ್ಯ ಭಯದಿಂದ ದೂರ ಇರಬೇಕೆಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.








