ಉತ್ತರ ಕರ್ನಾಟಕದ ಗಂಡುಮೆಟ್ಟಿನ ನಾಡು ಹುಬ್ಬಳ್ಳಿಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಬ್ಬರ ಮುಗಿಲು ಮುಟ್ಟಿತ್ತು. ಬಹುನಿರೀಕ್ಷಿತ ಮಾರ್ಕ್ ಚಿತ್ರದ ಬಿಡುಗಡೆಯ ಹೊಸ್ತಿಲಲ್ಲಿ ನಡೆದ ಅದ್ದೂರಿ ಪ್ರೀ ರಿಲೀಸ್ ಕಾರ್ಯಕ್ರಮ ಕೇವಲ ಸಿನಿಮಾ ಪ್ರಚಾರಕ್ಕೆ ಸೀಮಿತವಾಗಿರಲಿಲ್ಲ. ಬದಲಾಗಿ, ಅದು ಕಿಚ್ಚನ ವಿರೋಧಿಗಳಿಗೆ ರವಾನಿಸಿದ ಖಡಕ್ ಎಚ್ಚರಿಕೆಯ ಸಂದೇಶದಂತಿತ್ತು.
ಡಿಸೆಂಬರ್ 25 ರಂದು ಮಾರ್ಕ್ ಅಬ್ಬರ
ಇದೇ ಕ್ರಿಸ್ ಮಸ್ ಹಬ್ಬದಂದು ಅಂದರೆ ಡಿಸೆಂಬರ್ 25 ರಂದು ಮಾರ್ಕ್ ಚಿತ್ರ ತೆರೆಗೆ ಅಪ್ಪಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಸುದೀಪ್, ನಾವು ಜೋರಾಗಿಯೇ ಬಾಗಿಲು ತಟ್ಟಲಿದ್ದೇವೆ. ಹುಬ್ಬಳ್ಳಿಯಲ್ಲಿ ನಿಂತು ಆಡುವ ಕೆಲವು ಮಾತುಗಳು ಎಲ್ಲಿ ತಟ್ಟಬೇಕೋ ಅಲ್ಲಿಗೆ ತಟ್ಟೇ ತಟ್ಟುತ್ತದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಮ್ಮ ಎದುರಾಳಿಗಳಿಗೆ ಚಾಟಿ ಬೀಸಿದರು.
ಯುದ್ಧಕ್ಕೆ ಸಜ್ಜಾಯ್ತು ಕಿಚ್ಚನ ಪಡೆ
ವೇದಿಕೆಯಲ್ಲಿ ಆಕ್ರೋಶ ಹೊರಹಾಕಿದ ಸುದೀಪ್, ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿಯಾಗುತ್ತಿದೆ ಎಂಬ ಸುಳಿವು ನೀಡಿದರು. ನಾವು ಯುದ್ಧಕ್ಕೂ ಸಿದ್ಧ, ನಮ್ಮ ಮಾತಿಗೆ ನಾವು ಬದ್ಧ. ಇಷ್ಟು ದಿನ ನಾನು ಸುಮ್ಮನಿದ್ದೆ ಎಂದರೆ ಅದು ನನ್ನ ದೌರ್ಬಲ್ಯವಲ್ಲ, ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಆದರೆ ನನ್ನ ಸ್ನೇಹಿತರು ಚೆನ್ನಾಗಿರಲಿ ಎಂಬ ಕಾರಣಕ್ಕೆ ಬಾಯಿ ಮುಚ್ಚಿಕೊಂಡಿದ್ದೆ ಅಷ್ಟೇ ಹೊರತು, ನಮಗೆ ಬಾಯಿ ಇಲ್ಲ ಅಂತಲ್ಲ ಎಂದು ಗುಡುಗುವ ಮೂಲಕ ದರ್ಶನ್ ಅಭಿಮಾನಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎಂಬ ಚರ್ಚೆ ಗಾಂಧಿನಗರದಲ್ಲಿ ಶುರುವಾಗಿದೆ.
ಅಭಿಮಾನಿಗಳ ಸಹನೆಗೂ ಒಂದು ಲೆಕ್ಕವಿದೆ
ತಮ್ಮ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಕಿಚ್ಚ, ನನ್ನ ಸಹನೆಯಿಂದಾಗಿ ನಿಮ್ಮ ಮೇಲೆ ಕಲ್ಲಿನ ತೂರಾಟ ನಡೆಯುತ್ತಲೇ ಇದೆ. ಅದನ್ನು ನೀವು ಸಹಿಸಿಕೊಂಡು ಬರುತ್ತಿದ್ದೀರಿ. ಆದರೆ ಈಗ ಹೇಳುತ್ತಿದ್ದೇನೆ, ತಡೆಯೋ ತನಕ ತಡಿರಿ, ಆದರೆ ಮಾತಾಡೋ ಟೈಮ್ ಬಂದಾಗ ನೀವೂ ಮಾತಾಡಿ ಎಂದು ಕರೆ ನೀಡುವ ಮೂಲಕ ಅಭಿಮಾನಿಗಳಲ್ಲಿ ಹೊಸ ಜೋಶ್ ತುಂಬಿದ್ದಾರೆ.
ಒಟ್ಟಿನಲ್ಲಿ ಮಾರ್ಕ್ ಚಿತ್ರದ ಮೂಲಕ ಸುದೀಪ್ ಬಾಕ್ಸಾಫೀಸ್ ಬೇಟೆಯಾಡಲು ಸಜ್ಜಾಗಿದ್ದು, ಹುಬ್ಬಳ್ಳಿಯ ಈ ಮಾತುಗಳು ಸ್ಯಾಂಡಲ್ ವುಡ್ ಅಂಗಳದಲ್ಲಿ ಹೊಸ ಸಮರಕ್ಕೆ ನಾಂದಿ ಹಾಡಿದಂತಿದೆ.








