ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಜನರು ಭಯ ಭೀತರಾಗಿದ್ದಾರೆ. ಇದರ ಮಧ್ಯೆ ಹೆಮ್ಮಾರಿ ಸೋಂಕಿನ ವಿರುದ್ಧ ಹೋರಾಡಿ 85 ವಯಸ್ಸಿನ ವೃದ್ಧೆಯೊಬ್ಬರು ಕೊರೊನಾದಿಂದ ಗುಣಮುಖರಾಗಿದ್ದಾರೆ.
ಲೋಕೀಕೆರೆ ಗ್ರಾಮದ ಹನುಮಕ್ಕ ಎಂಬ ವೃದ್ಧೆ ಸದ್ಯ ಸೋಂಕಿನಿಂದ ಗುಣಮುಖರಾಗಿದ್ದು, ಸ್ವಗ್ರಾಮಕ್ಕೆ ಬಂದು ಜನರಲ್ಲಿ ಧೈರ್ಯ ತುಂಬಿದ್ದಾರೆ. ಇವರಿಗೆ ಮೊಮ್ಮಗನ ಪ್ರಾಥಮಿಕ ಸಂಪರ್ಕದಿಂದಾಗಿ ಜು. 3ರಂದು ಸೋಂಕು ದೃಢಪಟ್ಟಿತು. ಚಿಕಿತ್ಸೆಗಾಗಿ ಜಿಂದಾಲ್ ನ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ 11 ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಿ ಸೋಮವಾರ ಸ್ವಗ್ರಾಮ ಲೋಕೀಕೆರೆಗೆ ಬಂದಿದ್ದಾರೆ.
ಇನ್ನು ಸೋಂಕಿನಿಂದ ಗುಣಮುಖರಾದ ಇವರನ್ನು ಕಾನಾ ಹೊಸಹಳ್ಳಿಯ ಉಪತಹಶೀಲ್ದಾರ್ ಚಂದ್ರಮೋಹನ್, ಹುಡೇಂ ಆಸ್ಪತ್ರೆ ಸಿಬ್ಬಂದಿ ಟಿ.ಎಲ್.ಸ್ವಾಮಿ, ಮಲ್ಲಿಕಾ, ಗ್ರಾಮಲೆಕ್ಕಾಧಿಕಾರಿ ಮರಳುಸಿದ್ದಪ್ಪ, ತ್ರಿವೇಣಿ, ಶಾಂತಣ್ಣ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸ್ವಾಗತಿಸಿದ್ದಾರೆ.








