ಹಾವೇರಿ: ಕಿರುತೆರೆಯ ಧಾರಾವಾಹಿಗಳು ಮಹಿಳೆಯರ ಮನಸ್ಥಿತಿಯ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಕುರಿತು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಹಾವೇರಿಯ ಇತಿಹಾಸ ಪ್ರಸಿದ್ಧ ಶ್ರೀ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವದ ವೇದಿಕೆಯಲ್ಲಿ ಮಾತನಾಡಿದ ಅವರು, ಧಾರಾವಾಹಿಗಳು ಮಹಿಳೆಯರಿಗೆ ಕೇವಲ ಮನೆಹಾಳ ಬುದ್ಧಿಯನ್ನು ಕಲಿಸುತ್ತಿವೆ ಎಂಬ ಆಕ್ರೋಶದ ಮಾತುಗಳನ್ನಾಡಿದ್ದು, ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.
ಅದ್ದೂರಿಯಾಗಿ ನಡೆದ ಹುಕ್ಕೇರಿ ಮಠದ ಜಾತ್ರಾ
ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಸ್‌ಪಿ ಯಶೋಧಾ ಅವರು, ಇಂದಿನ ದಿನಗಳಲ್ಲಿ ಮನೆಯ ಹೆಣ್ಣುಮಕ್ಕಳು ಟಿವಿ ಧಾರಾವಾಹಿಗಳಿಗೆ ಅದೆಷ್ಟು ದಾಸರಾಗಿದ್ದಾರೆಂದರೆ, ಅದು ಅವರ ಜೀವನಶೈಲಿ ಮತ್ತು ಮಕ್ಕಳ ಭವಿಷ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಎಚ್ಚರಿಸಿದರು.
ಕಳ್ಳತನವಾದರೂ ಗೊತ್ತಾಗದಷ್ಟು ಅಡಿಕ್ಷನ್
ತಮ್ಮ ಪೊಲೀಸ್ ವೃತ್ತಿಜೀವನದ ಅನುಭವವನ್ನು ಉಲ್ಲೇಖಿಸಿದ ಅವರು, ಧಾರಾವಾಹಿಗಳ ಗೀಳು ಭದ್ರತೆಯ ಮೇಲೂ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ವಿವರಿಸಿದರು. ಮಹಿಳೆಯರು ಟಿವಿ ಪರದೆಗೆ ಅಂಟಿಕೊಂಡು ಕೂತಾಗ, ಮನೆಯ ಹಿಂಬಾಗಿಲಿಂದ ಕಳ್ಳರು ಬಂದು ಕಳ್ಳತನ ಮಾಡಿಕೊಂಡು ಹೋದರೂ ಇವರಿಗೆ ತಿಳಿಯುವುದಿಲ್ಲ. ಧಾರಾವಾಹಿಗಳಿಗೆ ಮಹಿಳೆಯರು ಅಷ್ಟರಮಟ್ಟಿಗೆ ಅಡಿಕ್ಟ್ ಆಗಿದ್ದಾರೆ. ಇಂತಹ ಅನೇಕ ಪ್ರಕರಣಗಳನ್ನು ನಾವು ನೋಡಿದ್ದೇವೆ ಎಂದು ಎಸ್‌ಪಿ ಯಶೋಧಾ ವಿಷಾದ ವ್ಯಕ್ತಪಡಿಸಿದರು. ಧಾರಾವಾಹಿ ತಂಡದವರು ನನ್ನ ಮೇಲೆ ಬೇಸರಗೊಂಡರೂ ಪರವಾಗಿಲ್ಲ, ಆದರೆ ಸತ್ಯವನ್ನು ಹೇಳಲೇಬೇಕು ಎಂದು ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಮಕ್ಕಳ ಭವಿಷ್ಯಕ್ಕೆ ಅಮ್ಮಂದಿರೇ ರೋಲ್ ಮಾಡೆಲ್ ಆಗಲಿ
ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಪೋಷಕರ ದ್ವಂದ್ವ ನೀತಿಯನ್ನು ಎಸ್‌ಪಿ ಪ್ರಶ್ನಿಸಿದರು. ತಾಯಂದಿರೇ ಟಿವಿ ಮುಂದೆ ಕುಳಿತು ಧಾರಾವಾಹಿ ನೋಡುತ್ತಾ, ಮಕ್ಕಳಿಗೆ ಓದಲು ಹೇಳಿದರೆ ಅವರ ಮನಸ್ಸು ಓದಿನ ಕಡೆಗೆ ಹೇಗೆ ಹರಿಯುತ್ತದೆ? ಎಂದು ಪ್ರಶ್ನಿಸಿದರು. ನೀವು ಮಕ್ಕಳನ್ನು ಬಲವಂತವಾಗಿ ಓದಿಸುವ ಬದಲು, ನೀವೇ ಕೈಯಲ್ಲಿ ವಚನಗಳ ಪುಸ್ತಕವನ್ನೋ ಅಥವಾ ಕಾದಂಬರಿಗಳನ್ನೋ ಹಿಡಿದು ಓದುತ್ತಾ ಕುಳಿತುಕೊಳ್ಳಿ. ತಾಯಿಯನ್ನು ನೋಡಿ ಮಗು ತನ್ನಷ್ಟಕ್ಕೇ ಕಲಿಯುತ್ತದೆ. ಪಾಠ ಮಾಡುವ ಅವಶ್ಯಕತೆಯೇ ಬರುವುದಿಲ್ಲ. ಮಕ್ಕಳ ಬದುಕು ಉಜ್ವಲವಾಗಬೇಕೆಂದರೆ ಮೊದಲು ತಾಯಂದಿರು ಬದಲಾಗಬೇಕು ಎಂದು ಸಲಹೆ ನೀಡಿದರು.
ಇಂಗ್ಲಿಷ್ ಮೀಡಿಯಂ ವ್ಯಾಮೋಹ ಬೇಡ
ಶಿಕ್ಷಣ ಮತ್ತು ಸಂಸ್ಕಾರದ ಕುರಿತು ಮಾತನಾಡಿದ ಅವರು, ಕೇವಲ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದಾಕ್ಷಣ ಮಕ್ಕಳು ಸಾಧನೆ ಮಾಡುತ್ತಾರೆ ಎಂಬುದು ತಪ್ಪು ಕಲ್ಪನೆ. ಕನ್ನಡ ಮಾಧ್ಯಮದಲ್ಲಿ ಓದಿಯೂ ಉನ್ನತ ಸಾಧನೆ ಮಾಡಲು ಸಾಧ್ಯವಿದೆ. ಪ್ರತಿಯೊಬ್ಬರೂ ಫಸ್ಟ್ ರ್ಯಾಂಕ್ ಬರುವುದು ಸಾಧ್ಯವಿಲ್ಲ ಮತ್ತು ಅದರ ಅವಶ್ಯಕತೆಯೂ ಇಲ್ಲ. ಇತ್ತೀಚೆಗೆ ಶಾಲೆಯೊಂದರ ಪೋಷಕರ ಸಭೆಯಲ್ಲಿ ಪಾಲಕರು ಶಿಕ್ಷಕರನ್ನು ಕೇಳುತ್ತಿದ್ದ ಪ್ರಶ್ನೆಗಳನ್ನು ಕೇಳಿ ನನಗೆ ಆಘಾತವಾಯಿತು. ಅಂಕಗಳಿಗಿಂತ ಮಿಗಿಲಾಗಿ ಮಕ್ಕಳಿಗೆ ಸಂಸ್ಕಾರ ಕಲಿಸಿ, ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ತಿಳಿಸಿಕೊಡಿ ಎಂದು ಕಿವಿಮಾತು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ
ಎಸ್‌ಪಿ ಯಶೋಧಾ ಅವರ ಈ ನೇರ ನುಡಿಗಳಿಗೆ ನೆರೆದಿದ್ದ ಜನಸ್ತೋಮದಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಒಂದೆಡೆ ಮನರಂಜನಾ ವಾಹಿನಿಗಳ ಆರ್ಭಟದಲ್ಲಿ ಮಹಿಳೆಯರು ಸಂಜೆಗತ್ತಲಾದರೆ ಟಿವಿ ಮುಂದೆ ತಪಸ್ಸು ಮಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಯೊಬ್ಬರು ಧಾರಾವಾಹಿಗಳ ನೈಜತೆಯನ್ನು ಬಿಚ್ಚಿಟ್ಟಿರುವುದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಬಹುತೇಕರು ಎಸ್‌ಪಿ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದು, ಇದು ಇಂದಿನ ಅಗತ್ಯ ಸಂದೇಶ ಎಂದು ಶ್ಲಾಘಿಸಿದ್ದಾರೆ.








