ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಜೋರಾಗಿರುವ ಬೆನ್ನಲ್ಲೇ, ಇದೀಗ ರಾಜಕೀಯ ಹೈಡ್ರಾಮಾವೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣಿಟ್ಟು ಕಾಯುತ್ತಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪ್ರಬಲ ಪೈಪೋಟಿ ನೀಡಲು ಹಿರಿಯ ನಾಯಕ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಅಧಿಕೃತವಾಗಿಯೇ ಅಖಾಡಕ್ಕಿಳಿದಿದ್ದಾರೆ.
ರಾಜಕೀಯವಾಗಿ ನನಗೂ ಪದೋನ್ನತಿ ಹೊಂದುವ ಮಹಾತ್ವಕಾಂಕ್ಷೆ ಇದೆ ಎಂದು ಹೇಳುವ ಮೂಲಕ ಪರಮೇಶ್ವರ್ ಅವರು ಮುಖ್ಯಮಂತ್ರಿ ರೇಸ್ಗೆ ತಾವೂ ಸೈ ಎಂದಿದ್ದು, ಕಾಂಗ್ರೆಸ್ ಪಾಳಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಮೌನ ಮುರಿದ ಪರಮೇಶ್ವರ್, ನೇರ ಸ್ಪರ್ಧೆಗೆ ಸಜ್ಜು
ಇಷ್ಟು ದಿನಗಳ ಕಾಲ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾದರೆ, ಸಹಜವಾಗಿಯೇ ಆ ಸ್ಥಾನ ತಮಗೆ ಒಲಿಯಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದರು. ದೆಹಲಿ ಮಟ್ಟದಲ್ಲಿ ನಾನಾ ಕಸರತ್ತುಗಳನ್ನು ನಡೆಸುತ್ತಿದ್ದರು. ಆದರೆ, ಇದೀಗ ಚಿತ್ರಣ ಬದಲಾಗಿದೆ. ಸದಾ ಸೌಮ್ಯ ಸ್ವಭಾವದ ಮತ್ತು ಮಿತಬಾಷಿಯಾಗಿದ್ದ ಪರಮೇಶ್ವರ್, ಇದೀಗ ದಿಢೀರನೆ ಸಿಎಂ ರೇಸ್ ಬಗ್ಗೆ ಬಾಯಿಬಿಟ್ಟಿರುವುದು ಶಿವಕುಮಾರ್ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ.
ತೆರೆಮರೆಯಲ್ಲಿ ನಡೆದಿದೆಯೇ ಭಾರಿ ಲಾಬಿ?
ಪರಮೇಶ್ವರ್ ಅವರ ಈ ಹೇಳಿಕೆ ಅನಿರೀಕ್ಷಿತವೇನಲ್ಲ. ಕಳೆದ ಕೆಲವು ದಿನಗಳಿಂದ ದೆಹಲಿ ಮಟ್ಟದಲ್ಲಿ ಪರಮೇಶ್ವರ್ ಪರವಾಗಿ ತೆರೆಮರೆಯ ಲಾಬಿ ಜೋರಾಗಿಯೇ ನಡೆದಿದೆ ಎನ್ನಲಾಗಿದೆ. ಕಾಂಗ್ರೆಸ್ನ ಕೆಲವು ಹಿರಿಯ ನಾಯಕರು ಈಗಾಗಲೇ ಹೈಕಮಾಂಡ್ ಭೇಟಿಯಾಗಿ, ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡುವುದರಿಂದ ಪಕ್ಷಕ್ಕಾಗುವ ಲಾಭಗಳ ಬಗ್ಗೆ ವಿಸ್ತೃತ ವರದಿ ನೀಡಿದ್ದಾರೆ ಎಂಬ ಮಾಹಿತಿಯಿದೆ. ದಲಿತ ಸಮುದಾಯದ ಪ್ರಬಲ ನಾಯಕನಿಗೆ ಪಟ್ಟ ಕಟ್ಟಿದರೆ ಲೋಕಸಭೆ ಹಾಗೂ ಮುಂದಿನ ಚುನಾವಣೆಗಳಲ್ಲಿ ಪಕ್ಷಕ್ಕೆ ಭದ್ರ ಬುನಾದಿ ಸಿಗಲಿದೆ ಎಂಬ ಲೆಕ್ಕಾಚಾರವನ್ನು ವರಿಷ್ಠರ ಮುಂದಿಡಲಾಗಿದೆ.
ಸಿದ್ದು ಬಣದ ರಣತಂತ್ರ ಮತ್ತು ದಲಿತ ಸಿಎಂ ಅಸ್ತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ ಕೂಡ ಈ ಬೆಳವಣಿಗೆಯ ಹಿಂದೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಮುಡಾ ಹಗರಣ ಅಥವಾ ಇನ್ಯಾವುದೇ ಕಾರಣಕ್ಕೆ ನಾಯಕತ್ವ ಬದಲಾವಣೆ ಅನಿವಾರ್ಯವಾದರೆ, ತಮ್ಮ ಪ್ರತಿಸ್ಪರ್ಧಿ ಡಿ.ಕೆ. ಶಿವಕುಮಾರ್ ಅವರಿಗೆ ಮಣೆ ಹಾಕುವ ಬದಲು, ದಲಿತ ಸಿಎಂ ದಾಳ ಉರುಳಿಸುವುದು ಸಿದ್ದರಾಮಯ್ಯ ಆಪ್ತರ ಲೆಕ್ಕಾಚಾರವಾಗಿದೆ. ದಲಿತರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಪ್ರತಿಪಾದಿಸುವ ಮೂಲಕ ಪರೋಕ್ಷವಾಗಿ ಪರಮೇಶ್ವರ್ ಅವರಿಗೆ ಸಿದ್ದರಾಮಯ್ಯ ಬಣ ಬೆಂಬಲ ಸೂಚಿಸುತ್ತಿದೆ ಎನ್ನಲಾಗಿದೆ.
ಪದೋನ್ನತಿಯ ಮಹತ್ವಾಕಾಂಕ್ಷೆ ತಪ್ಪೇನಲ್ಲ
ಸುದ್ದಿಗಾರರೊಂದಿಗೆ ಮಾತನಾಡುವಾಗ ಪರಮೇಶ್ವರ್ ಅವರು ಅತ್ಯಂತ ಮಾರ್ಮಿಕವಾಗಿ ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ. ಶಾಸಕನಾಗಬೇಕು, ನಂತರ ಮಂತ್ರಿಯಾಗಬೇಕು ಎಂಬ ಹಂತ ಹಂತದ ಆಸೆಗಳ ನಂತರ, ಮುಂದಿನ ಹಂತಕ್ಕೆ ಏರುವ ಮಹತ್ವಾಕಾಂಕ್ಷೆ ಇರುವುದು ಸಹಜ. ನನಗೂ ಆ ಪದೋನ್ನತಿಯ ಆಸೆ ಇದೆ. ರಾಜಕೀಯದಲ್ಲಿ ನಾನು ಸದಾ ಆಶಾವಾದಿ. ಆದರೆ ಅಂತಿಮ ನಿರ್ಧಾರ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಹೇಳುವ ಮೂಲಕ, ಚೆಂಡನ್ನು ವರಿಷ್ಠರ ಅಂಗಳಕ್ಕೆ ಎಸೆದಿದ್ದಾರೆ.
ರಾಜ್ಯ ರಾಜಕೀಯದ ವಾತಾವರಣ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಈ ಸಂಗೀತ ಕುರ್ಚಿ ಆಟದಲ್ಲಿ ಅಂತಿಮ ಗೆಲುವು ಯಾರದ್ದು ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಪರಮೇಶ್ವರ್ ಅವರ ಈ ಎಂಟ್ರಿಯಿಂದಾಗಿ ಸಿಎಂ ರೇಸ್ ಈಗ ದ್ವಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ.








