ಬೆಂಗಳೂರು: ಗಣಿ ಉದ್ಯಮಿ ಹಾಗೂ ಹಾಲಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದು, ರೆಡ್ಡಿಯವರ ರಾಜಕೀಯ ಜೀವನ, ಜೈಲುವಾಸ ಹಾಗೂ ಬಿಜೆಪಿ ನಾಯಕರೊಂದಿಗಿನ ಹಳೆಯ ಸಂಬಂಧಗಳನ್ನು ಪ್ರಸ್ತಾಪಿಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಜೈಲಿನಲ್ಲಿ ತಟ್ಟೆ, ಲೋಟ, ಚಮಚಗಳನ್ನು ಬಿಟ್ಟು ಬೇರೆ ಜಗತ್ತು ನೋಡದ ಜನಾರ್ದನ ರೆಡ್ಡಿಯವರಿಗೆ, ರಾಜಕೀಯ ಜೀವನದಲ್ಲಿ ಚಮಚಾಗಿರಿ ಮಾಡುವುದನ್ನು ಬಿಟ್ಟರೆ ಬೇರೆ ಪ್ರಪಂಚದ ಪರಿಜ್ಞಾನವೇ ಇಲ್ಲ ಎಂದು ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಅಮಿತ್ ಶಾ ತಿರಸ್ಕಾರ ನೆನಪಿಸಿದ ಹರಿಪ್ರಸಾದ್
ರೆಡ್ಡಿಯವರ ಹಿಂದಿನ ರಾಜಕೀಯ ನಡೆಗಳನ್ನು ಟೀಕಿಸಿರುವ ಹರಿಪ್ರಸಾದ್, ಹಿಂದೆ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಪಾದ ಪೂಜೆ ಮಾಡಿ, ಆ ಪಾದ ತೊಳೆದ ನೀರು ಕುಡಿದು ರೆಡ್ಡಿ ರಾಜಕೀಯ ಲಾಭ ಪಡೆದುಕೊಂಡಿದ್ದರು. ಆ ಪಾದ ಪೂಜೆಯ ನೀರು ಅವರ ನೆತ್ತಿಗೇರಿರಬೇಕು. ಅದಕ್ಕಾಗಿಯೇ ಅಮಿತ್ ಶಾ ಅವರು ತಲೆ ಮೇಲೆ ಕುಟ್ಟಿ, ಬಿಜೆಪಿಗೂ ಈ ಜೈಲುವಾಸಿ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿ, ತುಪಕ್ ಎಂದು ಉಗಿದಿದ್ದನ್ನು ರೆಡ್ಡಿ ಮರೆತಂತಿದೆ ಎಂದು ಹರಿಪ್ರಸಾದ್ ಕಟುವಾದ ಶಬ್ದಗಳಲ್ಲಿ ಟೀಕಿಸಿದ್ದಾರೆ.
ಊಸರವಳ್ಳಿ ಆಟ ಮತ್ತು ಸ್ನೇಹದ್ರೋಹದ ಆರೋಪ
ಜನಾರ್ದನ ರೆಡ್ಡಿಯವರದ್ದು ಊಸರವಳ್ಳಿ ಆಟ ಎಂದು ಬಣ್ಣಿಸಿರುವ ಹರಿಪ್ರಸಾದ್, ಒಮ್ಮೆ ಜೀವದ ಗೆಳೆಯ ಎನ್ನುವುದು, ಮತ್ತೊಮ್ಮೆ ಶ್ರೀರಾಮುಲು ವಿರುದ್ಧವೇ ಮಸಲತ್ತು ಮಾಡುವುದು ರೆಡ್ಡಿಯ ಜಾಯಮಾನ. ಸ್ವತಃ ತಮ್ಮ ಸಹೋದರರನ್ನೇ ರಾಜಕೀಯವಾಗಿ ಮುಗಿಸಲು ರೆಡ್ಡಿ ಹೊರಟಿದ್ದರು. ಅವರ ಮೂರು ಕಾಸಿಗೂ ಕಿಮ್ಮತ್ತಿಲ್ಲದ ತಂತ್ರಗಾರಿಕೆ ಬಗ್ಗೆ ಶ್ರೀರಾಮುಲು ಆಡಿರುವ ಮಾತುಗಳೇ ಸಾಕ್ಷಿ. ಸಾಧ್ಯವಾದರೆ ರೆಡ್ಡಿ ಅವುಗಳನ್ನು ಒಮ್ಮೆ ಎಣಿಸಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.
ನಾನು ವಾರ್ಡ್ ಚುನಾವಣೆ ಗೆದ್ದಿಲ್ಲದಿರಬಹುದು, ಆದರೆ ಹಿಂಬಾಗಿಲೋ ಅಥವಾ ಮುಂಬಾಗಿಲೋ ರಾಜಾರೋಷವಾಗಿಯೇ ರಾಜಕೀಯಕ್ಕೆ ಬಂದಿದ್ದೇನೆ ಹೊರತು, ಚುನಾವಣೆಯ ಎರಡು ದಿನದ ಹಿಂದಿನ ಕತ್ತಲೆ ರಾತ್ರಿಯ ರಹಸ್ಯ ಕಾರ್ಯಾಚರಣೆಯ ಮೂಲಕ ಬಂದಿಲ್ಲ ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ರೆಡ್ಡಿಗೆ ನೇರ ಸವಾಲು ಹಾಕಿರುವ ಅವರು, 224 ವಿಧಾನಸಭಾ ಕ್ಷೇತ್ರಗಳಲ್ಲಿ ಜಾತಿ ಮತ್ತು ಹಣದ ಬಲವಿಲ್ಲದೆ ಚುನಾವಣೆ ಎದುರಿಸಲು ರೆಡ್ಡಿ ಸಿದ್ಧರಿದ್ದಾರೆಯೇ? ಧೈರ್ಯ ಮತ್ತು ತಾಕತ್ತು ಇದ್ದರೆ, ಪ್ರಾಮಾಣಿಕವಾಗಿ ಚುನಾವಣೆ ನಡೆಸುವ ಕಿಂಚಿತ್ತಾದರೂ ಎದೆಗಾರಿಕೆ ಇದ್ದರೆ ಮುಂದೆ ಬರಲಿ ಎಂದು ಸವಾಲು ಹಾಕಿದ್ದಾರೆ.
ನ್ಯಾಯಾಧೀಶರ ಡೀಲ್ ಮತ್ತು ಗಡಿಪಾರು ಪ್ರಸ್ತಾಪ
ನಮ್ಮ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿಚಾರದಲ್ಲಿ ಸುಳ್ಳು ಕೇಸ್ ಹಾಕಿದ್ದಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ. ಆದರೆ ರೆಡ್ಡಿ ಹಾಗಲ್ಲ, ನ್ಯಾಯಾಧೀಶರನ್ನೇ ಹತ್ತು ಕೋಟಿ ರೂಪಾಯಿಗೆ ಡೀಲ್ ಮಾಡಿ ಬೇಲ್ ತೆಗೆದುಕೊಂಡವರು. ನಮ್ಮ ನಾಯಕರು ಸುಳ್ಳು ಕೇಸ್ ಹಾಕಿಸಿಕೊಂಡು ಓಡಾಡುತ್ತಿರಬಹುದು, ಆದರೆ ನಿಮ್ಮಂತೆ ಕೊಲೆ ಕೇಸ್ ಮತ್ತು ಭ್ರಷ್ಟಾಚಾರದ ಆರೋಪದಲ್ಲಿ ಸುಪ್ರೀಂ ಕೋರ್ಟ್ ನಿಂದ ಗಡಿಪಾರು ಶಿಕ್ಷೆಗೆ ಗುರಿಯಾಗಿಲ್ಲ ಎಂದು ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ಬಿಜೆಪಿಯಲ್ಲಿ ನೆಲೆ ಇಲ್ಲದ ಸ್ಥಿತಿ
ಅವರಿವರ ಕಾಲು ಹಿಡಿದು ಬಿಜೆಪಿ ಸೇರಿರುವ ರೆಡ್ಡಿ, ಈಗ ನೆಲೆ ಇಲ್ಲದೆ ಬಿಲ ಹುಡುಕಾಡುವ ದಯನೀಯ ಸ್ಥಿತಿಯಲ್ಲಿದ್ದಾರೆ. ಶೇಷ ಮತ್ತು ಅವಶೇಷಗಳ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ಸದ್ಯಕ್ಕೆ ಜೈಲು, ಡೀಲು ಮತ್ತು ಬೇಲುಗಳ ಬಗ್ಗೆ ಮಾತ್ರ ಮಾತನಾಡಿದ್ದೇನೆ. ಅಗತ್ಯ ಬಿದ್ದರೆ ರೆಡ್ಡಿಯವರ ಇತರೆ ಹಗರಣಗಳನ್ನು ಎಳೆ ಎಳೆಯಾಗಿ ಬಿಚ್ಚಿಡಲು ನಾನು ಸಿದ್ಧನಿದ್ದೇನೆ ಎಂದು ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.








