ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಎನ್ನುವ ಮಾತು ಅಕ್ಷರಶಃ ಸತ್ಯ. ಅದರಲ್ಲೂ ಅಭಿಮಾನದ ವಿಷಯದಲ್ಲಿ ಇದು ನೂರಕ್ಕೆ ನೂರರಷ್ಟು ಅನ್ವಯವಾಗುತ್ತದೆ. ಅಭಿಮಾನಿಗಳನ್ನು ದೇವರು ಎನ್ನುತ್ತಾರೆ, ಆದರೆ ಅದೇ ಅಭಿಮಾನಿಗಳು ತಮ್ಮ ನಿರೀಕ್ಷೆಗೆ ತಕ್ಕಂತೆ ತಮ್ಮ ನೆಚ್ಚಿನ ತಾರೆಯರು ನಡೆದುಕೊಳ್ಳದಿದ್ದಾಗ ತಿರುಗಿ ಬೀಳುವ ಸಾಧ್ಯತೆಯೂ ಇರುತ್ತದೆ. ಸದ್ಯ ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ (Gilli Nata) ಅವರ ವಿಷಯದಲ್ಲಿಯೂ ಇದೇ ನಡೆಯುತ್ತಿದೆ. ಗಿಲ್ಲಿಗೆ ಜೈ ಎಂದವರೇ ಈಗ ಅವರ ವಿರುದ್ಧ ಅಪಪ್ರಚಾರಕ್ಕೆ ಇಳಿದಿರುವುದು ಚರ್ಚೆಗೆ ಗ್ರಾಸವಾಗಿದೆ.
ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಯ ಆಕ್ರೋಶ
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತರಾಗಿ ಹೊರಹೊಮ್ಮಿದ ಗಿಲ್ಲಿ ನಟ ಅವರಿಗೆ ದೊರೆತ ಜನಪ್ರಿಯತೆ ಸಾಮಾನ್ಯವಾದುದಲ್ಲ. ಶೋ ಗೆದ್ದ ಬಳಿಕ ಅವರ ಅಭಿಮಾನಿ ಬಳಗ ರಾಜ್ಯಾದ್ಯಂತ ಹಬ್ಬಿದೆ. ಕೆಲವರಂತೂ ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ತೋರ್ಪಡಿಸಲು ಕೈ ಮೇಲೆ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ. ಬಿಗ್ ಬಾಸ್ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಈ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಸುದ್ದಿಯಾಗಿದ್ದರು. ಆ ವೇಳೆ ಮಾತನಾಡಿದ್ದ ಗಿಲ್ಲಿ, ತಾವು ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಖಂಡಿತವಾಗಿಯೂ ಭೇಟಿ ಮಾಡುತ್ತೇನೆ ಎಂಬ ಭರವಸೆ ನೀಡಿದ್ದರು ಎನ್ನಲಾಗಿದೆ.
ಆದರೆ ವಾಸ್ತವ ಬೇರೆಯೇ ಇದೆ. ಶೋ ಮುಗಿದು ಹೊರಬಂದ ನಂತರ ಗಿಲ್ಲಿ ಸಾಲು ಸಾಲು ಕಾರ್ಯಕ್ರಮಗಳು, ಸಂದರ್ಶನಗಳು ಮತ್ತು ಶೂಟಿಂಗ್ ಬ್ಯುಸಿಯಲ್ಲಿ ಮುಳುಗಿದ್ದಾರೆ. ಈ ಒತ್ತಡದ ಕಾರಣದಿಂದ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಯನ್ನು ಭೇಟಿ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಇದನ್ನೇ ಅಪಾರ್ಥ ಮಾಡಿಕೊಂಡಿರುವ ಅಭಿಮಾನಿ ಈಗ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಶ್ರೀಮಂತರನ್ನು ಮಾತ್ರ ಭೇಟಿ ಮಾಡ್ತಾರಾ?
ನಿರೀಕ್ಷೆ ಹುಸಿ ಹೋದಾಗ ಅಭಿಮಾನ ರೋಷವಾಗಿ ಬದಲಾಗಿದೆ. ಗಿಲ್ಲಿ ತಮ್ಮನ್ನು ಭೇಟಿ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅಭಿಮಾನಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಾವು ಅವರಿಗೋಸ್ಕರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಪ್ರಸಾದ ತಂದಿದ್ದೆವು. ಅವರ ಅಣ್ಣನಿಗೆ ಕರೆ ಮಾಡಿ ವಿಷಯ ತಿಳಿಸಿ, ಪ್ರಸಾದ ಕೊಡಬೇಕಿತ್ತು ಎಂದರೂ ಭೇಟಿಗೆ ಅವಕಾಶ ಸಿಗಲಿಲ್ಲ. ಗಿಲ್ಲಿ ಕೇವಲ ದುಡ್ಡಿರುವವರನ್ನು, ಕಾರು ಬಂಗಲೆ ಇರುವ ಶ್ರೀಮಂತರನ್ನು ಮಾತ್ರ ಭೇಟಿ ಮಾಡುತ್ತಿದ್ದಾರೆ. ನಮ್ಮಂತಹ ಸಾಮಾನ್ಯ ಅಭಿಮಾನಿಗಳನ್ನು ಅವರು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಕ್ಕಟ್ಟಿನಲ್ಲಿ ಸಿಲುಕಿದರೇ ಗಿಲ್ಲಿ?
ಸದ್ಯ ಗಿಲ್ಲಿಗೆ ಸಿಕ್ಕಿರೋ ಅತಿಯಾದ ಅಭಿಮಾನವೇ ಅವರಿಗೆ ಮುಳುವಾಗುವ ಸೂಚನೆ ಸಿಗುತ್ತಿದೆ. ಒಬ್ಬ ಅಭಿಮಾನಿಯ ಅತಿಯಾದ ನಿರೀಕ್ಷೆ ಈ ಮಟ್ಟಕ್ಕೆ ಹೋದರೆ, ಮುಂದಿನ ದಿನಗಳಲ್ಲಿ ಉಳಿದ ಅಭಿಮಾನಿಗಳು ಕೂಡ ಇದೇ ರೀತಿ ಹಠ ಹಿಡಿದರೆ ಕಷ್ಟವಾಗಬಹುದು. ಸೆಲೆಬ್ರಿಟಿಗಳು ಎಲ್ಲರನ್ನೂ ಭೇಟಿ ಮಾಡುವುದು ಪ್ರಾಯೋಗಿಕವಾಗಿ ಕಷ್ಟಸಾಧ್ಯ. ಆದರೆ ಅಭಿಮಾನಿಗಳು ತಾವು ತೋರುವ ಪ್ರೀತಿಗೆ ಪ್ರತಿಯಾಗಿ ಅಷ್ಟೇ ಸ್ಪಂದನೆಯನ್ನು ನಿರೀಕ್ಷಿಸುತ್ತಾರೆ. ಅದು ಸಿಗದಿದ್ದಾಗ ಸೋಶಿಯಲ್ ಮೀಡಿಯಾದಲ್ಲಿ ಇಂತಹ ಅಪಪ್ರಚಾರಗಳು ಶುರುವಾಗುತ್ತವೆ.
ಒಟ್ಟಿನಲ್ಲಿ, ಗಿಲ್ಲಿ ಹೇಳಿದ ಮಾತನ್ನು ಉಳಿಸಿಕೊಳ್ಳುತ್ತಾರಾ ಅಥವಾ ಈ ವಿವಾದ ಇಲ್ಲಿಗೆ ತಣ್ಣಗಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಅಭಿಮಾನದ ಹೆಸರಿನಲ್ಲಿ ನಡೆಯುವ ಇಂತಹ ಒತ್ತಡಗಳು ಕಲಾವಿದರನ್ನು ಇಕ್ಕಟ್ಟಿಗೆ ಸಿಲುಕಿಸುವುದಂತೂ ಸುಳ್ಳಲ್ಲ.








