ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ದೊಡ್ಡ ಮಟ್ಟದ ನಿರಾಳತೆ ಸಿಕ್ಕಿದೆ. ಸೋಮವಾರದಿಂದ (ಫೆಬ್ರವರಿ 9) ಜಾರಿಗೆ ಬರಬೇಕಿದ್ದ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ. ಈ ತೀರ್ಮಾನದಿಂದ ಸಾವಿರಾರು ದೈನಂದಿನ ಪ್ರಯಾಣಿಕರಿಗೆ ಆರ್ಥಿಕ ಹೊರೆ ತಗ್ಗಿದಂತಾಗಿದೆ.
ದರ ಏರಿಕೆಯ ಕುರಿತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ಸಚಿವರನ್ನು ಭೇಟಿ ಮಾಡಿ, ದರ ನಿಗದಿ ಸಮಿತಿಯಲ್ಲಿರುವ ದೋಷಗಳು ಹಾಗೂ ಜನರ ಮೇಲೆ ಬೀರುವ ಪರಿಣಾಮಗಳನ್ನು ವಿವರವಾಗಿ ಮನವರಿಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಪ್ರಸ್ತಾವನೆಗೆ ತಾತ್ಕಾಲಿಕ ಬ್ರೇಕ್ ಹಾಕಿದೆ ಎನ್ನಲಾಗಿದೆ.
ನಮ್ಮ ಮೆಟ್ರೋ ಸಂಸ್ಥೆಯು ಶೇ. 5ರಷ್ಟು ದರ ಹೆಚ್ಚಳ ಮಾಡುವ ಉದ್ದೇಶ ಹೊಂದಿದ್ದು, ಇದರಿಂದ ಮಧ್ಯಮ ವರ್ಗ ಹಾಗೂ ಉದ್ಯೋಗಕ್ಕೆ ನಿತ್ಯ ಮೆಟ್ರೋ ಅವಲಂಬಿಸಿರುವ ಜನರಿಗೆ ಹೆಚ್ಚಿನ ಹೊರೆ ಬೀಳುವ ಆತಂಕವಿತ್ತು. ಇದೀಗ ಆ ಪ್ರಸ್ತಾವನೆ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕ ವಲಯದಲ್ಲಿ ಸಮಾಧಾನ ವ್ಯಕ್ತವಾಗಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಪ್ರಯಾಣಿಕರು ಸ್ವಾಗತ ವ್ಯಕ್ತಪಡಿಸಿದ್ದು, ದರ ನಿಗದಿಯಲ್ಲಿ ಪಾರದರ್ಶಕತೆ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂಬ ಬೇಡಿಕೆಯೂ ಜೋರಾಗಿದೆ. ಮುಂದಿನ ನಿರ್ಧಾರಗಳ ಕುರಿತು ಸರ್ಕಾರ ಯಾವ ರೀತಿಯಲ್ಲಿ ಮುಂದುವರೆಯಲಿದೆ ಎಂಬುದನ್ನು ಪ್ರಯಾಣಿಕರು ಕಾದು ನೋಡುತ್ತಿದ್ದಾರೆ.








