ಬೆಂಗಳೂರು: ರಾಜ್ಯದ ಬೊಕ್ಕಸ ಬರಿದಾಗಿದೆ ಎಂದು ಹೇಳುತ್ತಲೇ, ಮತ್ತೊಂದೆಡೆ ತಮ್ಮ ಆಪ್ತರು ಹಾಗೂ ಕಾರ್ಯಕರ್ತರಿಗೆ ಮಣೆ ಹಾಕಲು ರಾಜ್ಯ ಸರ್ಕಾರ ನೀರಿನಂತೆ ಹಣ ಖರ್ಚು ಮಾಡುತ್ತಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬ ಪರಿಸ್ಥಿತಿ ಸರ್ಕಾರದ್ದಾಗಿದೆ. ಅಭಿವೃದ್ಧಿಗೆ ಹಣವಿಲ್ಲದಿದ್ದರೂ ಸಿಕ್ಕ ಸಿಕ್ಕವರಿಗೆಲ್ಲ ನಿಗಮ ಮಂಡಳಿಗಳಲ್ಲಿ ಸಚಿವ ಸ್ಥಾನಮಾನ ನೀಡಿ, ಜನರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅವರು, ಸರ್ಕಾರದ ಆಡಳಿತ ವೈಖರಿ ಮತ್ತು ದುಂದು ವೆಚ್ಚದ ವಿರುದ್ಧ ಅಂಕಿಅಂಶಗಳ ಸಮೇತ ಹರಿಹಾಯ್ದಿದ್ದಾರೆ.
ಶಾಸಕರಿಗಿಂತ ಸಚಿವ ಸ್ಥಾನಮಾನದವರೇ ಹೆಚ್ಚು!
ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿರುವ ಶಾಸಕರ ಸಂಖ್ಯೆಗಿಂತ ಸಚಿವ ಸಂಪುಟ ದರ್ಜೆ ಹೊಂದಿರುವವರ ಸಂಖ್ಯೆಯೇ ಹೆಚ್ಚಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ಅಶೋಕ್ ಮುಂದಿಟ್ಟಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರ ಸಂಖ್ಯೆ 134 ಇದೆ. ಆದರೆ, ಸಂಪುಟ ದರ್ಜೆಯ ಸಚಿವರು ಹಾಗೂ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಸೇರಿದಂತೆ ಸಚಿವ ಸ್ಥಾನಮಾನ ಹೊಂದಿರುವವರ ಸಂಖ್ಯೆ ಬರೋಬ್ಬರಿ 149 ದಾಟಿದೆ. ಇದು ರಾಜ್ಯದ ಬೊಕ್ಕಸಕ್ಕೆ ಹೊರೆಯಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಅಭಿವೃದ್ಧಿ ಶೂನ್ಯ, ಆಡಂಬರಕ್ಕೆ ಮಿತಿ ಇಲ್ಲ
ರಾಜ್ಯದ ಪ್ರಮುಖ ಅಭಿವೃದ್ಧಿ ನಿಗಮಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ನಿಗಮಗಳು ಅನುದಾನವಿಲ್ಲದೆ ಸೊರಗುತ್ತಿವೆ. ಅಭಿವೃದ್ಧಿ ಕೆಲಸಗಳಿಗೆ ನಯಾ ಪೈಸೆ ಹಣ ಬಿಡುಗಡೆಯಾಗುತ್ತಿಲ್ಲ. ಆದರೆ, ಈ ನಿಗಮಗಳಿಗೆ ನೇಮಕಗೊಂಡಿರುವ ಅಧ್ಯಕ್ಷರಿಗೆ ಮಾತ್ರ ಐಷಾರಾಮಿ ಸೌಲಭ್ಯಗಳಿಗೆ ಕೊರತೆಯಿಲ್ಲ. ಅಧ್ಯಕ್ಷರಿಗೆ ಓಡಾಡಲು ಗೂಟದ ಕಾರು, ಅವರ ಸಿಬ್ಬಂದಿಗೆ ಸಂಬಳ, ಸಾರಿಗೆ ಭತ್ಯೆ ಕೊಡುವುದರಲ್ಲೇ ಜನರ ತೆರಿಗೆ ಹಣ ಪೋಲಾಗುತ್ತಿದೆ. ಇದನ್ನೇ ಸಾಧನೆ ಎಂದುಕೊಂಡಂತಿದೆ ಎಂದು ಅವರು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಕುರ್ಚಿ ಉಳಿಸಿಕೊಳ್ಳಲು ಖಜಾನೆ ಲೂಟಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ನೇರ ವಾಗ್ದಾಳಿ ನಡೆಸಿರುವ ಅಶೋಕ್, ರಾಜ್ಯ ಕಂಡ ಅತ್ಯಂತ ದುರ್ಬಲ ಮತ್ತು ಅಸಮರ್ಥ ಮುಖ್ಯಮಂತ್ರಿ ಇವರಾಗಿದ್ದಾರೆ. ಕೇವಲ ತಮ್ಮ ಕುರ್ಚಿ ಉಳಿಸಿಕೊಳ್ಳುವ ಏಕೈಕ ಉದ್ದೇಶದಿಂದ, ಅಸಮಾಧಾನಿತರಿಗೆ ಮತ್ತು ಬೇಕಾದವರಿಗೆಲ್ಲಾ ಸಚಿವ ಸ್ಥಾನಮಾನ ನೀಡುತ್ತಿದ್ದಾರೆ. ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಅಧಿಕಾರ ನಡೆಸುತ್ತಾ, ಅನಗತ್ಯ ಹುದ್ದೆಗಳನ್ನು ಸೃಷ್ಟಿಸಿ ರಾಜ್ಯದ ಖಜಾನೆಯನ್ನು ಲೂಟಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜೀನಾಮೆಗೆ ಆಗ್ರಹ
ಸಿದ್ದರಾಮಯ್ಯನವರೇ, ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ರಾಜ್ಯದ ಅಭಿವೃದ್ಧಿ ಕಡೆಗಣಿಸಿ ಕೇವಲ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದೀರಿ. ನಿಮಗೆ ಸಮರ್ಥವಾಗಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ತಕ್ಷಣವೇ ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದು ಆರ್ ಅಶೋಕ್ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.








