ಡಾ.ಎಂ.ಸಿ. ಸುಧಾಕರ್.
ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರು.
ಡಾ. ಎಂ. ಸುಧಾಕರ್. ಹೆಸರಿಗೆ ತಕ್ಕಂತೆ ಇವರ ನಡೆತೆ, ಸ್ವಭಾವ, ಪ್ರವೃತ್ತಿ, ಮನೋಭಾವನೆ, ದೂರದೃಷ್ಟಿ, ಹವ್ಯಾಸ ಹೀಗೆ ಹೆಸರಿನಲ್ಲೇ ಇವರ ವ್ಯಕ್ತಿತ್ವದ ಸಮಗ್ರ ದರ್ಶನವಾಗುತ್ತದೆ.
ಸುಧಾಕರ ಅಂದ್ರೆ ಚಂದ್ರನ ಹೆಸರು. ಸುಧಾ ಅಂದ್ರೆ ಅಮೃತ. ಕರ ಅಂದ್ರೆ ಹೊತ್ತವನು. ಪುರಾಣಗಳ ಪ್ರಕಾರ ಚಂದ್ರ ಅಮೃತದ ಗಣಿ. ತನ್ನ ಕಿರಣಗಳ ಮೂಲಕ ಅಮೃತವನ್ನು ಭೂಮಿಗೆ ಉಣಬಡಿಸುತ್ತಾನೆ ಎಂಬ ಕಾರಣಕ್ಕೆ ಚಂದ್ರನಿಗೆ ಸುಧಾಕರ ಎಂಬ ಹೆಸರು ಬಂದಿದೆ.
ಅದೇ ರೀತಿ ಚಿಂತಾಮಣಿಯ ಮಣ್ಣಿನ ಮಗ ಡಾ. ಎಂ.ಸಿ. ಸುಧಾಕರ್ ಕೂಡ ಹಾಗೆನೇ. ಚಂದ್ರನಂತೆ ಬೆಳಕು ನೀಡುವ ಸೌಮ್ಯ ಸ್ವಭಾವದ ವ್ಯಕ್ತಿ. ಕುಟಂಬದ ಪರಂಪರೆಯನ್ನು ಕಪ್ಪು ಚುಕ್ಕೆ ಇಲ್ಲದೆ ಮುಂದುವರಿಸಿಕೊಂಡು ಬಂದಿರುವ ಡಾ. ಎಂ.ಸಿ. ಸುಧಾಕರ್ ಶಾಂತ ಸ್ವರೂಪಿ. ಗದ್ದಲ, ಜಗಳ, ಸಂಘರ್ಷ ಏನೇ ಇರಲಿ.. ಬರೀ ಮಾತುಕತೆಯಲ್ಲಿ ಬಗೆಹರಿಸುವ ನಿಪುಣ ಹಾಗೂ ಅಷ್ಟೇ ಬುದ್ದಿವಂತರು ಕೂಡ ಹೌದು.
ಶಿಕ್ಷಣ, ಕಲೆ, ಸಾಹಿತ್ಯ, ಕ್ರೀಡೆಗಳ ಮೇಲೆ ಹೆಚ್ಚಿನ ವ್ಯಾಮೋಹ ಹೊಂದಿರುವ ಡಾ. ಎಂ.ಸಿ. ಸುಧಾಕರ್ ಅವರು ಸೃಜನಾತ್ಮಕ ಕಾರ್ಯಗಳಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಳ್ಳುತ್ತಿದ್ದಾರೆ. ಹೊಸತನ ಹಾಗೂ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿರುವ ಇವರಿಗೆ ಜ್ಞಾನದ ಹಸಿವಿದೆ. ಯಾವುದೇ ವಿಷ್ಯವಾದ್ರೂ ಅದನ್ನು ಅಳವಾಗಿ ಕಲಿಯುವ ಗುಣವಿದೆ. ಹೀಗಾಗಿಯೇ ಸಮಾಜದಲ್ಲಿ ತನ್ನನ್ನು ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.
ಅಂದ ಹಾಗೇ, ಡಾ.ಎಂ.ಸಿ. ಸುಧಾಕರ್ ಓದಿದ್ದು ದಂತ ವೈದ್ಯಕೀಯ. ಹಾಗಾಗಿಯೇ ದಂತ ವೈದ್ಯರಾಗಿ, ಉಪನ್ಯಾಸಕರಾಗಿ ಸೇವೆ ಕೂಡ ಸಲ್ಲಿಸಿದ್ದಾರೆ. ಅಲ್ಲದೆ ಭಾರತೀಯ ಡೆಂಟಲ್ ಅಸೋಷಿಯೇಷನ್‍ನ ಕರ್ನಾಟಕ ವಿಭಾಗದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
2004ರಿಂದ ಸಕ್ರೀಯ ಡಾ. ಎಂ.ಸಿ. ಸುಧಾಕರ್ ಅವರು ರಾಜಕೀಯಕ್ಕೆ ಧುಮುಕಿದ್ರು. ಅಷ್ಟಕ್ಕೂ ರಾಜಕಾರಣ ಅನ್ನೋದು ಇವ್ರಿಗೆ ರಕ್ತಗತವಾಗಿ ಬಂದಿರುವ ಬಳುವಳಿ. ಚಿಂತಾಮಣಿಯ ಪ್ರತಿಷ್ಠಿತ ಕುಟುಂಬದ ಕುಡಿ. ರಾಜ್ಯ ರಾಜಕಾರಣದಲ್ಲಿ ಎಂ.ಸಿ. ಸುಧಾಕರ್ ಅವರದ್ದು ನಾಲ್ಕನೇ ತಲೆಮಾರು. ಶತಮಾನಗಳ ಹಿಂದೆ ಸುಧಾಕರ್ ಅವರ ಮುತ್ತಜ್ಜ ಪಟೇಲ್ ಚೌಡರೆಡ್ಡಿ ಮೈಸೂರು ಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು. ನಂತರ ಅವರ ಅಜ್ಜ ಎಂ.ಸಿ. ಅಂಜನೇಯ ರೆಡ್ಡಿ ಚಿಂತಾಮಣಿಯ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗೇ ಇವರ ತಂದೆ ಚೌಡರೆಡ್ಡಿ 1969ರಿಂದ 2002ರವರೆಗೆ ಚಿಂತಾಮಣಿಯ ಶಾಸಕರಾಗಿದ್ದರು. ಅಲ್ಲದೆ ವೀರಪ್ಪ ಮೊಯ್ಲಿಯವರ ಸಂಪುಟದಲ್ಲಿ ನಗರಾಭಿವೃದ್ದಿ ಮತ್ತು ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ರು.
ಬಳಿಕ ಎಂ.ಸಿ. ಸುಧಾಕರ್ 2004, 2008ರಲ್ಲಿ ಚಿಂತಾಮಣಿಯ ಶಾಸಕರಾಗಿ ಆಯ್ಕೆಯಾಗಿದ್ದರು. ಇದೀಗ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಾ.ಸುಧಾಕರ್ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ.ಎಂ.ಸಿ. ಸುಧಾಕರ್ ಪ್ರವೃತ್ತಿಯಲ್ಲಿ ರಾಜಕಾರಣಿಯಾಗಿ ಜನಮನ್ನಣೆಯನ್ನು ಪಡೆದುಕೊಂಡಿದ್ದಾರೆ.
ಉನ್ನತ ಶಿಕ್ಷಣ ಸಚಿವರಾಗಿ ಡಾ.ಎಂ.ಸಿ. ಸುಧಾಕರ್ ಅವರು ಚಿಂತಾಮಣಿ ವಿಧಾನ ಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಶ್ರಮಪಡುತ್ತಿದ್ದಾರೆ. ತನ್ನ ಕ್ಷೇತ್ರದಲ್ಲಿ ವೈದ್ಯಕೀಯ ಕಾಲೇಜು, ಕೈಗಾರಿಕೆ, ಶಿಕ್ಷಣ, ಕ್ರೀಡೆ ಹೀಗೆ ಪ್ರತಿಯೊಂದು ಕ್ಷೇತ್ರಗಳಲ್ಲೂ ಸಾಕಷ್ಟು ಸುಧಾರಣೆ, ಅಭಿವೃದ್ದಿಯನ್ನು ಮಾಡುತ್ತಿದ್ದಾರೆ. ಅದೇ ರೀತಿ ರಾಜ್ಯ ಶಿಕ್ಷಣ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಯನ್ನು ತರಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ.
ಈಗಾಗಲೇ ಚಿಂತಾಮಣಿಯಲ್ಲಿ ಅತ್ಯಾಧುನಿಕ ಮಾದರಿಯ ಸ್ಕೇಟಿಂಗ್ ಅಂಗಣ, ಕ್ರಿಕೆಟ್ ಮೈದಾನವನ್ನು ಮೇಲ್ದರ್ಜೆಗೇರಿಸಿದ್ದು , ಕೈಗಾರಿಕಾ ವಲಯ ಸ್ಥಾಪನೆ, ಶಿಕ್ಷಣ, ಕಲೆ, ಸಾಹಿತ್ಯ ಹೀಗೆ ಪ್ರತಿಯೊಂದು ರಂಗವನ್ನು ಮುನ್ನಲೆಗೆ ತರಬೇಕು ಅನ್ನೋ ಧ್ಯೇಯವನ್ನು ಹೊಂದಿದ್ದಾರೆ.
ಡಾ.ಎಂ.ಸಿ. ಸುಧಾಕರ್ ಅಂದ್ರೆ ಶಿಸ್ತಿಗೆ ಮತ್ತೊಂದು ಹೆಸರು. ಅಂದುಕೊಂಡಿರುವುದನ್ನು ಸಾಧಿಸಲೇಬೇಕು ಅನ್ನೋ ಛಲ ಅವರಲ್ಲಿದೆ. ಸದಾ ಹಸನ್ಮುಖಿಯಾಗಿರುವ ಸುಧಾಕರ್ ಅವರು, ಎಲ್ಲರೊಂದಿಗೆ ಬೆರೆಯುವ ಗುಣವನ್ನು ಹೊಂದಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುವ ಡಾ.ಎಂ.ಸಿ. ಸುಧಾಕರ್ ತನ್ನ ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿದ್ದಾರೆ. ಜನರ ಪ್ರೀತಿ, ಗೌರವವನ್ನು ಪಡೆದುಕೊಂಡಿದ್ದಾರೆ.
ಸತತ ಅಭ್ಯಾಸ.. ಹೊಸತನಗಳ ಪ್ರಯೋಗ.. ಪ್ರವಾಸ, ಕೃಷಿ, ಕ್ರೀಡೆಗಳ ಬಗ್ಗೆ ಅಪಾರವಾದ ಒಲವು, ಆಸಕ್ತಿಗಳನ್ನು ಡಾ. ಎಂ.ಸಿ. ಸುಧಾಕರ್ ಹೊಂದಿದ್ದಾರೆ. ಕೃಷಿಯಲ್ಲಿ ವಿಭಿನ್ನ ಪ್ರಯೋಗ ಮಾಡಿ ಯಶಸ್ವಿ ರೈತನಾಗಿಯೂ ಗಮನ ಸೆಳೆದಿದ್ದಾರೆ. ಹಾಗೇ ವಿದೇಶಿ ಪ್ರವಾಸ ಮಾಡಿಕೊಂಡು, ಅಲ್ಲಿನ ಸೌಲಭ್ಯ, ಸವಲತ್ತುಗಳು, ತಂತ್ರಜ್ಞಾನಗಳನ್ನು ಅರಿತುಕೊಂಡು ಜ್ಞಾನವನ್ನು ವೃದ್ದಿಸಿಕೊಳ್ಳಬೇಕು ಎಂಬ ಹಪಹಪಿ ಅವರಲ್ಲಿದೆ. ಅಧ್ಯಯನ, ಪ್ರಯೋಗ, ಜ್ಞಾನ, ಹೊಸತನಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
ಇನ್ನು ರಾಜಕಾರಣದಲ್ಲಿ ಎಷ್ಟೇ ಒತ್ತಡ, ಕೆಲಸ ಇರಲಿ.. ಶಿಸ್ತು ಅನ್ನೋದನ್ನು ಮರೆಯುವುದಿಲ್ಲ. ಮಾನಸಿಕ ಒತ್ತಡ ನಿಭಾಯಿಸಲು ಅವರು ಆಯ್ಕೆ ಮಾಡಿಕೊಂಡಿರುವುದು ಬ್ಯಾಡ್ಮಿಂಟನ್ ಆಟವನ್ನು. ಪ್ರತಿ ದಿನ ಬ್ಯಾಡ್ಮಿಂಟನ್ ಆಟ ಆಡೋದು ಅವರ ದಿನಚರಿಯ ಭಾಗವಾಗಿದೆ. ಸರಿಯಾದ ಸಮಯ.. ನಿಗದಿತವಾಗಿ ಆಡೋದು ಅವರ ದೈನಂದಿನ ಚಟುವಟಿಕೆಯಾಗಿದೆ. ಫಿಟ್‍ನೆಸ್ ಕಡೆಗೆ ಹೆಚ್ಚು ಆದ್ಯತೆ ನೀಡುವ ಡಾ. ಎಂ.ಸಿ. ಸುಧಾಕರ್ ಅವರು ಫಿಟ್ ಆಂಡ್ ಫೈನ್ ಆಗಿದ್ದಾರೆ.
ಇದೀಗ 2026ರ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲೂ ಆಡುತ್ತಿದ್ದಾರೆ. ಪ್ರತಿ ದಿನ ಅಭ್ಯಾಸ.. ಅವರ ಶಿಸ್ತು ಪಾಲನೆಯನ್ನು ನೋಡಿದಾಗ ಅಚ್ಚರಿಯೂ ಆಗುತ್ತದೆ. ಇಷ್ಟೆಲ್ಲಾ ಒತ್ತಡಗಳ ನಡುವೆಯೂ ಆಟದ ಮೇಲಿನ ಪ್ರೀತಿ, ವಿದೇಶಿ ನೆಲದಲ್ಲಿ ಇರುವಂತಹ ಸೌಲಭ್ಯಗಳು ನಮ್ಮಲ್ಲೂ ಇರಬೇಕು ಅನ್ನೋ ಕಾಳಜಿ, ದೂರದೃಷ್ಟಿಯ ಯೋಚನೆ.. ಅಭಿವೃದ್ದಿ ಪರವಾಗಿರುವ ಯೋಜನೆಗಳು, ಕ್ಷೇತ್ರದ ಜನರ ಬಗ್ಗೆ ಇರೋ ಪ್ರೀತಿ, ವಿಶ್ವಾಸವನ್ನು ಗಮನಿಸಿದಾಗ ಇವರಿಗೆ ಡಾ.ಎಂ.ಸಿ. ಸುಧಾಕರ್ ಎಂಬ ಹೆಸರಿಟ್ಟಿದ್ದು ಸಾರ್ಥಕವಾಗಿದೆ ಎಂದು ಅನ್ನಿಸಿದೆ








