ನಕಲಿ ಉತ್ಪನ್ನಗಳ ಹಾವಳಿಗೆ ಕಡಿವಾಣ ಹಾಕಲು ಕರ್ನಾಟಕ ಹಾಲು ಮಹಾಸಂಘ (KMF) ಮಹತ್ವದ ಕ್ರಮಕ್ಕೆ ಮುಂದಾಗಿದೆ. ನಂದಿನಿ ಬ್ರಾಂಡ್ ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ QR ಕೋಡ್ ಅಳವಡಿಸುವ ಮೂಲಕ ಅಸಲಿ–ನಕಲಿ ಉತ್ಪನ್ನಗಳನ್ನು ಗುರುತಿಸಲು ಅವಕಾಶ ಕಲ್ಪಿಸಲಾಗುತ್ತಿದೆ.
ಗ್ರಾಹಕರು ನಂದಿನಿ ತುಪ್ಪ ಸೇರಿದಂತೆ ವಿವಿಧ ಉತ್ಪನ್ನಗಳ ಪ್ಯಾಕೆಟ್‌ನ ಮೇಲೆ ಇರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ, ನೀಡಲಾದ ಸಂಖ್ಯೆಯನ್ನು ನಮೂದಿಸಿದರೆ OTP ದೊರೆಯುತ್ತದೆ. ಅದನ್ನು ಎಂಟರ್ ಮಾಡಿದ ಕೂಡಲೇ ಆ ಉತ್ಪನ್ನದ ಸಂಪೂರ್ಣ ವಿವರಗಳು ಮೊಬೈಲ್‌ನಲ್ಲಿ ಲಭ್ಯವಾಗುತ್ತವೆ. ಇದರಿಂದ ಉತ್ಪನ್ನದ ಅಸಲಿಯತ್ತನ್ನು ತಕ್ಷಣ ಪರಿಶೀಲಿಸಬಹುದು.
ಈ ಕ್ರಮದಿಂದ ನಂದಿನಿ ಬ್ರ್ಯಾಂಡ್ ವಿಶ್ವಾಸಾರ್ಹತೆಯನ್ನು ಕಾಪಾಡುವುದರ ಜೊತೆಗೆ ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ನಕಲಿ ಉತ್ಪನ್ನಗಳಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು KMF ವಿಶ್ವಾಸ ವ್ಯಕ್ತಪಡಿಸಿದೆ.
ಗ್ರಾಹಕರ ಸುರಕ್ಷತೆ ಮತ್ತು ಗುಣಮಟ್ಟದ ಭರವಸೆ ನೀಡುವ ಉದ್ದೇಶದಿಂದ ಈ ತಂತ್ರಜ್ಞಾನಾಧಾರಿತ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.








