ಹುಬ್ಬಳ್ಳಿ: ದೇಶದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆಯನ್ನು ಮೂಲೆಗುಂಪು ಮಾಡಿ, ಖಾಸಗಿ ಉದ್ಯಮಿ ಅಂಬಾನಿಯವರ ಜಿಯೋ ಸಂಸ್ಥೆಗೆ ಅತೀ ಹೆಚ್ಚು ಲಾಭ ಮಾಡಿಕೊಡಲಾಗಿದೆ ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ನೀತಿ ಮತ್ತು ಕಾರ್ಪೊರೇಟ್ ಪರವಲವುಗಳನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಅಂಬಾನಿ ಮತ್ತು ಅದಾನಿ ಪರ ಆಡಳಿತವೇಕೆ
ಕೇಂದ್ರ ಸರ್ಕಾರವು ದೇಶದ ಹಿತಾಸಕ್ತಿಗಿಂತ ಉದ್ಯಮಿಗಳ ಹಿತಾಸಕ್ತಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಲಾಡ್ ಆರೋಪಿಸಿದರು. ಅಂಬಾನಿಯವರ ಕಂಪನಿಗೆ ಸುಮಾರು 1 ಲಕ್ಷ ಕೋಟಿ ರೂಪಾಯಿ ಲಾಭ ಮಾಡಿಕೊಡಲಾಗಿದೆ. ಆದರೆ, ಅಂಬಾನಿಯವರು ದೇಶಕ್ಕೆ ಏನು ಮಹತ್ತರ ಕೊಡುಗೆ ನೀಡಿದ್ದಾರೆ? ಎಂದು ಪ್ರಶ್ನಿಸಿದರು. 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಬಿಎಸ್ಎನ್ಎಲ್ (BSNL) ಸಂಸ್ಥೆಯು ದೇಶದ ಟೆಲಿಕಾಂ ವಲಯದಲ್ಲಿ ಅಗ್ರಸ್ಥಾನದಲ್ಲಿತ್ತು ಮತ್ತು ಸುಮಾರು 35,000 ಟವರ್ಗಳನ್ನು ಹೊಂದಿತ್ತು. ಆದರೆ ಜಿಯೋ ಮಾರುಕಟ್ಟೆಗೆ ಬಂದ ನಂತರ ಬಿಎಸ್ಎನ್ಎಲ್ ಪರಿಸ್ಥಿತಿ ಏನಾಗಿದೆ? ಆ 35 ಸಾವಿರ ಟವರ್ಗಳನ್ನು ಅಂಬಾನಿಯವರಿಗೆ ಧಾರೆ ಎರೆಯಲಾಗಿದೆ. ಲಾಭದಾಯಕವಾಗಿದ್ದ ಬಿಎಸ್ಎನ್ಎಲ್ ಸಂಸ್ಥೆಯನ್ನು ವ್ಯವಸ್ಥಿತವಾಗಿ ಮುಗಿಸಿ, ಜಿಯೋವನ್ನು ಮೊದಲ ಸ್ಥಾನಕ್ಕೆ ತಂದವರು ಯಾರು? ಇದಕ್ಕೆ ಯಾರು ಉತ್ತರ ಕೊಡುತ್ತಾರೆ ಎಂದು ನೇರವಾಗಿ ಪ್ರಶ್ನಿಸಿದರು.
ಫೋಟೋ ಪ್ರಚಾರದಿಂದ ದೇಶಕ್ಕೆ ಏನು ಲಾಭ
ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯ ಬಗ್ಗೆಯೂ ಲಾಡ್ ವ್ಯಂಗ್ಯವಾಡಿದರು. ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಕರೆತಂದು ಫೋಟೋ ತೆಗೆಸಿಕೊಂಡಾಕ್ಷಣ ದೇಶಕ್ಕೆ ಏನು ಲಾಭ ಬಂತು? ಇರಾನ್ ನಿಂದ ತೈಲ ಖರೀದಿಸಬಾರದು, ರಷ್ಯಾದಿಂದ ಆಯಿಲ್ ತರಬಾರದು ಎಂದು ಹೇಳುತ್ತೀರಿ. ಕೇವಲ ಬಾಯಿ ಮಾತಲ್ಲಿ ದೇಶ ಮುಖ್ಯ ಎಂದು ಹೇಳಿದರೆ ಸಾಲದು. ಬೆಳಗ್ಗೆ ಎದ್ದ ತಕ್ಷಣ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿ ಓಡಾಡಿದರೆ ದೇಶದ ಅಭಿವೃದ್ಧಿ ಆಗುವುದಿಲ್ಲ. ವಾಸ್ತವದಲ್ಲಿ ದೇಶದ ಆರ್ಥಿಕತೆಗೆ ಮತ್ತು ಜನಸಾಮಾನ್ಯರಿಗೆ ಏನು ಲಾಭವಾಗಿದೆ ಎಂಬುದನ್ನು ತೋರಿಸಿ ಎಂದು ಕಿಡಿಕಾರಿದರು.
ಬಿಜೆಪಿಯವರ ರೆಸಾರ್ಟ್ ರಾಜಕಾರಣ ಮರೆತಿದ್ದಾರಾ
ರಾಜ್ಯದ ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸಕ್ಕೆ ತೆರಳಿರುವ ಬಗ್ಗೆ ಬಿಜೆಪಿ ನಾಯಕರು ಮಾಡುತ್ತಿರುವ ಟೀಕೆಗಳಿಗೆ ಸಚಿವ ಲಾಡ್ ತಿರುಗೇಟು ನೀಡಿದರು. ನಮ್ಮ ಹತ್ತಿಪ್ಪತ್ತು ಶಾಸಕರು ವಿದೇಶಕ್ಕೆ ಹೋಗಿದ್ದಾರೆ, ಅಲ್ಲಿಗೆ ಹೋಗಿ ಅವರು ರಾಜಕಾರಣ ಮಾಡಲು ಸಾಧ್ಯವೇ? ಅಥವಾ ಅಲ್ಲಿನ ಚುನಾವಣೆಯಲ್ಲಿ ಮತ ಹಾಕಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಶಾಸಕರು ವೈಯಕ್ತಿಕವಾಗಿ ಹೋಗಿದ್ದಾರೋ ಅಥವಾ ಇನ್ಯಾವುದೇ ಕಾರಣಕ್ಕೆ ಹೋಗಿದ್ದಾರೋ ಎಂಬ ಮಾಹಿತಿ ನನಗಿಲ್ಲ. ಆದರೆ, ಬಿಜೆಪಿಗರು ಅಧಿಕಾರದಲ್ಲಿದ್ದಾಗ ಅವರ ಶಾಸಕರು ಎಲ್ಲೆಲ್ಲಿ ಹೋಗಿದ್ದರು, ಯಾವ ರೆಸಾರ್ಟ್ ಗಳಲ್ಲಿ ತಂಗಿದ್ದರು, ಅವರ ಪ್ರವಾಸಗಳು ಹೇಗಿದ್ದವು ಎಂಬುದರ ಬಗ್ಗೆ ನಾವೂ ಪಟ್ಟಿ ಬಿಡುಗಡೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ವಿದೇಶಕ್ಕೆ ಹೋಗಿ ರಾಜ್ಯದ ರಾಜಕಾರಣ ಮಾಡಲು ಬರುವುದಿಲ್ಲ ಎಂಬ ಸಾಮಾನ್ಯ ಜ್ಞಾನ ಟೀಕಿಸುವವರಿಗೆ ಇರಬೇಕು ಎಂದು ಅವರು ಹೇಳಿದರು.







