ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವನ್ನು ಕಮಿಷನ್ ಚೋರ್ ಸರ್ಕಾರ ಮತ್ತು ಅವರ ಸಂಪುಟದ ಸಚಿವರನ್ನು ಕಾಮ್ ಚೋರ್ ಮಂತ್ರಿಗಳು ಎಂದು ಗಂಭೀರವಾಗಿ ಜರಿದಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡುವ ಮೂಲಕ ಸರ್ಕಾರದ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ಅವರು, ರಾಜ್ಯದ ಬಡವರು ಮತ್ತು ಕಾರ್ಮಿಕರ ಹಿತಾಸಕ್ತಿಯನ್ನು ಕಡೆಗಣಿಸಿ, ಕೇವಲ ಲೂಟಿ ಹೊಡೆಯುವುದರಲ್ಲೇ ಮಂತ್ರಿಗಳು ಮಗ್ನರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಗ್ಯ ಇಲಾಖೆಯಲ್ಲಿನ ಅವ್ಯವಸ್ಥೆ ಬಗ್ಗೆ ಆಕ್ರೋಶ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿರುವ ಅಶೋಕ್, ಹಣಕಾಸು ಇಲಾಖೆಯಿಂದ ಬರೋಬ್ಬರಿ 880 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದರೂ, ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ಔಷಧಿಯನ್ನು ಖರೀದಿ ಮಾಡಿಲ್ಲ. ಅಷ್ಟೇ ಅಲ್ಲದೆ, ಸ್ಕ್ಯಾನಿಂಗ್ ಸೇವೆ ಒದಗಿಸುವ ಕಂಪನಿಗಳಿಗೆ 143 ಕೋಟಿ ರೂಪಾಯಿ ಬಾಕಿ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಳ್ಳಲಾಗಿದೆ. ಸರ್ಕಾರದ ಈ ನಿರ್ಲಕ್ಷ್ಯದಿಂದಾಗಿ ಬಡ ರೋಗಿಗಳು ಮತ್ತು ಸಾರ್ವಜನಿಕರು ಆಸ್ಪತ್ರೆಗಳಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದಾರೆ.
ಕಾರ್ಮಿಕರ ಹಣ ಲೂಟಿ ಹೊಡೆಯುವ ಸಂಚು
ಮತ್ತೊಂದು ಕಡೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ವಿರುದ್ಧವೂ ಹರಿಹಾಯ್ದಿರುವ ಪ್ರತಿಪಕ್ಷ ನಾಯಕರು, ಇಎಸ್ಐ ಆಸ್ಪತ್ರೆಗಳಿಗೆ ಔಷಧಿ ಪೂರೈಕೆ ಮಾಡಿದ ಕಂಪನಿಗಳಿಗೆ ಸರ್ಕಾರ 60 ಕೋಟಿ ರೂಪಾಯಿ ಬಿಲ್ ಪಾವತಿ ಮಾಡದೆ ಸತಾಯಿಸುತ್ತಿದೆ. ಇದರ ನಡುವೆಯೂ ರೇಟ್ ಕಾರ್ಡ್ ಆಧಾರದಲ್ಲಿ ಔಷಧಿ ಮತ್ತು ಉಪಕರಣಗಳನ್ನು ಖರೀದಿಸುವ ಮೂಲಕ ಕಾರ್ಮಿಕರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಲು ಸರ್ಕಾರ ಮುಂದಾಗಿದೆ ಎಂದು ನೇರ ಆರೋಪ ಮಾಡಿದ್ದಾರೆ.
ಭಂಡ ಬಾಳು ಸಾಕು, ರಾಜೀನಾಮೆ ಕೊಟ್ಟು ತೊಲಗಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೇರವಾಗಿ ಪ್ರಶ್ನಿಸಿರುವ ಅಶೋಕ್, ಬಹುತೇಕ ಎಲ್ಲ ಇಲಾಖೆಗಳಲ್ಲಿ ಹಿಂದಿನ ವರ್ಷಗಳ ಸಾವಿರಾರು ಕೋಟಿ ರೂಪಾಯಿ ಬಿಲ್ ಪಾವತಿ ಬಾಕಿ ಉಳಿದಿದೆ. ಹೀಗಿರುವಾಗ ಈಗ ಮತ್ತೊಂದು ಬಜೆಟ್ ಮಂಡನೆ ಮಾಡಿ ಏನು ಸಾಧಿಸಲು ಹೊರಟಿದ್ದೀರಿ? ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು ನಡೆಸುತ್ತೀರಿ? ತಕ್ಷಣವೇ ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದು ಆಗ್ರಹಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ವಿರುದ್ಧ ವ್ಯಂಗ್ಯ
ಇದೇ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧವೂ ಅಶೋಕ್ ವ್ಯಂಗ್ಯವಾಡಿದ್ದಾರೆ. ತಮ್ಮ ತವರು ಜಿಲ್ಲೆಯ ಜನರಿಗೆ ಕುಡಿಯುವ ನೀರು ಕೊಡಲು ಯೋಗ್ಯತೆ ಇಲ್ಲದವರು, ಕರಾವಳಿ ಭಾಗದಲ್ಲಿ ಐಟಿ ಕಂಪನಿಗಳ ಹೂಡಿಕೆ ಬಗ್ಗೆ ಮಾತನಾಡುತ್ತಿರುವುದು ಈ ಶತಮಾನದ ಅತ್ಯಂತ ದೊಡ್ಡ ವಿಪರ್ಯಾಸವಾಗಿದೆ. ಕಲ್ಯಾಣ ಕರ್ನಾಟಕದ ಭಾಗಕ್ಕೆ ಅಂಟಿಕೊಂಡಿರುವ ಅಧಿಕಾರದಾಹಿ ದೆವ್ವಗಳು ಅಲ್ಲಿಂದ ತೊಲಗುವವರೆಗೂ ಆ ಭಾಗದ ದುಸ್ಥಿತಿಗೆ ಮುಕ್ತಿ ಸಿಗುವುದಿಲ್ಲ ಎಂದು ಅವರು ತೀಕ್ಷ್ಣವಾಗಿ ಟೀಕಿಸಿದ್ದಾರೆ.








