ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ವ್ಯವಸ್ಥೆಯೊಳಗೆ ಭ್ರಷ್ಟಾಚಾರ ಹಿಂದಿಗಿಂತಲೂ ಈಗ ವ್ಯಾಪಕವಾಗಿ ಹಬ್ಬಿದೆ. ವರ್ಗಾವಣೆಗಾಗಿ ಮಧ್ಯವರ್ತಿಗಳು ಮತ್ತು ಏಜೆಂಟರ ಹಾವಳಿ ಮಿತಿಮೀರಿದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸ್ಫೋಟಕ ಹೇಳಿಕೆ ನೀಡುವ ಮೂಲಕ ಆಡಳಿತ ವ್ಯವಸ್ಥೆಯ ನೈಜ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಅಭಯ ಹಸ್ತ ಕಾರ್ಯಕ್ರಮದಲ್ಲಿ, ನೇಮಕಾತಿ ಆದೇಶ ವಿತರಿಸಿ ಮಾತನಾಡಿದ ಅವರು, ಪ್ರಸ್ತುತ ವ್ಯವಸ್ಥೆಯಲ್ಲಿ ಬೇರೂರಿರುವ ಲಂಚಗುಳಿತನ ಮತ್ತು ವರ್ಗಾವಣೆ ದಂಧೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
ವರ್ಗಾವಣೆಗೆ ಏಜೆಂಟರ ಹಾವಳಿ
ನನ್ನ 40 ವರ್ಷಗಳ ದೀರ್ಘಕಾಲದ ರಾಜಕೀಯ ಜೀವನದಲ್ಲಿ ಶಾಸಕನಾಗಿ, ಸಚಿವನಾಗಿ ಹಾಗೂ ಮುಖ್ಯಮಂತ್ರಿಯಾಗಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಆದರೆ, ಹಿಂದೆಂದೂ ಈ ಮಟ್ಟದ ಭ್ರಷ್ಟಾಚಾರ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಇದು ವಿಪರೀತವಾಗಿದೆ. ಸರ್ಕಾರಿ ನೌಕರರು ತಮಗೆ ಬೇಕಾದ ಜಾಗಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲು ಏಜೆಂಟರನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರು ಅಧಿಕಾರದಲ್ಲಿರುವವರಿಗೆ ಹತ್ತಿರವಿದ್ದಾರೆ ಎಂಬುದನ್ನು ಶೋಧಿಸಿ, ಅವರ ಮೂಲಕ ಪ್ರಭಾವ ಬೀರಿ, ಹಣ ನೀಡಿ ಕೆಲಸ ಮಾಡಿಸಿಕೊಳ್ಳುವ ಸಂಸ್ಕೃತಿ ಬೆಳೆದಿದೆ ಎಂದು ಮುಖ್ಯಮಂತ್ರಿಗಳು ವಿಷಾದ ವ್ಯಕ್ತಪಡಿಸಿದರು.
ಕೌನ್ಸಿಲಿಂಗ್ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ
ಈ ಅನಿಷ್ಟ ಪದ್ಧತಿಗೆ ಅಂತ್ಯ ಹಾಡಲೇಬೇಕು ಎನ್ನುವ ದೃಢ ನಿರ್ಧಾರದಿಂದ ನಮ್ಮ ಸರ್ಕಾರ ನೇಮಕಾತಿ ಮತ್ತು ವರ್ಗಾವಣೆ ಪ್ರಕ್ರಿಯೆಯಲ್ಲಿ ಕೌನ್ಸಿಲಿಂಗ್ ಪದ್ಧತಿಯನ್ನು ಕಡ್ಡಾಯಗೊಳಿಸಿದೆ. ಆರೋಗ್ಯ ಇಲಾಖೆಯಲ್ಲಿ ವೈದ್ಯರು ಸೇರಿದಂತೆ ಸುಮಾರು 5700 ಹುದ್ದೆಗಳಿಗೆ ಪಾರದರ್ಶಕವಾಗಿ ಕೌನ್ಸಿಲಿಂಗ್ ಮೂಲಕವೇ ಸ್ಥಳ ನಿಯೋಜನೆ ಮಾಡಲಾಗಿದೆ. ಯಾರೂ ಕೂಡ ಶಿಫಾರಸು ಮಾಡಿಸಲು ರಾಜಕಾರಣಿಗಳ ಅಥವಾ ಪ್ರಭಾವಿಗಳ ಮನೆ ಬಾಗಿಲಿಗೆ ಹೋಗಬಾರದು. ಅರ್ಹತೆ ಮತ್ತು ನಿಯಮದ ಪ್ರಕಾರವೇ ಎಲ್ಲವೂ ನಡೆಯಬೇಕು ಎಂದು ಸಿಎಂ ಖಡಕ್ ಸೂಚನೆ ನೀಡಿದರು.
ರೋಗಿಗಳಿಗೆ ಜಾತಿ ಇಲ್ಲ, ವೈದ್ಯರಿಗೆ ಧರ್ಮ ಇಲ್ಲ
ಆರೋಗ್ಯ ಇಲಾಖೆಗೆ ಸೇರ್ಪಡೆಯಾಗುವವರು ಕೇವಲ ಇದನ್ನು ಒಂದು ವೃತ್ತಿಯನ್ನಾಗಿ ನೋಡದೆ, ಇದೊಂದು ಪವಿತ್ರ ಸೇವೆ ಎಂದು ಭಾವಿಸಬೇಕು. ಕಾಯಿಲೆ ಬಂದಾಗ ಯಾರಿಗೂ ಜಾತಿ ನೆನಪಾಗುವುದಿಲ್ಲ. ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ರಕ್ತ ಬೇಕಾದಾಗ ದಾನಿಯ ಧರ್ಮ ಯಾವುದೆಂದು ಯಾರೂ ಕೇಳುವುದಿಲ್ಲ. ಮುಸ್ಲಿಂ ಅಥವಾ ಕ್ರೈಸ್ತರು ನೀಡಿದ ರಕ್ತವಾದರೂ ಸರಿ, ಅದನ್ನು ನಮ್ಮ ದೇಹಕ್ಕೆ ಸೇರಿಸಿಕೊಳ್ಳುತ್ತೇವೆ. ಆದರೆ ಗುಣಮುಖರಾದ ತಕ್ಷಣ ಮತ್ತೆ ಜಾತಿ, ಧರ್ಮದ ಭೇದ ಎಣಿಸಲು ಶುರುಮಾಡುತ್ತಾರೆ. ವೈದ್ಯಕೀಯ ಸಿಬ್ಬಂದಿ ತಮ್ಮ ಜಾತಿ ಮತ್ತು ಧರ್ಮವನ್ನು ಮನೆಯಲ್ಲೇ ಬಿಟ್ಟು ಬಂದು, ಆಸ್ಪತ್ರೆಗೆ ಬರುವ ರೋಗಿಗಳನ್ನು ಮಾನವೀಯತೆಯಿಂದ ಕಾಣಬೇಕು ಎಂದು ಕಿವಿಮಾತು ಹೇಳಿದರು.
ಹಂತ ಹಂತವಾಗಿ ಹುದ್ದೆಗಳ ಭರ್ತಿ
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು ಎರಡೂವರೆ ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಒಳ ಮೀಸಲಾತಿ ಜಾರಿಯ ಕಾರಣದಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ವಲ್ಪ ವಿಳಂಬವಾಗಿತ್ತು. ಈಗ ಅದೆಲ್ಲವನ್ನೂ ಸರಿಪಡಿಸಿಕೊಂಡು, ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯಂತಹ ಅಗತ್ಯ ಸೇವೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆದ್ಯತೆ ನೀಡಿ ಹಂತ ಹಂತವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಸಿಎಂ ಭರವಸೆ ನೀಡಿದರು.








