ಬಿಗ್ ಬಾಸ್ ಸೀಸನ್ 12ರ ಅಖಾಡದಲ್ಲಿ ಕಿಚ್ಚು ಹಚ್ಚಿದ್ದ ಜೋಡಿ, ಹೊರಬಂದ ಮೇಲೂ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸದ್ದು ಮಾಡ್ತಿರೋದು ದೋಸ್ತಿಯಿಂದಲ್ಲ, ಬದಲಾಗಿ ದಿಢೀರ್ ಬ್ರೇಕಪ್ ನಿಂದ! ಹೌದು, ದೊಡ್ಮನೆಯ ವಿನ್ನರ್ ಪಟ್ಟಕ್ಕೇರಿ ನಾಡಿನಾದ್ಯಂತ ಟ್ರೆಂಡಿಂಗ್ ನಲ್ಲಿರುವ ನಲ್ಲಿಮೂಳೆ ಸ್ಟಾರ್ ಗಿಲ್ಲಿ ನಟನಿಗೆ, ಅವನ ಆಪ್ತಮಿತ್ರ ಮ್ಯೂಟೆಂಟ್ ರಘು ಶಾಕ್ ನೀಡಿದ್ದಾರೆ. ಇಷ್ಟು ದಿನ ಗಿಲ್ಲಿಯ ಆಟಾಟೋಪ, ಕ್ವಾಟ್ಲೆಗಳನ್ನು ಸಹಿಸಿಕೊಂಡಿದ್ದ ರಘು, ಇದೀಗ ಇವನ ಸಹವಾಸವೇ ಸಾಕು ಎಂದು ಗುಡ್ ಬೈ ಹೇಳಿದ್ದಾರಂತೆ. ಹಾಗಾದ್ರೆ ಈ ಕುಚಿಕು ಗೆಳೆಯರ ನಡುವೆ ಬೆಂಕಿ ಹಚ್ಚಿದ್ಯಾರು?
ವಿನ್ನರ್ ಪಟ್ಟ ಸಿಕ್ಕರೂ ಉಳಿಯಲಿಲ್ಲ ಸ್ನೇಹದ ಕೊಂಡಿ
ಬಿಗ್ ಬಾಸ್ ಕಿರೀಟ ತೊಟ್ಟ ಗಿಲ್ಲಿ ನಟನ ಹವಾ ರಾಜ್ಯಾದ್ಯಂತ ಜೋರಾಗಿದೆ. ಗಿಲ್ಲಿ ಹೋದಲ್ಲೆಲ್ಲಾ ಜನವೋ ಜನ. ಆದರೆ ವಿಪರ್ಯಾಸ ಅಂದ್ರೆ, ಲಕ್ಷಾಂತರ ಜನರ ಮನಸ್ಸು ಗೆದ್ದ ಗಿಲ್ಲಿಗೆ ತನ್ನದೇ ಮನೆಯಲ್ಲಿದ್ದ ಒಂಟಿ ಮನೆ ಗೆಳೆಯ ರಘು ಮನಸ್ಸು ಉಳಿಸಿಕೊಳ್ಳೋಕೆ ಆಗಿಲ್ಲ. ದೊಡ್ಮನೆಯೊಳಗೆ ಇದ್ದಾಗ ಎದುರಾಳಿಗಳ ತೇಜೋವಧೆ ಮಾಡಿ, ಮಾತಿನಲ್ಲೇ ಚುಚ್ಚಿ ಆಟ ಆಡಿದ್ದ ಗಿಲ್ಲಿ, ಮನೆಯಿಂದ ಹೊರಬಂದ ಮೇಲೂ ಅದೇ ವರ್ತನೆ ಮುಂದುವರಿಸಿದ್ದಾರಾ? ಎಂಬ ಅನುಮಾನ ಶುರುವಾಗಿದೆ. ಯಾಕಂದ್ರೆ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಸಂಪಾದಿಸಿದ್ದ ಸ್ನೇಹಗಳು ಒಂದೊಂದಾಗಿ ಕಳಚಿಕೊಳ್ಳುತ್ತಿವೆ.
ಟಾಮ್ ಆಂಡ್ ಜೆರ್ರಿ ಜೋಡಿ
ಬಿಗ್ ಬಾಸ್ ಮನೆಯೊಳಗೆ ಇದ್ದಷ್ಟು ದಿನ ಗಿಲ್ಲಿ ಮತ್ತು ರಘು ಜೋಡಿ ಅಂದ್ರೆ ಅದು ಟಾಮ್ ಆಂಡ್ ಜೆರ್ರಿ ಇದ್ದಹಾಗೆ. ರಘು ಸಿಟ್ಟಾದರೂ, ಗಿಲ್ಲಿ ಕಾಟ ಕೊಟ್ಟರೂ ದಿನದ ಕೊನೆಯಲ್ಲಿ ಒಂದಾಗುತ್ತಿದ್ದರು. ಇವರಿಬ್ಬರ ಈ ಕ್ಯೂಟ್ ಕಿತ್ತಾಟವನ್ನು ಜನ ಕೂಡ ಎಂಜಾಯ್ ಮಾಡಿದ್ರು. ರಘು ಕೂಡ ಗಿಲ್ಲಿಯನ್ನು ತಮ್ಮನಂತೆ ಕಂಡಿದ್ದರು. ಆದರೆ ಶೋ ಮುಗಿದು ಹೊರಬಂದ ಮೇಲೆ ಕಥೆಯೇ ಬದಲಾಗಿದೆ. ಗಿಲ್ಲಿಯ ವರ್ತನೆಗೆ ಬೇಸತ್ತ ರಘು, ಈಗ ಆತನಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.
ಫ್ರೆಂಡ್ಸ್ ಲಿಸ್ಟ್ ನಿಂದ ಗಿಲ್ಲಿಗೆ ಗೇಟ್ ಪಾಸ್
ಸ್ನೇಹ ಅಂದ್ರೆ ಪ್ರಾಣ ಕೊಡೋ ರಘು, ಈಗ ಗಿಲ್ಲಿ ವಿರುದ್ಧ ತಿರುಗಿಬಿದ್ದಿರೋದು ಸೋಶಿಯಲ್ ಮೀಡಿಯಾದಲ್ಲಿ ಸಾಬೀತಾಗಿದೆ. ಹೌದು, ಬಾಡಿ ಬಿಲ್ಡರ್ ರಘು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗಿಲ್ಲಿ ನಟನನ್ನ ಅನ್ ಫಾಲೋ ಮಾಡಿದ್ದಾರೆ! ವಿಶೇಷ ಅಂದ್ರೆ, ಗಿಲ್ಲಿ ಮೊದಲಿನಿಂದಲೂ ರಘು ಅವರನ್ನ ಫಾಲೋ ಮಾಡುತ್ತಿರಲಿಲ್ಲ, ಆದರೆ ರಘು ಮಾತ್ರ ಸ್ನೇಹಕ್ಕೆ ಬೆಲೆ ಕೊಟ್ಟು ಗಿಲ್ಲಿಯನ್ನ ಫಾಲೋ ಮಾಡುತ್ತಿದ್ದರು. ಈಗ ದಿಢೀರ್ ಅಂತ ಅನ್ ಫಾಲೋ ಮಾಡುವ ಮೂಲಕ, ನಮ್ಮಿಬ್ಬರ ದೋಸ್ತಿ ಇಲ್ಲಿಗೆ ಮುಗೀತು ಎಂಬ ಕಡಕ್ ಸಂದೇಶವನ್ನ ರಘು ರವಾನಿಸಿದ್ದಾರೆ.
ಒಟ್ಟಿನಲ್ಲಿ ನಲ್ಲಿಮೂಳೆ ಸ್ಟಾರ್ ನಡೆಗೆ ಮ್ಯೂಟೆಂಟ್ ರಘು ಕೆಂಡಾಮಂಡಲರಾಗಿರೋದು ಪಕ್ಕಾ ಆಗಿದೆ. ಈ ಇಬ್ಬರ ನಡುವೆ ನಿಜವಾಗ್ಲೂ ನಡೆದಿದ್ದೇನು? ಗಿಲ್ಲಿಯ ಯಾವ ಮಾತು ರಘುಗೆ ಇಷ್ಟವಾಗಲಿಲ್ಲ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಅಲ್ಲಿಯವರೆಗೂ ಗಿಲ್ಲಿ ಫ್ಯಾನ್ಸ್ ಮಾತ್ರ ತಲೆ ಕೆಡಿಸಿಕೊಂಡು ಕೂರೋದು ತಪ್ಪಲ್ಲ.








