ಮಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇತಿಹಾಸದ ವಿಚಾರಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚುನಾವಣಾ ಸೋಲು ಮತ್ತು ಜವಾಹರಲಾಲ್ ನೆಹರು ಅವರ ಪಾತ್ರದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆಗೆ ಛಲವಾದಿ ನಾರಾಯಣಸ್ವಾಮಿ ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಛಲವಾದಿ ನಾರಾಯಣಸ್ವಾಮಿ, ಸಚಿವರಿಗೆ ಇತಿಹಾಸದ ನೈಜ ಅರಿವಿಲ್ಲ ಎಂದು ಕಿಚಾಯಿಸಿದ್ದು, ಅಂಬೇಡ್ಕರ್ ಅವರನ್ನು ಸೋಲಿಸಿದ ಕಾಂಗ್ರೆಸ್ ಕುತಂತ್ರವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಗೂಗಲ್ ಬೇಬಿಯಂತೆ ವರ್ತಿಸುವುದು ಶೋಭೆಯಲ್ಲ
ಸಚಿವರ ವಿರುದ್ಧ ವಾಗ್ದಾಳಿ ನಡೆಸಿರುವ ನಾರಾಯಣಸ್ವಾಮಿ, ಕೇವಲ ತಪ್ಪು ಮಾಹಿತಿಯ ತುಣುಕುಗಳನ್ನು ನೀಡುತ್ತಾ, ತಾವು ಹೇಳುವುದೆಲ್ಲವೂ ಸತ್ಯವೆಂದು ಬಿಂಬಿಸುವುದು ಜಾಣತನವಲ್ಲ. ಸತ್ಯದ ಅರಿವಿರುವುದು ಮುಖ್ಯ. ಮಾಹಿತಿ ನೀಡುವಾಗ ಕೇವಲ ಗೂಗಲ್ ಬೇಬಿಯಂತೆ ವರ್ತಿಸಿದರೆ ಸಾಲದು, ನೀಡುವ ಮಾಹಿತಿ ಸ್ಪಷ್ಟ ಮತ್ತು ಸತ್ಯವಾಗಿರಬೇಕು ಎಂದು ಸಲಹೆ ನೀಡಿದ್ದಾರೆ. ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಸತ್ಯ ತಿಳಿಯುತ್ತದೆ ಎಂದು ಅವರು ಸಚಿವರಿಗೆ ಪಾಠ ಮಾಡಿದ್ದಾರೆ.
ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ ಕುತಂತ್ರವೇ ಕಾರಣ
ಬಾಬಾಸಾಹೇಬರನ್ನು ಕಾಂಗ್ರೆಸ್ ಪಕ್ಷವು ಹಂತ ಹಂತವಾಗಿ ಅಪಮಾನ ಮಾಡಿದ್ದಲ್ಲದೆ, ಅವರ ಚುನಾವಣಾ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂಬುದು ಐತಿಹಾಸಿಕ ಸತ್ಯ. ಇದಕ್ಕೆ ಸಾಕ್ಷಿಯಾಗಿ ಸ್ವತಃ ನಿಮ್ಮದೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ರಮೇಶ್ ಕುಮಾರ್ ಅವರೇ ಸದನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಬಾಬಾಸಾಹೇಬರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷವೇ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳಲು ಎದೆಗಾರಿಕೆ ಬೇಕು. ಆದರೆ ಬಾಬಾಸಾಹೇಬರ ಸೋಲು ನಮ್ಮ ಕಾಂಗ್ರೆಸ್ ಕುತಂತ್ರದಿಂದಲೇ ಆಗಿದ್ದು ಎಂದು ಹೆಮ್ಮೆಯಿಂದ ಒಪ್ಪಿಕೊಳ್ಳುವ ಮೂಲಕ ನೀವೇ ನಿಜವಾದ ಧೈರ್ಯಶಾಲಿಗಳು ಎಂದು ವ್ಯಂಗ್ಯವಾಡಿದ್ದಾರೆ.
ವಿದೇಶಿ ಮಹಿಳೆಗೆ ನೆಹರು ಬರೆದ ಪತ್ರದ ಉಲ್ಲೇಖ
ತಮ್ಮ ವಾದಕ್ಕೆ ಪೂರಕವಾಗಿ ಮತ್ತೊಂದು ಗಂಭೀರ ಆರೋಪ ಮಾಡಿರುವ ಛಲವಾದಿ ನಾರಾಯಣಸ್ವಾಮಿ, ಸಚಿವರಿಗೆ ನೇರ ಸವಾಲು ಹಾಕಿದ್ದಾರೆ. ಸಹೋದರ ಪ್ರಿಯಾಂಕ್ ಖರ್ಗೆ ಅವರೇ, ವಿತಂಡವಾದ ಬಿಡಿ. ಬಾಬಾಸಾಹೇಬರ ಸೋಲನ್ನು ಸನ್ಮಾನ್ಯ ನೆಹರು ರವರು ವಿದೇಶಿ ಮಹಿಳೆಗೆ ಪತ್ರ ಬರೆಯುವ ಮೂಲಕ ಸಂಭ್ರಮಿಸಿದ್ದು ನಿಜವಲ್ಲವೇ? ಇದನ್ನು ನೀವು ಒಪ್ಪಿಕೊಳ್ಳುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಮೊದಲು ನನ್ನ ಈ ಸವಾಲನ್ನು ಸ್ವೀಕರಿಸಿ ನಿಮ್ಮ ಸುಳ್ಳನ್ನು ಸತ್ಯವೆಂದು ಸಾಬೀತುಪಡಿಸಿ ಎಂದು ಸವಾಲೆಸೆದಿದ್ದಾರೆ.
ನನ್ನ ರಾಜೀನಾಮೆ ಕೇಳುವುದು ಹಗಲುಗನಸು
ಇದೇ ವೇಳೆ ತಮ್ಮ ರಾಜೀನಾಮೆ ಬಗ್ಗೆ ಮಾತನಾಡಿದ್ದ ಸಚಿವರಿಗೆ ಟಾಂಗ್ ನೀಡಿರುವ ಅವರು, ಇತಿಹಾಸದ ಸತ್ಯಗಳನ್ನು ಸಾಬೀತುಪಡಿಸುವವರೆಗೆ ನನ್ನ ರಾಜೀನಾಮೆಯ ಬಗ್ಗೆ ನೀವು ಕಾಣುತ್ತಿರುವ ಕನಸು ಕೇವಲ ಹಗಲುಗನಸಾಗಿಯೇ ಉಳಿಯುತ್ತದೆ. ಬಾಬಾಸಾಹೇಬರನ್ನು ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡಿದ್ದು ಕುತಂತ್ರಿ ಕಾಂಗ್ರೆಸ್ ಎಂಬುದು ಅಜರಾಮರ ಸತ್ಯ. ಸತ್ಯವನ್ನು ಎಷ್ಟೇ ಮರೆಮಾಚಿದರೂ ಅದು ಸಾಯುವುದಿಲ್ಲ ಎಂಬ ಅರಿವಿರಲಿ ಎಂದು ಎಚ್ಚರಿಸಿದ್ದಾರೆ.
ಇಲಾಖೆಯ ಕಡೆ ಗಮನ ಕೊಡಿ
ಅಂತಿಮವಾಗಿ ಸಚಿವರಿಗೆ ಕಿವಿಮಾತು ಹೇಳಿರುವ ಛಲವಾದಿ, ಸಹೋದರನಾಗಿ ನಿಮಗೆ ನನ್ನದೊಂದು ಕೊನೆಯ ಮಾತು, ಇನ್ನಾದರೂ ನೀವು ವಾಸ್ತವವನ್ನು ಅರಿತು ಪ್ರಬುದ್ಧತೆಯಿಂದ ವರ್ತಿಸುವುದನ್ನು ಕಲಿಯಿರಿ. ನಿಮ್ಮ ಇಲಾಖೆಯನ್ನು ದಕ್ಷತೆಯಿಂದ ಮುನ್ನಡೆಸುವ ಕಡೆಗೆ ಗಮನ ಕೊಡಿ. ಅನಗತ್ಯ ವಿತಂಡವಾದ ಮತ್ತು ಅಪಹಾಸ್ಯಕ್ಕೆ ಗುರಿಯಾಗುವ ನಡವಳಿಕೆಗಳನ್ನು ಬಿಡಿ ಎಂದು ಸಲಹೆ ನೀಡಿದ್ದಾರೆ.







