ಬೆಂಗಳೂರು:ರಾಜ್ಯದ ಸರ್ಕಾರಿ ನೌಕರರು ಮತ್ತು ಶಿಕ್ಷಕರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಹಳೆ ಪಿಂಚಣಿ ಯೋಜನೆ (OPS) ಮರುಜಾರಿಯ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಹಾಗೂ ಅಷ್ಟೇ ನಿರಾಶಾದಾಯಕ ಹೇಳಿಕೆಯೊಂದನ್ನು ನೀಡಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಸುವರ್ಣ ಮಹೋತ್ಸವ ಹಾಗೂ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಪಿಂಚಣಿ ವಿಚಾರದಲ್ಲಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಪಿಂಚಣಿ ಬಗ್ಗೆ ಈಗ ಚರ್ಚೆಯೇ ಬೇಡ
ಶಿಕ್ಷಕರ ಸಮುದಾಯದ ಪ್ರಮುಖ ಬೇಡಿಕೆಯಾದ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸುವ ವಿಚಾರವಾಗಿ ಮಾತನಾಡಿದ ಡಿಸಿಎಂ, ಸರ್ಕಾರವು ಆರ್ಥಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಒತ್ತಡದಲ್ಲಿದೆ ಎಂಬ ಸುಳಿವು ನೀಡಿದರು. ಈಗಾಗಲೇ ನಾವು ಸುಸ್ತಾಗಿದ್ದೇವೆ. ಹೀಗಿರುವಾಗ ಹೊಸ ಪಿಂಚಣಿ ಅಥವಾ ಹಳೆ ಪಿಂಚಣಿಯ ಬಗ್ಗೆ ಸದ್ಯಕ್ಕೆ ಚರ್ಚೆ ಬೇಡ. ಆ ವಿಚಾರವನ್ನು ಈಗ ಪ್ರಸ್ತಾಪಿಸುವುದು ಸೂಕ್ತವಲ್ಲ ಎಂದು ನೇರವಾಗಿಯೇ ಹೇಳುವ ಮೂಲಕ, ಒಪಿಎಸ್ ಜಾರಿಯ ನಿರೀಕ್ಷೆಯಲ್ಲಿದ್ದ ನೌಕರರಿಗೆ ಶಾಕ್ ನೀಡಿದರು.
ಶಿಕ್ಷಕರಿಗೆ ಸಿಹಿಸುದ್ದಿ: 56 ಸಾವಿರ ಹುದ್ದೆಗಳ ನೇಮಕಕ್ಕೆ ಸಿದ್ಧತೆ
ಪಿಂಚಣಿ ವಿಚಾರದಲ್ಲಿ ನಿರಾಸೆ ಮೂಡಿಸಿದರೂ, ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಡಿಕೆಶಿ ಸಿಹಿಸುದ್ದಿ ನೀಡಿದರು. ರಾಜ್ಯದಲ್ಲಿ ಖಾಲಿ ಇರುವ ಸುಮಾರು ಒಂದು ಲಕ್ಷ ಶಿಕ್ಷಕರ ಹುದ್ದೆಗಳ ಭರ್ತಿಗೆ ಸರ್ಕಾರ ಚಿಂತನೆ ನಡೆಸಿದೆ. ಮೊದಲ ಹಂತದಲ್ಲಿ 56 ಸಾವಿರ ಶಿಕ್ಷಕರ ನೇಮಕಾತಿ ಸಂಬಂಧ ಸಚಿವ ಸಂಪುಟದಲ್ಲಿ ಬರೋಬ್ಬರಿ 5 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಲಾಗಿದೆ. ಆದರೆ ಒಳ ಮೀಸಲಾತಿಯ ಗೊಂದಲಗಳು, ಸಾಧಕ-ಬಾಧಕಗಳು ಹಾಗೂ ನ್ಯಾಯಾಲಯದ ತೀರ್ಪುಗಳ ಹಿನ್ನೆಲೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದು, ಸಮಾಲೋಚನೆಗಳು ಅಂತಿಮ ಹಂತದಲ್ಲಿವೆ ಎಂದು ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆಯಿಂದ ವಿನಾಯಿತಿ ಇಲ್ಲ
ಶಿಕ್ಷಕರನ್ನು ಬೋಧಕೇತರ ಕೆಲಸಗಳಿಂದ, ವಿಶೇಷವಾಗಿ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಮುಕ್ತಗೊಳಿಸಬೇಕು ಎಂಬ ಶಿಕ್ಷಕರ ಸಂಘದ 26 ಬೇಡಿಕೆಗಳ ಪೈಕಿ ಒಂದನ್ನು ಡಿಕೆಶಿ ಕಡಾಖಂಡಿತವಾಗಿ ತಳ್ಳಿಹಾಕಿದರು. ಈ ಕೆಲಸವನ್ನು ಬೇರೆಯವರಿಗೆ ವಹಿಸಿದರೆ ಅದರ ದುರುಪಯೋಗವಾಗುವ ಸಾಧ್ಯತೆಗಳಿವೆ. ಶಿಕ್ಷಕರ ಮೇಲೆ ಸಮಾಜಕ್ಕೆ ಮತ್ತು ಸರ್ಕಾರಕ್ಕೆ ನಂಬಿಕೆ ಇದೆ. ಹೀಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಶಿಕ್ಷಕರೇ ನಿರ್ವಹಿಸಬೇಕು ಎಂದು ಒತ್ತಿ ಹೇಳಿದರು.
ಶಿಕ್ಷಕರ ಸಂಘಕ್ಕೆ ಬೆಂಗಳೂರಿನಲ್ಲಿ ಜಾಗ
ಶಿಕ್ಷಕರ ಸಂಘದ ಮತ್ತೊಂದು ಪ್ರಮುಖ ಬೇಡಿಕೆಗೆ ಸ್ಪಂದಿಸಿದ ಉಪಮುಖ್ಯಮಂತ್ರಿಗಳು, ಬೆಂಗಳೂರಿನಲ್ಲಿ ಸಂಘದ ಕಟ್ಟಡ ನಿರ್ಮಾಣಕ್ಕೆ ಜಾಗ ಒದಗಿಸುವುದು ನಮ್ಮ ವ್ಯಾಪ್ತಿಯಲ್ಲಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ನಿವೇಶನ ಒದಗಿಸುವ ಭರವಸೆ ನೀಡಿದರು.
ಗ್ರಾಮೀಣ ಶಿಕ್ಷಣಕ್ಕೆ ಸಿಎಸ್‌ಆರ್ ಹಣದ ಬಲ
ಗ್ರಾಮೀಣ ಭಾಗದ ಶಾಲಾ ಮಕ್ಕಳು ನಗರಗಳಿಗೆ ವಲಸೆ ಬರುವುದನ್ನು ತಪ್ಪಿಸಲು ಸರ್ಕಾರ ಬದ್ಧವಾಗಿದೆ. ಸಾಮಾಜಿಕ ಹೊಣೆಗಾರಿಕೆ ನಿಧಿ (CSR) ಅಡಿ ರಾಜ್ಯದಲ್ಲಿ ಸುಮಾರು 8 ಸಾವಿರ ಕೋಟಿ ರೂಪಾಯಿ ಸಂಗ್ರಹವಾಗುತ್ತಿದ್ದು, ಈ ಹಣ ಗ್ರಾಮೀಣ ಭಾಗದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಕ್ಕೆ ಬಳಕೆಯಾಗಬೇಕು. ಹಳ್ಳಿಗಳಲ್ಲಿನ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಮತ್ತು ಸ್ಥಳೀಯವಾಗಿ 90 ಸಾವಿರ ಶಿಕ್ಷಕರನ್ನು ನೇಮಿಸಿಕೊಂಡು ಅಲ್ಲಿಯೇ ಶಾಲೆಗಳನ್ನು ನಡೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ರಾಜಕೀಯದಲ್ಲಿ ಶಿಕ್ಷಕರೇ ನಿರ್ಣಾಯಕ
ರಾಜಕಾರಣದಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು ಎಂದ ಡಿಕೆಶಿ, ಶಿಕ್ಷಕರು ಮನಸ್ಸು ಮಾಡಿದರೆ ಚುನಾವಣೆಯಲ್ಲಿ ಯಾರನ್ನಾದರೂ ಸೋಲಿಸಬಹುದು ಅಥವಾ ಗೆಲ್ಲಿಸಬಹುದು. ಶಿಕ್ಷಕರ ಬದುಕು ಮತ್ತು ತ್ಯಾಗವನ್ನು ನಾವು ಹತ್ತಿರದಿಂದ ಕಂಡಿದ್ದೇವೆ. ಕಾಂಗ್ರೆಸ್ ಸರ್ಕಾರ ಯಾವಾಗಲೂ ಶಿಕ್ಷಕರ ಪರವಾಗಿದ್ದು, ಬಂಗಾರಪ್ಪನವರ ಕಾಲದ ಗ್ರಾಮೀಣ ಕೃಪಾಂಕ ಮತ್ತು ರಾಜೀವ್ ಗಾಂಧಿಯವರ ಕಪ್ಪುಹಲಗೆ ಯೋಜನೆಗಳನ್ನು ಸ್ಮರಿಸಿದರು.
ಅಂತ್ಯದಲ್ಲಿ ತಮ್ಮದೇ ಶೈಲಿಯಲ್ಲಿ ಹಾಸ್ಯ ಚಟಾಕಿ ಹಾರಿಸಿದ ಡಿಕೆಶಿ, ಹೆಚ್ಚು ಕೆಲಸ ಮಾಡಿದರೆ ತಪ್ಪುಗಳಾಗುತ್ತವೆ, ಕೆಲಸವೇ ಮಾಡದಿದ್ದರೆ ತಪ್ಪುಗಳೇ ಆಗುವುದಿಲ್ಲ. ಆದ್ದರಿಂದ ಧೈರ್ಯವಾಗಿ ಕೆಲಸ ಮಾಡಿ. ನಾನೇನು ಮಾತನಾಡಿದರೂ ಕಷ್ಟವಾಗುತ್ತದೆ, ಮಾಧ್ಯಮದವರು ನನ್ನ ಹೇಳಿಕೆಗಳನ್ನೇ ತಿರುಚುತ್ತಾರೆ ಎಂದು ನಗೆ ಬೀರಿದರು.







