ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂದಿನ ದಿನಗಳಲ್ಲಿ ಹೆಮ್ಮಾರಿ ಕೊರೊನಾ ಮಾರಿಹಬ್ಬ ಕಾದಿದೆ ಎಂಬ ಆಘಾತಕಾರಿ ಸಂಗತಿಯನ್ನು ತಜ್ಞರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಎಚ್ಚರಿಸಿದ್ದಾರೆ.
2021ರ ಫೆಬ್ರವರಿ-ಮಾರ್ಚ್ವರೆಗೆ ಅಂದರೆ ಇನ್ನೂ 7-8 ತಿಂಗಳು ಕೊರೊನಾ ಅಟ್ಟಹಾಸ ಮುಂದುವರೆಯಲಿದೆ ಎಂದು ಆರೋಗ್ಯ ಇಲಾಖೆ ತಜ್ಞರು ನೀಡಿದ 3 ವರದಿಯಲ್ಲಿ ಉಲ್ಲೇಖಿಸಲಾಗಿದೆ.
ತಜ್ಞರ ವರದಿಯ ಮುಖ್ಯಾಂಶಗಳು..!
1. ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹಾಗೂ ಜನರು ಮಾನಸಿಕವಾಗಿ ಸಿದ್ದರಾಗಬೇಕು.
2. ರಾಜ್ಯ ಹಾಗೂ ಬೆಂಗಳೂರಿನಲ್ಲಿ ಈಗ ಇರುವುದು ಆರಂಭವಷ್ಟೇ, ಮುಂದಿನ ಎರಡು ತಿಂಗಳು ಅಂದರೆ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಕೊರೊನಾ ರೌದ್ರಾವತಾರ ಇನ್ನಷ್ಟು ಹೆಚ್ಚಲಿದೆ.
3. ಮುಂದಿನ ಡಿಸೆಂಬರ್ ವರೆಗೂ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಕಡಿಮೆ.
4. ಬೆಂಗಳೂರು ನಗರದಲ್ಲಿ ಕೊರೊನಾ ಹರಡುವಿಕೆ ಮತ್ತಷ್ಟು ಹೆಚ್ಚಲಿದೆ.
5. ರಾಜ್ಯ ಸರ್ಕಾರ ಕೊರೊನಾ ಕೇರ್ ಸೆಂಟರ್ ಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಬೇಕು.
ರಾಜ್ಯ ಸರ್ಕಾರ ಲಾಕ್ಡೌನ್ ಮಾಡಿದ್ದರೂ ಕೊರೊನಾ ಪ್ರಕರಣಗಳ ಸಂಖ್ಯೆ ನಿನ್ನೆ 4 ಸಾವಿರ ಗಡಿ ದಾಟಿದೆ. ಹೆಮ್ಮಾರಿಯಿಂದ ಉಸಿರು ಚೆಲ್ಲಿದವರ ಸಂಖ್ಯೆಯೂ ಸಾವಿರ ಗಡಿ ದಾಟಿದೆ. ಹೀಗಾಗಿ ಜನರು ಮನೆಯಿಂದ ಹೊರಗೆ ಹೋಗುವಾಗ ಆದಷ್ಟು ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.